ಗಾಂಧೀಜಿ ವಿಚಾರಧಾರೆಗಳನ್ನು ತಿಳಿದುಕೊಳ್ಳಿ
ಕೋಲಾರ,ಅ,೩-ಗಾಂಧೀಜಿ ಕೇವಲ ವ್ಯಕ್ತಿಯಲ್ಲ ಜಾಗತಿಕ ಮಟ್ಟದ ಅಧ್ಯಯನ ವಿಷಯ ಅವರ ವಿಚಾರಧಾರೆಗಳು ಸಾರ್ವತ್ರಿಕ ಸತ್ಯ ಹಾಗೂ ಸಮನ್ವಯದ ಸಂಕೇತ ಶಾಂತಿದೂತನನ್ನು ಭಾರತೀಯ ಯುವಕರು ಸರಿಯಾದ ಕ್ರಮದಲ್ಲಿ ಅಧ್ಯಯನ ಮಾಡುವುದು ಅಗತ್ಯ ಎಂದು ಮುಳಬಾಗಿಲು ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರಹಿಮ್ ಶರೀಫ್ ಅಭಿಪ್ರಾಯಪಟ್ಟರು.
ಮುಳಬಾಗಿಲು ತಾಲೂಕಿನ ಮಲ್ಲನಾಯಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಗಾಂಧಿ ಹಾಗೂ ಲಾಲ ಬಹುದ್ದೂರ್ ಶಾಸ್ತ್ರಿಯವರ ಜಯಂತಿಯ ಸಮಾರಂಭದಲ್ಲಿ ಗಿಡ ನೀಡುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು.
ಗಾಂಧೀಜಿಯವರು ಜಗತ್ತಿನ ನಾಯಕರು ಎಂಬುದಕ್ಕೆ ನಿದರ್ಶನವೆಂಬಂತೆ ಸ್ಪೀಡಸ್ ಅಧ್ಯಯನ ವಿದ್ಯಾರ್ಥಿನಿಯರು ಕೇಳಿದ ಮೂರು ಪ್ರಶ್ನೆಗಳು ಸಣ್ಣ ವಿಷಯಕ್ಕೂ ಆಯುಧಗಳನ್ನು ಹಿಡಿದು ಹೋರಾಡುತ್ತಿದ್ದ ಭಾರತೀಯರನ್ನು ಗಾಂಧೀಜಿಯವರು ಹೇಗೆ ಅಹಿಂಸಾ ವಾದಿಗಳಾಗಿಸಿದರು?. ಮೌಂಟ್ ಬ್ಯಾಟನ್ ದೃಷ್ಟಿಯಲ್ಲಿ ಗಾಂಧಿ ಭಾರತೀಯರ ನಾಯಕ ಹಾಗೂ ಜೀಸಸ್ ರ ರೀತಿ ಕಂಡಿದ್ದು ಹೇಗೆ, ಗಾಂಧೀಜಿ ಮರಣ ಸಂಭವಿಸಿದಾಗ ವಿಶ್ವಸಂಸ್ಥೆಯಲ್ಲಿ ಎಲ್ಲಾ ರಾಷ್ಟ್ರಗಳ ಧ್ವಜಗಳನ್ನು ಅರ್ಧಕ್ಕಿಳಿಸಿದ್ದು ಏಕೆ ಎಂಬ ವಿಷಯಗಳ ಮೇಲೆ ಅಧ್ಯಯನ ಮಾಡಲು ಭಾರತಕ್ಕೆ ಬಂದಿದ್ದೇವೆ ಎಂದು ಕೇಳಿದಾಗ ವಿದೇಶಿಗರ ಮನಸ್ಸಿನಲ್ಲಿ ಗಾಂಧೀಜಿಯವರದ್ದು ಸಾಮಾನ್ಯರ ಅಳತೆ ಗೋಲಿಗೆ ಸಿಗದ ಅದ್ವಿತೀಯ ವ್ಯಕ್ತಿತ್ವ ಎಂದೆನಿಸುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಭಾರತೀಯ ಯುವಕರು ಗಾಂಧೀಜಿಯವರನ್ನು ಸರಿಯಾಗಿ ಅರ್ಥೈಸಿಕೊಳ್ಳದಿರುವುದು ಖಂಡನೀಯ, ಜಗತ್ತಿನ ಉಳಿವಿಗೆ ಗಾಂಧಿ ವಿಚಾರಧಾರೆ ಅಗತ್ಯ ಎಂದರು.
ಸಮಾರಂಭದಲ್ಲಿ ಹಾಜರಿದ್ದ ವಾರಧಿ ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಡಾ. ಮಂಜುನಾಥ್ ರೆಡ್ಡಿ ಮಾತನಾಡಿ ಈಗಿನ ವಿದ್ಯಾರ್ಥಿಗಳು, ಯುವಕರು ವಿಷಯವನ್ನು ಸರಿಯಾಗಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಂಡಾಗ ಮುಂದಿನ ಭವಿಷ್ಯವನ್ನು ಸರಿಯಾಗಿ ರೂಪಿಸಿಕೊಳ್ಳಬಹುದು ಎಂದರು.
ಶಾಲೆಯಲ್ಲಿ ಶ್ರಮದಾನ ಸ್ವಚ್ಛತೆ ಅದರೊಂದಿಗೆ ಸುಮಾರು ೫೦ ಗಿಡಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ಪಡೆಯಲಾಯಿತು.
ಸಮಾರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಬಿ.ಎಂ.ಮುನಿರಾಮಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಮುರಳಿಧರ್, ಸದಸ್ಯರುಗಳಾದ ಪದ್ಮಮ್ಮ, ವಿಮಲ, ಶಾಲಾ ಸಿಬ್ಬಂದಿವರಾದ ಚಲಪತಿ,ವಿಜಯಲಕ್ಷ್ಮಿ, ಸೋಮಲತಾ,ಸುಬ್ರಮಣಿ ಮತ್ತಿತರರು ಭಾಗವಹಿಸಿದ್ದರು.