ಪ್ರಧಾನಿ ದೂರದೃಷ್ಟಿಯ ಪ್ರವಾಸೋದ್ಯಮಕ್ಕೆ ಪೂರಕ ರೈಲ್ವೆ ಸಂಪರ್ಕ ನೀಡಿ
ಸಂಜೆವಾಣಿ ವಾರ್ತೆ
ಹೊಸಪೇಟೆ ಆ31- :2030ರೊಳಗೆ ದೇಶದಲ್ಲಿ ಪ್ರವಾಸೋದ್ಯಮ ಬೆಳವಣಿಗೆಯಾಗಬೇಕು, ಕೋಟ್ಯಾಂತರ ಉದ್ಯೋಗಗಳು ಸೃಷ್ಟಿಯಾಗಬೇಕು ಎಂಬ ಮಹತ್ವದ ದೂರದೃಷ್ಟಿಗೆ ಪೂರಕವಾಗಿ ವಿಜಯನಗರ ರೈಲ್ವೇ ಕ್ರಿಯಾಸಮಿತಿ ಪ್ರಾದೇಶಿಕ ಅಧಿಕಾರಿಗಳಿಗೆ ಮನವಿ ನೀಡಿ ರೈಲ್ವು ಪ್ರವಾಸೋದ್ಯಮಕ್ಕೆ ಒತ್ತು ನೀಡುವಂತೆ ಮನವಿ ಸಲ್ಲಿಸಿದೆ.
ವಿಜಯನಗರ ರೈಲ್ವೇ ಅಭಿವೃದ್ದಿ ಕ್ರಿಯಾ ಸಮಿತಿ ಪದಾಧಿಕಾರಿಗಳು, ಮತ್ತು ಸದಸ್ಯರು ಶುಕ್ರವಾರ ಹೊಸಪೇಟೆ ನಿಲ್ದಾಣದಲ್ಲಿ ರೈಲ್ವೇ ಪ್ರಾದೇಶಿಕ ಅಧಿಕಾರಿ ಮುಕೇಶ್ ಕುಮಾರ್  ಅವರ ಮೂಲಕ ನೈರುತ್ಯ ರೈಲ್ವೇ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿ, ಕ್ರಿಯಾ ಸಮಿತಿ ಅಧ್ಯಕ್ಷ ವೈ.ಯಮುನೇಶ್ ಅವರು ಮಾತನಾಡಿ ಕೆಲ ದಿನಗಳ ಹಿಂದೆ ದೇಶದ ಪ್ರದಾನಮಂತ್ರಿಗಳು ಸಮಾರಂಭ ಒಂದರಲ್ಲಿ ಮಾತನಾಡುತ್ತಾ 2030 ವರ್ಷಕ್ಕೆ ದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳ ಬೆಳವಣಿಗೆಯಿಂದ 20ಲಕ್ಷ ಕೋಟಿ ರೂಪಾಯಿ ಆಧಾಯ ಸಂಗ್ರಹಿಸಬಹುದಾಗಿದ್ದು, ಅಂದಾಜು 14 ಕೋಟಿ ಉದ್ಯೋಗ ಸೃಷ್ಠಿಸಲು ಸಾಧ್ಯವಾಗುತ್ತದೆ” ಎಂದಿದ್ದಾರೆ.
ಹೀಗಾಗಿ ಪ್ರಧಾನಮಂತ್ರಿಗಳ ದೂರದೃಷ್ಠಿಯ ಹೇಳಿಕೆಯನ್ನು ಸಾಕಾರಗೊಳಿಸುವ ಮಹತ್ತರ ಜವಾಬ್ದಾರಿ ರೈಲ್ವೇ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಗಳ ಮೇಲಿದೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯದಲ್ಲಿ ವಿವಿಧ ಪ್ರವಾಸಿ ತಾಣಗಳು ಹಾಗೂ ವಿಶ್ವ ಪಾರಂಪರಿಕ ತಾಣಗಳ ನಡುವೆ ನೇರ ರೈಲು ಸಂಪರ್ಕ ಕಲ್ಪಿಸುವ ಅಗತ್ಯವಿದೆ ಎಂದು ಈ ನಿಟ್ಟಿನಲ್ಲಿ ಕಾರ್ಯೋನ್ಮೂಖವಾಗುವಂತೆ ಆಗ್ರಹಿಸಿದೆ.
ವಿಶ್ವದ ಯುನೆಸ್ಕೋ  ಪಾರಂಪರಿಕ ತಾಣವಾದ ಹಂಪಿಯಿಂದ ರಾಜ್ಯದ ಇತರ ಪ್ರವಾಸಿ ತಾಣಗಳಾದ ಹಾಸನ, ಹಳೆಬೀಡು, ಬೇಲೂರು, ಶ್ರಣಬೆಳಗೋಳ, ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ, ಹಾಗೂ ಶೈಕ್ಷಣಿಕ ಮತ್ತು ಬೃಹತ್ ಆಸ್ಪತ್ರೆ ಕೇಂದ್ರಗಳಾದ ಮಣಿಪಾಲ-ಉಡುಪಿ-ಮಂಗಳೂರಿಗೆ ನೇರ ರೈಲು ಆರಂಭಿಸಬೇಕು. ಇದರಿಂದ ನಮ್ಮ ರಾಜ್ಯದಲ್ಲಿ ಪ್ರವಾಸೋಧ್ಯಮ ಮತ್ತು ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತವೆ. ಅಲ್ಲದೇ ಕಲ್ಯಾಣ ಕರ್ನಾಟಕ ಹೆಬ್ಬಾಗಿಲಿನಂತಿರುವ ವಿಜಯನಗರ ಜಿಲ್ಲೆ ಮತ್ತು ಬಂದರುನಗರ ಮಂಗಳೂರಿಗೆ ನೇರ ಸಂಪರ್ಕ ದೊರೆತು, ವ್ಯಾಪಾರ ವಹಿವಾಟುಗಳು ವೃದ್ದಿಯಾಗುತ್ತದೆ ಎಂದರು.
ಕ್ರಿಯಾ ಸಮಿತಿ ಉಪಾಧ್ಯಕ್ಷ ಉಮಾಮಹೇಶ್ವರ್ ಮಾತನಾಡಿ ಬೆಳಗಾವಿ-ಹೈದ್ರಾಬಾದ್-ಭದ್ರಾಚಲಂ ಗಾಡಿ ನಂ.07335/07336 ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಪ್ರಸಿದ್ದ ಯಾತ್ರಾಸ್ಥಳ ಮಂತ್ರಾಲಯ ಮಾರ್ಗವಾಗಿ ಈ ಹಿಂದೆ ಸಂಚರಿಸುತ್ತಿದ್ದ ರೈಲನ್ನು ಕಳೆದ 4 ತಿಂಗಳಿಂದ ಸಂಚಾರ ರದ್ದುಪಡಿಸಿರುವುದು ಖಂಡನೀಯ. ಇದರಿಂದ ಈ ಜಿಲ್ಲೆಗಳಿಂದ ಮಂತ್ರಾಲಯ ಹಾಗೂ ರಾಯಚೂರು, ಹೈದ್ರಬಾದ್ ಕಡೆಗೆ ಹೋಗುವ ಪ್ರಯಾಣಿಕರಿಗೆ ವಿಪರೀತ ತೊಂದರೆಯಾಗಿದೆ.  ಆದುದರಿಂದ ಕೂಡಲೇ ಸದ್ರಿ ರೈಲನ್ನು ಪುನರ್ ಆರಂಭಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಹೇಶ್ ಕುಡುತಿನಿ, ಕೌತಾಳ್ ವಿಶ್ವನಾಥ್, ಎಲ್.ರಮೇಶ್ ಲಮಾಣಿ, ಸಿದ್ದಪ್ಪ.ಕೆ, ಬಿ.ವಿರುಪಾಕ್ಷಪ್ಪ, ಪಿ.ಪ್ರಭಾಕರ್, ಡಿ.ರಾಮಕೃಷ್ಣ, ಎಂ.ಶಂಕ್ರಪ್ಪ, ಕೆ.ವಿ.ರಾಮಾಲಿ, ಮಲ್ಲಯ್ಯ, ಹೆಚ್.ಮಹೇಶ್, ನಜೀರ್ ಸಾಬ್, ಶಂಶುದ್ದೀನ್, ಬಿ.ಮಹಮ್ಮದ್ ಜಮೀರ್, ಯು.ಆಂಜನೇಯಲು, ಹೆಚ್.ತಿಪ್ಪೇಸ್ವಾಮಿ, ಲೋಗನಾಥನ್, ಎಸ್.ಟಿ.ಮುಂಡರಗಿ, ಡಿ.ಜಗದೀಶ್, ಶೇಕ್‍ಮಹಮ್ಮದ್ ಬಾಷಾ, ಸಣ್ಣ ಮಾರೆಪ್ಪ, ದೇವರೆಡ್ಡಿ, ಮಹಾಂತೇಶ್, ಜೆ.ವರುಣ್, ಇತರರು ಹಾಜರಿದ್ದರು.