ಗ್ರಂಥಾಲಯವು ವಿಶ್ವವಿದ್ಯಾಲಯದ ಹೃದಯ : ಕುಲಪತಿ ಪ್ರೊ.ಬಿ.ಎಸ್.ಬಿರಾದಾರ
ಬೀದರ:ಆ.31: ವಿಶ್ವವಿದ್ಯಾಲಯದ ಹೃದಯ ಹಾಗೂ ಕಿರೀಟವೆಂದರೆ ವಿಶ್ವವಿದ್ಯಾಲಯದ ಗ್ರಂಥಾಲಯವಾಗಿರುತ್ತದೆ. ಗ್ರಂಥಾಲಯದಿಂದ ಜ್ಞಾನದಾಹವನ್ನು ನೀಗಿಸಿಕೊಳ್ಳಲು ಬರುವ ಸರ್ವರಿಗೂ ಗ್ರಂಥಾಲಯ ಅದ್ಭುತ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ.ಬಿ.ಎಸ್.ಬಿರಾದಾರರವರು ಹೇಳಿದರು.
ಅವರು ಬೀದರ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಪ್ರಯುಕ್ತ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರಗೋಷ್ಠಿಯ ಅಧ್ಯಕ್ಷತೆವಹಿಸಿ ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಗ್ರಂಥಪಾಲಕರಾದ ಡಾ.ಗಣಪತಿ.ಝ.ಸಿಂದೆಯವರ ಕುರಿತಾದ ‘ಗ್ರಂಥಾಲಯದ ಗಜಸಿರಿ ಗಣಪತಿ ಸಿಂದೆ’ ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಅವರು ಮುಂದುವರೆದು ಮಾತನಾಡುತ್ತಾ ಗ್ರಂಥಾಲಯ ವಿಜ್ಞಾನಕ್ಕಾಗಿ ಅನೇಕ ಮಹನೀಯರು ಶ್ರಮಿಸಿದ್ದಾರೆ. ಅಂಥವರಲ್ಲಿ ಗ್ರಂಥಾಲಯ ವಿಜ್ಞಾನದ ಪಿತಾಮಹ ಎನಿಸಿಕೊಂಡಂತಹ ಡಾ.ಎಸ್.ಆರ್.ರಂಗನಾಥನ್‍ರವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು. ಗ್ರಂಥಪಾಲಕರು ಇಂದು ಸಮಯಕ್ಕೆ ತಕ್ಕಂತೆ ಹೊಸತನವನ್ನು ಅಳವಡಿಸಿಕೊಳ್ಳುವ ಸವಾಲಿಗೆ ಸಿದ್ಧರಾಗಬೇಕಾಗಿದೆ. ಡಾ.ಗಣಪತಿ ಸಿಂದೆಯವರ ತವರು ನೆಲದಲ್ಲಿ ಅವರ ಕುರಿತಾದ ಗ್ರಂಥ ಬಿಡುಗಡೆಗೊಂಡಿದ್ದು ಅತ್ಯಂತ ಸಂತೋಷದ ಗಳಿಗೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಗ್ರಂಥಪಾಲಕರಾದ ಡಾ.ಗಣಪತಿ ಝ.ಸಿಂದೆಯವರು ಮಾತನಾಡುತ್ತಾ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುವ ಅವಕಾಶ ದೊರೆಯುವುದು ಒಂದು ಭಾಗ್ಯವೆಂದರು. ಪುಸ್ತಕ ಪರಿಚಯಿಸಿದ ಕಲಬುರಗಿಯ ಡಾ.ಅಂಬೇಡ್ಕರ ಪದವಿ ಮಹಾವಿದ್ಯಾಲಯ ನಿವೃತ್ತ ಪ್ರಾಂಶುಪಾಲರಾದ ಡಾ.ಐ.ಎಸ್.ವಿದ್ಯಾಸಾಗರವರು ಮಾತನಾಡುತ್ತ ದೇಶ ನೋಡು ಕೋಶ ಓದು ಎಂಬಂತೆ ಗ್ರಂಥಾಲಯ ಕ್ಷೇತ್ರಕ್ಕೆ ಡಾ.ಗಣಪತಿ ಸಿಂದೆಯವರ ಕೊಡುಗೆ ಅಪಾರವಾಗಿದೆ. ಅವರು ವಿಶ್ವವಿದ್ಯಾಲಯದಲ್ಲಿ ವಿವಿಧ ಸ್ತರದ ಪದಾಧಿಕಾರಿಗಳಾಗಿ, ದುರ್ಬಲರಿಗೆ, ಬಡವರಿಗೆ ಮಾಡಿದ ಕೊಡುಗೆ ಸ್ಮರಣೀಯವೆಂದರು. ಸುಮಾರು 45 ದೇಶಗಳನ್ನು ಸುತ್ತಿರುವ ಡಾ.ಸಿಂದೆಯವರ ಅಪಾರ ಜ್ಞಾನ ಗುಲಬರ್ಗಾ ವಿಶ್ವವಿದ್ಯಾಲಯದ ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀ ನಾಗಭೂಷಣ ಕಮಠಾಣೆಯವರು ಮಾತನಾಡುತ್ತಾ ಬೀದರ ವಿಶ್ವವಿದ್ಯಾಲಯ ಈ ಭಾಗದ ಮಕ್ಕಳಿಗೆ ವರದಾನವಾಗಿದೆ. ಹೀಗಾಗಿ ಬೀದರ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ವಿಷಯದ ಕುಲಪತಿಗಳು ನಮಗೆ ದೊರತದ್ದು ವರದಾನವಾಗಿದೆ. ಹೀಗಾಗಿ ಎಲ್ಲರೂ ಇಚ್ಛಾಶಕ್ತಿಯಿಂದ ಬೀದರ ವಿಶ್ವವಿದ್ಯಾಲಯವನ್ನು ಒಂದು ಮಾದರಿ ವಿಶ್ವವಿದ್ಯಾಲಯವನ್ನಾಗಿ ಮಾಡೋಣವೆಂದು ನುಡಿದರು. ಇನ್ನೋರ್ವ ಸಿಂಡಿಕೇಟ್ ಸದಸ್ಯರಾದ ಶ್ರೀ ಶಾಂತಲಿಂಗ ಸಾವಳಗಿಯವರು ಮಾತನಾಡುತ್ತಾ ವಿದ್ಯಾರ್ಥಿಗಳು ಹೆಚ್ಚಿನ ಸಮಯ ಗ್ರಂಥಾಲಯದಲ್ಲಿ ಕಳೆಯಬೇಕು. ಪುಸ್ತಕಗಳು ಮಾನವನನ್ನು ಮಹಾಮಾನವನನ್ನಾಗಿ ರೂಪಿಸುತ್ತವೆ. ಹೀಗಾಗಿ ಯುವಕರು ಪುಸ್ತಕಗಳನ್ನು ಪ್ರೀತಿಸುವ ಅಗತ್ಯವಿದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಪಾಲಕರಾದ ಡಾ.ಸುರೇಶ ಜಂಗೆಯವರು ಮಾತನಾಡುತ್ತಾ ಇಂದಿನ ಯುಗ ತಂತ್ರಜ್ಞಾನದ ಯುಗವಾಗಿದೆ. ಆದ್ದರಿಂದ ಎಲ್ಲರೂ ತಂತ್ರಜ್ಞಾನದಲ್ಲಿ ನಿಪುಣರಾಗಬೇಕಾಗಿದೆ. ಆ ದಿಸೆಯಲ್ಲಿ ಗ್ರಂಥಪಾಲಕರು ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು.
ಅತಿಥಿಗಳಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಗ್ರಂಥಪಾಲಕರಾದ ಡಾ.ಬಿ.ಆರ್.ರಾಧಾಕೃಷ್ಣರವರು ಮಾತನಾಡುತ್ತಾ ಗ್ರಂಥಾಲಯ ಕ್ಷೇತ್ರಕ್ಕೆ ಡಾ.ಗಣಪತಿ ಸಿಂದೆಯವರಂತಹ ವ್ಯಕ್ತಿಗಳ ಅವಶ್ಯಕತೆಯಿದೆ. ಅವರ ಕೊಡುಗೆ ವಿಶ್ವವಿದ್ಯಾಲಯಕ್ಕೆ, ಸಮಾಜಕ್ಕೆ ಅಪಾರವೆಂದರು. ಇನ್ನೋರ್ವ ಅತಿಥಿಗಳಾಗಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪೆÇ್ರ.ವಿ.ಟಿ.ಕಾಂಬಳೆಯವರು ಮಾತನಾಡುತ್ತಾ ಗ್ರಂಥಾಲಯವು ಸಮಾಜವನ್ನು ಸನ್ಮಾರ್ಗಕ್ಕೆ ಕೊಂಡೊಯ್ಯುವ ಮಹೋನ್ನತ ಕಾರ್ಯ ಮಾಡುತ್ತದೆ, ಹೀಗಾಗಿ ಗ್ರಂಥಾಲಯಗಳ ಅವಶ್ಯಕತೆ ಅವಶ್ಯವಾಗಿದೆ ಎಂದರು. ಕೃತಿಯ ಸಂಪಾದಕರಾದ ಡಾ.ಗಾಂಧೀಜಿ ಮೋಳಕೇರಿಯವರು ಡಾ.ಗಣಪತಿ ಸಿಂದೆಯವರ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಸರ್ವರನ್ನು ಬೀದರ ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀ ಮಹ್ಮದ್ ಶಕೀಲ್ ಕೆ.ಎ.ಎಸ್.ರವರು ಸ್ವಾಗತಿಸಿದರು. ಮೌಲ್ಯಮಾಪನ ಕುಲಸಚಿವರಾದ ಪೆÇ್ರ.ಪರಮೇಶ್ವರ ನಾಯ್ಕ.ಟಿಯವರು ವಂದಿಸಿದರು. ಕು.ಜಯಶ್ರೀ ಗುಡಪಳ್ಳಿಯವರು ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಡಾ.ಶ್ರೀಕೃಷ್ಣ ಚಕ್ರವರ್ತಿಯವರು ನಿರೂಪಿಸಿದರು.
ವಿಚಾರಗೋಷ್ಠಿಯಲ್ಲಿ ಬೀದರ ವಿಶ್ವವಿದ್ಯಾಲಯದ ಸಂಯೋಜಿತ ಮಹಾವಿದ್ಯಾಲಯಗಳ ಗ್ರಂಥಪಾಲಕರು ಪಾಲ್ಗೊಂಡಿದ್ದರು. ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಅನೇಕ ಸಿಬ್ಬಂದಿಗಳು ಹಾಗೂ ಡಾ.ಗಣಪತಿ ಸಿಂದೆಯವರ ಸಂಬಂಧಿಕರು, ಕುಟುಂಬವರ್ಗದವರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಬೀದರ ವಿಶ್ವವಿದ್ಯಾಲಯದ ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.