ಸಂಡೂರಿನ ಕಾಡಿನಲ್ಲಿ ರಾಮ ಸೆಣಬು ಪತ್ತೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,31- ವಿಶ್ವದ ಎಲ್ಲಿಯೂ ಕಾಣದ ರಾಮ ಸೆಣಬು  ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ರಾಮಘಡ ಅರಣ್ಯದಲ್ಲಿ ದೊರೆತಿದೆಂದು ವನ್ಯಜೀವಿ ಸಂಶೋಧಕ ಡಾ. ಸಮದ್ ಕೊಟ್ಟೂರು ಹೇಳಿದ್ದಾರೆ.
ಸಂಜೆವಾಣಿಯೊಂದಿಗೆ ಮಾತನಾಡಿದ ಅವರು. ಸಮುದ್ರಮಟ್ಟದಿಂದ ಒಂದು ಸಾವಿರ ಮೀಟರ್ ಎತ್ತರದ  ಸಂಡೂರಿನ ಪರ್ವತಗಳು  ಅಪಾರ ಸಂಪತ್ಫರಿತ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರಿನ  ಜೊತೆಗೆ  ಅಪರೂಪದ ಜೀವ ವೈವಿಧ್ಯತೆಯ ನ್ನು ಸಹ ಹೊಂದಿದೆ. ಇಡೀ ಜಗತ್ತಿನಲ್ಲಿ ಎಲ್ಲೂ ಕಾಣದ ಸಸ್ಯ ಕ್ರೋಟಲೇರಿಯಾ ಸಂಡೂರೆನ್ಸಿಸ್  (ರಾಮ ಸೆಣಬು) ಕೇವಲ ಸಂಡೂರು ಸುರ್ತಮುತ್ತಲಿನ  ರಾಮಗಡ ಮತ್ತಿತರ ಬೆಟ್ಟದಲ್ಲಿ ಮಾತ್ರ ಬೆಳೆಯುತ್ತಿದ. ಗಣಿಗಾರಿಕೆಯಿಂದ ಇದು ವಿನಾಶಕ್ಕೆ ತಲುಪಬಹುದು ಮತ್ತು ಇದರ ಬಗ್ಗೆ ಹೆಚ್ಚಿನ ಅಧ್ಯಯನದ ಅವಶ್ಯಕತರಯೂ ಇದೆ ಎಂದಿದ್ದಾರೆ.
ಗಣ ಲಕ್ಷಣ:
ಹೊಳಪಿನ ಸೂಕ್ಷ್ಮ ರೋಮಗಳಿಂದ ಕೂಡಿದ ಎಲೆ, ಹಳದಿ ಹೂವು, ಬುರುಡೆಯಂತೆ ಇರುವ ಕಾಯಿ, ಹುರುಳಿಯಾಕಾರದ ಬೀಜಗಳನ್ನು ಬಿಡುವ ಈ ಸಸ್ಯ ಸೆಣಬಿನ ವರ್ಗಕ್ಕೆ ಸೇರಿದ್ದು, ಇದಕ್ಕೆ ಕನ್ನಡದಲ್ಲಿ ಯಾವುದೇ ಹೆಸರು ಇರುವುದಿಲ್ಲ. ಆದ್ದರಿಂದ ರಾಮಗಡದಲ್ಲಿ  ಸಿಗುವ ಈ ಸೆಣಬಿನ ಗಿಡವನ್ನು “ರಾಮ ಸೆಣಬು” ಎಂದು  ನಾಮಕರಣ ಮಾಡಿರುವುದಾಗಿ ಸಮದ್ ಕೊಟ್ಟೂರು ಹೇಳುತ್ತಾರೆ.
ಕ್ರಿ.ಶ 1912 ನೇ ಇಸವಿಯಲ್ಲಿ ಈ ಗಿಡವನ್ನು ಜೆ.ಎಸ್.ಗ್ಯಾಂಬೆಲ್ ಎಂಬ ಯೂರೋಪಿನ ಸಸ್ಯ ಶಾಸ್ತ್ರಜ್ಞ ರಾಮಗಡದ ಪರ್ವತದಲ್ಲಿ ಇದನ್ನು ಪತ್ತೆ ಮಾಡಿದ್ದರು. ನಂತರ ಈ ಸಸ್ಯವನ್ನು ಇತರೆ ಸೆಣಬು ಸಸ್ಯಗಳೊಂದಿಗೆ ಹೋಲಿಸಿದಾಗ ಈ ಪ್ರಬೇಧ ಕೇವಲ ರಾಮಗಡ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಮಾತ್ರ ಸೀಮಿತ ಎಂದು ನಿರ್ಧರಿಸಿ ಇದಕ್ಕೆ ಕ್ರೋಟಲೇರಿಯಾ ಸಂಡೂರೆನ್ಸಿಸ್ ಎಂದು ಅವರು ನಾಮಕರಣ ಮಾಡಿದ್ದರು.
ಅಧ್ಯಯನ ಬೇಕಿದೆ:
ಈ ಸಸ್ಯದ ಕುರಿತು ವಿವರವಾದ ಅಧ್ಯಯನಗಳು ನಡೆದಿಲ್ಲ. 1980ರಲ್ಲಿ ಜೈನ್ ಎಂಬ ಸಸ್ಯ ಶಾಸ್ತ್ರಜ್ಞ ಇದರ ಅಧ್ಯಯನ ಮಾಡಿದ್ದರೆಂಬ ಮಾಹಿತಿ ಇದೆ. ಹೆಚ್ಚಿನ ಅಂಶಗಳು ಇಲ್ಲ.
ತಾವು ಈ ಸಸ್ಯವನ್ನು ಕಳೆದ 14 ವರ್ಷಗಳಿಂದ  ಸಂಡೂರು ತಾಲೂಕಿನ ಜೈಸಿಂಗಪುರದಿಂದ ರಾಮಗಡ ಹಾಗೂ ತಾಯಮ್ಮನಕೊಳ್ಳದಿಂದ ಯಶವಂತನಗರ ಕಣಿವೆಯವರೆಗೆ ಇರುವ ಪ್ರದೇಶದಲ್ಲಿ ದಾಖಲಿಸಿ ಅಧ್ಯಯನ ಮಾಡುತ್ತಿದ್ದು. ಇದು ಚಳಿಗಾಲದ ಆರಂಭದಲ್ಲಿ ಹೂಬಿಟ್ಟು ಅಂತ್ಯದ ವೇಳೆಗೆ ಬುರುಡೆಯಾಕಾರದ ಕಾಯಿಗಳು ಬಿಡುತ್ತವೆ. ನೆಲಕ್ಕೆ ಬಿದ್ದ ಬೀಜಗಳು ಮತ್ತೆ ಮಳೆಗಾಲದಲ್ಲಿ ಮೊಳಕೆಯೊಡೆದು ಬೆಳೆಯುತ್ತವೆ.
ಪರಿಸರಕ್ಕೆ ಆಮ್ಲಜನಕ ನೀಡುವ ಮತ್ತು ಜಾನುವಾರುಗಳಿಗೆ ಆಹಾರವೂ ಆಗಬಲ್ಲದಂತೆ.
ವಿನಾಶದತ್ತ:
 ಕಾಡಿನ ಬೆಂಕಿ ಈ ಸಸ್ಯವನ್ನು ಹಾಗೂ ಬೀಜಗಳನ್ನು ಸುಟ್ಟು ನಾಶ ಮಾಡುವುದರಿಂದ ಹಾಗೂ ಮಿತಿಮೀರಿದ ಗಣಿಗಾರಿಕೆಯಿಂದ ಈ ಸಸ್ಯ ವಿನಾಶದ ಅಂಚಿಗೆ ತಲುಪಿದೆ.ಈ ಸಸ್ಯದ ಬೀಜಗಳನ್ನು ದೂರದ ಕೊಪ್ಪಳ ಜಿಲ್ಲೆಯ ಕನಕಗಿರಿ ಕಾಡಿನಲ್ಲಿ ಬೆಳೆಸುವ ಪ್ರಯೋಗ ಮಾಡಿದ್ದು, ಅಲ್ಲಿ ಬೆಳೆಯಲಿಲ್ಲ. ಇದಕ್ಕೆ ಸಮುದ್ರ ಮಟ್ಟದಿಂದ ಎತ್ತರ ಹಾಗೂ ಕಬ್ಬಿಣ-ಮ್ಯಾಂಗನೀಸ್ ಅದಿರು ಇರುವ ಮಣ್ಣು ಕಾರಣ ಇರಬಹುದು. ಹೀಗಾಗಿ ಈ ಸಸ್ಯ ಕೇವಲ ರಾಮಗಡದಲ್ಲಿ ಹೆಚ್ಚಾಗಿ ಕಾಣಸಿಗುತ್ತಿದೆ. ಆದರೆ ಗಣಿಗಾರಿಕೆಯಿಂದ ಈ ಅಪರೂಪದ ಸಸ್ಯದ ಅಸ್ತಿತ್ವಕ್ಕೆ ಧಕ್ಕೆ ಎದುರಾಗಿದೆ.
ಅಪರೂಪ ಈ ಸಸ್ಯದ ಕುರಿತು ಸುದೀರ್ಘ ಅಧ್ಯಯನ ಮಾಡುವುದು ಹಾಗೂ ಸಂಡೂರಿನ ಅಪರೂಪದ ಜೀವ ವೈವಿಧ್ಯತೆಯನ್ನು ಕಾಪಾಡಬೇಕಾಗಿದೆ ಎನ್ನುತ್ತಾರೆ ಡಾ.ಸಮದ್ ಕೊಟ್ಟೂರು.