ಬಿಜೆಪಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಿ: ಶಾಸಕ ಪ್ರಭು ಚವ್ಹಾಣ
ಔರಾದ :ಆ.31: ಭಾರತೀಯ ಜನತಾ ಪಕ್ಷವು ದೇಶಾದ್ಯಂತ ಸೆಪ್ಟೆಂಬರ್ 2ರಿಂದ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದ್ದು, ಔರಾದ(ಬಿ) ವಿಧಾನಸಭಾ ಕ್ಷೇತ್ರದಿಂದ 1.20 ಲಕ್ಷ ಸದಸ್ಯರನ್ನು ಸೇರಿಸುವ ಗುರಿ ಹೊಂದಿದ್ದು, ಪಕ್ಷದ ಕಾರ್ಯತರ್ಕರು ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಶಾಸಕ ಪ್ರಭು.ಬಿ ಚವ್ಹಾಣ ಅವರು ತಿಳಿಸಿದರು.
ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಭಾರತೀಯ ಜನತಾ ಪಕ್ಷ ಔರಾದ(ಬಿ) ಮಂಡಲ ಕಾರ್ಯಕಾರಿಣಿ ಸಭೆ ಹಾಗೂ ಸದಸ್ಯತ್ವ ಅಭಿಯಾನದಲ್ಲಿ ಅವರು ಮಾತನಾಡಿದ ಅವರು ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮುಖಾಂತರ ಪಕ್ಷದ ಸದಸ್ಯರಾಗಿ ಸೇರ್ಪಡೆಯಾಗಲು ವ್ಯವಸ್ಥೆ ಮಾಡಲಾಗಿದೆ. ಕಾರ್ಯಕರ್ತರು ಮೊದಲು ತಮ್ಮ ಮನೆಯ ಸದಸ್ಯರನ್ನು, ನಂತರ ಪಕ್ಕದ ಮನೆಯವರನ್ನು ಬಳಿಕ ಗ್ರಾಮಸ್ಥರನ್ನು ಪಕ್ಷದ ಸದಸ್ಯರನ್ನಾಗಿ ಮಾಡಬೇಕು. ಪಕ್ಷವು ಹಿಂದೆ ವಹಿಸಿದ್ದ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಔರಾದ(ಬಿ) ಕ್ಷೇತ್ರ ಸದಾ ಮುಂಚೂಣಿಯಲ್ಲಿತ್ತು. ಸದಸ್ಯತಾ ಅಭಿಯಾನವನ್ನು ಜಿಲ್ಲೆಯಲ್ಲಿ ಅಷ್ಟೇ ಅಲ್ಲದೇ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುವ ರೀತಿಯಲ್ಲಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸದಸ್ಯತ್ವ ಅಭಿಯಾನವನ್ನು ಪಕ್ಷದ ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸಬೇಕು. ಪ್ರತಿ ಕಾರ್ಯಕರ್ತರು ತಮ್ಮ ಬೂತ್‍ಗಳಲ್ಲಿ ಸಾಧ್ಯವಾದಷ್ಟು ಹೆಚ್ಚು ಸದಸ್ಯರನ್ನು ಸೇರ್ಪಡೆ ಮಾಡಲು ಪ್ರಯತ್ನಿಸಬೇಕು. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು, ನಾನು ಶಾಸಕನಾದ ನಂತರ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು, ಸಾಮಾಜಿಕ ಸೇವೆಗಳ ಬಗ್ಗೆ ತಿಳುವಳಿಕೆ ನೀಡಬೇಕು. ಪಕ್ಷವು ಮಾಡುತ್ತಿರುವ ಕೆಲಸಗಳ ಬಗ್ಗೆ ತಿಳಿಸಿ ಪಕ್ಷದ ಸದಸ್ಯರನ್ನಾಗಿ ಮಾಡಿಕೊಳ್ಳಬೇಕು. ಔರಾದ(ಬಿ) ಕ್ಷೇತ್ರದ ಕಾರ್ಯಕರ್ತರು ನಿಗದಿತ ಗುರಿಗಿಂತ ಹೆಚ್ಚಿನ ಸದಸ್ಯರನ್ನು ಸೇರ್ಪಡೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತೀಯ ಜನತಾ ಪಕ್ಷವು ವಿಶ್ವದಲ್ಲೇ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಪಕ್ಷದಲ್ಲಿ ಸುಮಾರು 18 ಕೋಟಿ ಸದಸ್ಯರನ್ನು ಹೊಂದಿದ್ದು, ಆ ಅಭಿಯಾನದ ಮುಖಾಂತರ ದೇಶಾದ್ಯಂತ 30 ಕೋಟಿ ಸದಸ್ಯರನ್ನು ಸೇರ್ಪಡೆ ಮಾಡುವ ಗುರಿ ಹೊಂದಲಾಗಿದೆ. ದೇಶದ ಪ್ರಧಾನಮಂತ್ರಿಯವರನ್ನು ಒಳಗೊಂಡು ಪಕ್ಷದ ಪ್ರತಿಯೊಬ್ಬರೂ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕ್ಷೇತ್ರದ ಮಹಾಜನತೆಯ ಆಶೀರ್ವಾದಿಂದಾಗಿ ನಾಲ್ಕು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದು, ಎರಡು ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ. ಔರಾದ(ಬಿ) ಕ್ಷೇತ್ರದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ತಂದಿದ್ದೇನೆ. ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ಬಳಿ ಅನುದಾನವಿಲ್ಲ. ಹಾಗಾಗಿ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಔರಾದ(ಬಿ) ಕ್ಷೇತ್ರದ ಸಾಕಷ್ಟು ಯೋಜನೆಗಳು ನಿಂತಿವೆ. ಆದರೂ ಅನುದಾನ ತಂದು ಅಭಿವೃದ್ದಿ ಕೆಲಸಗಳನ್ನು ಮಾಡುತ್ತೇನೆಂದು ಹೇಳಿದರು. ಯಾವಾಗಲೂ ಬಡವರು, ದಲಿತರು, ಹಿಂದುಳಿದವರ ಪರವಾಗಿದ್ದೇನೆಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷ ದಲಿತರಿಗೆ ಅನ್ಯಾಯ ಮಾಡಿದೆ.
ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಕುಟುಕಿದರು.
ಪಕ್ಷ ನನಗೆ ತಾಯಿಯಿದ್ದಂತೆ. ತಾಯಿಗೆ ಯಾವತ್ತೂ ಮೋಸ ಮಾಡುವ ಕೆಲಸ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ಪಕ್ಷಕ್ಕೆ ಕಾರ್ಯಕರ್ತರೇ ಬೆನ್ನೆಲುಬು. ಬಿಜೆಪಿ ಸದಾ ಕಾರ್ಯಕರ್ತರ ಹಿತ ಬಯಸುವ ಪಕ್ಷವಾಗಿದೆ. ನನಗೆ ಕಾರ್ಯಕರ್ತರೇ ಶಕ್ತಿ. ಅವರ ಪ್ರೀತಿ, ಆಶೀರ್ವಾದದಿಂದಾಗಿ ನಾಲ್ಕು ಬಾರಿ ಶಾಸಕನಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ. ಹಾಗಾಗಿ ಪಕ್ಷದ ಕಾರ್ಯಕರ್ತರನ್ನು ಕುಟುಂಬದ ಸದಸ್ಯರಂತೆ ಕಾಣುತ್ತೇನೆ. ಯಾವತ್ತೂ ಅವರ ಕೆಡುಕು ಬಯಸುವುದಿಲ್ಲ. ಅವರ ಏಳಿಗೆಗೆ ಸಹಕರಿಸುತ್ತೇನೆ ಎಂದು ತಿಳಿಸಿದರು.
ಮಾಜಿ ಶಾಸಕರಾದ ಗುಂಡಪ್ಪ ಬಿರಾದಾರ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷವು ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅವರು ಮಾಡಿರುವ ಉತ್ತಮ ಕೆಲಸಗಳು ಪಕ್ಷಕ್ಕೆ ಹೆಚ್ಚಿನ ಬಲ ನೀಡಿವೆ. ಔರಾದ(ಬಿ) ಕ್ಷೇತ್ರದಲ್ಲಿ ಪ್ರಭು ಚವ್ಹಾಣ ಅವರಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗುತ್ತಿವೆ. ಪಕ್ಷವು ಕೂಡ ಸಾಕಷ್ಟು ಬಲವೃದ್ಧಿಯಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಪೀರಪ್ಪ ಔರಾದೆ ಮಾತನಾಡಿ, ಬಿಜೆಪಿ ಪಕ್ಷದಿಂದ ಸದಸ್ಯತ್ವ ಅಭಿಯಾನ ದೇಶಾದ್ಯಂತ ನಡೆಯುತ್ತಿದೆ. ಮೊಬೈಲ್ ಮುಖಾಂತರ 8800002024 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಪಕ್ಷದ ಸದಸ್ಯರಾಗಿ ಸೇರ್ಪಡೆಯಾಗಬಹುದು.
ಸೆಪ್ಟೆಂಬರ್ 2 ರಿಂದ 25ರವರೆಗೆ ಈ ಅಭಿಯಾನ ನಡೆಯಲಿದ್ದು, ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಬೇಕೆಂದು ಹೇಳಿದರು. ಅಲ್ಲದೇ ಅಭಿಯಾನದಲ್ಲಿ ಪಕ್ಷದ ಕಾರ್ಯಕರ್ತರು ಮಾಡಬೇಕಾದ ಜವಾಬ್ದಾರಿಗಳ ಕುರಿತು ವಿವರಣೆ ನೀಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ ಪಾಟೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಅರಹಂದ ಸಾವಳೆ, ಮಂಡಲ ಪ್ರಭಾರಿ ಮಹೇಶ್ವರ ಸ್ವಾಮಿ, ವಸಂತ ಬಿರಾದಾರ, ಮಂಡಲ ಮಾಜಿ ಅಧ್ಯಕ್ಷ ಸುರೇಶ ಭೋಸ್ಲೆ, ಸತೀಷ ಪಾಟೀಲ, ರಮೇಶ ಬಿರಾದಾರ, ಝಾಕೀರ್ ಶೇಕ್, ನೀಲೇಶ ರಕ್ಷಾಳೆ, ಶಿವಾನಂದ ವಡ್ಡೆ, ಬಸವರಾಜ ಪಾಟೀಲ, ಧೊಂಡಿಬಾ ನರೋಟೆ, ರಮೇಶ ಉಪಾಸೆ, ಗಿರೀಶ ವಡೆಯರ್, ಪ್ರಕಾಶ ಅಲ್ಮಾಜೆ, ಬಸವರಾಜ ಸ್ವಾಮಿ ಹೆಡಗಾಪೂರ, ಸಂಜುಕುಮಾರ ಸಜ್ಜನಶೆಟ್ಟೆ, ಬಸವರಾಜ ಹಳ್ಳೆ, ಅಂಬಿಕಾರ ಕೇರಬಾ ಪವಾರ್, ಸಂದ್ಯಾರಾಣಿ ರಾಮ್ ನರೋಟೆ, ಗೀತಾಗೌಡ ಸೇರಿದಂತೆ ಇತರರಿದ್ದರು. ಮಂಡಲ ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಬಂಟಿ ರಾಂಪೂರೆ ನಿರೂಪಿಸಿದರು. ಸಚಿನ ಬಿರಾದಾರ ವಂದಿಸಿದರು.
ನೂನತ ಪದಾಧಿಕಾರಿಗಳಿಗೆ ಸನ್ಮಾನ: ಸಭೆಯಲ್ಲಿ ಪಕ್ಷದ ಜಿಲ್ಲಾ ಪದಾಧಿಕಾಕಾರಿಗಳಾಗಿ ಆಯ್ಕೆಯಾದ ಔರಾದ(ಬಿ) ಕ್ಷೇತ್ರದ ಪ್ರಮುಖರನ್ನು ಸನ್ಮಾನಿಸಲಾಯಿತು