ಅದ್ದೂರಿಯಾಗಿ ಜರುಗಿದ ಊರಮ್ಮ ದೇವಿಯ ಹೊಳೆ ಪೂಜೆ
ಸಂಜೆವಾಣಿವಾರ್ತೆ
ಹರಪನಹಳ್ಳಿ, ಅ,31- ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಊರಮ್ಮ ದೇವಿಯ ಹೊಳೆ ಪೂಜೆಯು ಅದ್ದೂರಿಯಾಗಿ ನಡೆಯಿತು.
ಪ್ರತಿವರ್ಷ ಶ್ರಾವಣ ಮಾಸದ ಕೊನೆಯ ಶುಕ್ರವಾರದಂದು ಈ ಹೊಳೆ ಪೂಜೆಯನ್ನು ಮಾಡಲಾಗುತ್ತದೆ,ಊರಮ್ಮ ದೇವಿಯ ಕೇಲನ್ನು (ಕುಂಭ)ವಿಶ್ವಕರ್ಮ(ಬಡಿಗೇರು)ವಂಶದ ಪೂಜಾರಿ ಒಬ್ಬ ಬೆಳಗ್ಗೆಯಿಂದ ಉಪವಾಸವಿದ್ದು ಊರಮ್ಮ ದೇವಿಯ ಕೇಲನ್ನು ತಲೆಯ ಮೇಲೆ ಹೊತ್ತು ಊರಿನ ಪ್ರಮುಖ ಬೀದಿಗಳಲ್ಲಿ ನಡೆಯುತ್ತಾನೆ.
ಊರಮ್ಮ ದೇವಿಯ ಕೇಲನ್ನು ಹೊಳೆಗೆ ತೆಗೆದುಕೊಂಡು ಹೋಗಿ ಕೇಲಿಗೆ ಮತ್ತು ಕೆರೆ ಗಂಗಮ್ಮಗೆ ಪೂಜೆ, ನೈವೇದ್ಯ ಮಾಡಿ ದೇವಿಗೆ ಉಡಿ ತುಂಬಿ ಪೂಜಾರಿಯ ತಲೆ ಮೇಲೆ ಕೇಲನ್ನು ಇಡುತ್ತಾರೆ.  ನಂತರ ದೇವಿಯ ಕೇಲನ್ನು ಹೊತ್ತ ಪೂಜಾರಿಯು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾನೆ,ಆಗ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಮುಂದೆ ಪೂಜಾರಿ ಹಾಗೂ  ದೇವಿಯ ಕೇಲಿಗೆ ಪೂಜೆ ಮಾಡುವುದು,ಹೂವು, ಹಣ್ಣು, ಕಾಯಿ ಮಾಡಿಸಿ ಕಳಸವನ್ನು ಬೆಳಗುತ್ತಾರೆ.
ಬೆಳಗ್ಗೆಯಿಂದ ದೇವಸ್ಥಾನಕ್ಕೆ ಭಕ್ತರು ಸಮರ್ಪಿಸಿದ ಅಕ್ಕಿ,ಬೇಳೆ, ಬೆಲ್ಲದಿಂದ ಹೋಳಿಗೆ, ಅನ್ನವನ್ನು ದೇವಿಗೆ ನೈವೇದ್ಯ ಮಾಡಲಾಗುತ್ತದೆ, ನಂತರ ಊರಿನ ಎಲ್ಲಾ ಭಕ್ತರಿಗೆ ದೇವಸ್ಥಾನದ ಆವರಣದಲ್ಲಿ ಪ್ರಸಾದವನ್ನು ನೀಡುತ್ತಾರೆ.
ಈ ನಮ್ಮ ಊರಿಗೆ,ಜನರಿಗೆ, ಮಕ್ಕಳಿಗೆ,ದನ ಕರುಗಳಿಗೆ ಯಾವುದೇ ಕಾಯಿಲೆ, ಕಷ್ಟ, ಕಾರ್ಪಣ್ಯಗಳು ಬಾರದಿರಲೆಂದು ಇಡೀ ಊರಿನ ಭಕ್ತರು ಈ ಹೊಳೆ ಪೂಜೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಿ ನಮ್ಮ ಊರನ್ನು ಕಾಯುವ ಊರಮ್ಮ ದೇವಿಯನ್ನು ಸಂಪನ್ನಳಾಗಿಸುತ್ತಾರೆ.
ಈ ಸಮಯದಲ್ಲಿ ವಿವಿಧ ವಾದ್ಯಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾಜಿ ಸಂಸದರಾದ ವೈ. ದೇವೇಂದ್ರಪ್ಪ,ಮಾಜಿ ಜಿ.ಪಂ. ಸದಸ್ಯರಾದ ವೈ.ಡಿ. ಸುಶೀಲಮ್ಮ,
ಮುಖಂಡರಾದ ವೈ.ಡಿ. ಅಣ್ಣಪ್ಪ, ಪ್ರಶಾಂತ್ ಪಾಟೀಲ್,ಶ್ವೇತಾ ಪಾಟೀಲ್,ಲಕ್ಷ್ಮೀದೇವಿ ಅಣ್ಣಪ್ಪ,ಅಡ್ಡಿ ಚನ್ನವೀರಪ್ಪ, ಪೂಜಾರ್ ಮರಿಯಪ್ಪ, ವೈ.ಕೊಟ್ರೇಶ್,ಚಿದಾನಂದಪ್ಪ, ನವೀನ್, ಶಾಂತ್ ಪಾಟೀಲ್,ಸುನೀತಾ ಪಾಟೀಲ್,ಯೋಗೇಶ್,ಚನ್ನಪ್ಪ, ಮೋನೇಶ್,ಬಣಕಾರ್ ಶಿವಕುಮಾರ್,ಬಡಿಗೇರ್ ವಂಶಸ್ಥರು ಹಾಗೂ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.