ಧರ್ಮ ರಕ್ಷಣೆಗಾಗಿ ಅವತರಿಸಿದ ಮಹಾಪುರುಷ ಶ್ರೀಕೃಷ್ಣ
ಬಾಗಲಕೋಟೆ, ಆ 31: ಲೋಕದಲ್ಲಿ ಅನ್ಯಾಯ ಹೆಚ್ಚಾಗಿ ಪಾಪಕರ್ಮಗಳು ಅಟ್ಟಹಾಸ ಮೆರೆಯುವ ಸಂದರ್ಭದಲ್ಲಿ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿ, ಧರ್ಮ ಉಳಿವಿಗಾಗಿ ಅವತರಿಸಿ ಬಂದ ಮಹಾಪುರುಷ ಶ್ರೀಕೃಷ್ಣ ಎಂದು ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಕುಲಕರ್ಣಿ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಾಭಾರತದಲ್ಲಿ ಅರ್ಜುನನ್ನು ನಿಮಿತ್ಯವಾಗಿ ಇರಿಸಿಕೊಂಡು ಜನರಿಗೆ ಭಗವದ್ಗೀತೆ ಮೂಲಕ ಧರ್ಮ, ಅಧರ್ಮಗಳ ಸತ್ಯಾಸತ್ಯತೆಗಳ ಹಾಗೂ ಮಾನವೀಯತೆ ಮೌಲ್ಯಗಳನ್ನು ಕುರಿತಾದ ಸಂದೇಶಗಳನ್ನು ಸಾರಿದ್ದಾರೆ ಎಂದರು.
ಇಂದು ಆ ಭಗವದ್ಗೀತೆ ನ್ಯಾಯಾಲಯದಲ್ಲಿ ಪ್ರಮಾಣೀಕರಿಸುವಷ್ಟು ಪ್ರಸಿದ್ದವಾಗಿದ್ದು, ನ್ಯಾಯಾಲಯಗಳಲ್ಲಿ ಆರೋಪಿ ಪ್ರತ್ಯಾರೋಪಿಗಳ ಮಧ್ಯ ವಾದಗಳು ಪ್ರಾರಂಭಗೊಳ್ಳುವಗಿಂತ ಮೊದಲು ಭಗವದ್ಗೀತೆ ಮೇಲೆ ಪ್ರಮಾಣ ಮಾಡಿಸುತ್ತಾರೆ. ಇಂತಹ ಅದ್ಬುತ ಗ್ರಂಥವನ್ನು ಲೋಕಕ್ಕೆ ನೀಡಿದ ಕೃಷ್ಣ ಹಿಂದು, ಇಂದು ಮುಂದೆಂದೂ ಅಜರಾಮರವಾಗಿದ್ದಾನೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ನವೋದಯ ವಿದ್ಯಾಲಯದ ಶಿಕ್ಷಕ ಡಿ.ಬಿ.ಫಕೀರಪ್ಪ ಮಾತನಾಡಿ ವಿಷ್ಣುವಿನ ದಶಾವತಾರಗಳಲ್ಲಿ ಕೃಷ್ಣಾ ಅವತಾರ ಕೂಡಾ ಒಂದಾಗಿದ್ದು, ಮೊದಲಿಗೆ ಕೂರ್ಮಾವತಾರ ಅವತರಿಸಿದ್ದರಿಂದ ಪ್ರತಿ ದೇವಸ್ಥಾನಗಳಲ್ಲಿ ಇಂದು ಕೂಡಾ ದೇವರ ಎದುರಿಗೆ ಆಮೆ ಪ್ರತಿಷ್ಠಾಪಿಸುವ ಉದ್ದೇಶ ಅದು ಕೂರ್ಮಾವತಾರದ ಕುರುಹು ಆಗಿದೆ ಎಂದರು.
ಆಪತ್ಕಾಲದಲ್ಲಿ ಆಮೆಗೆ ಸಂಕಷ್ಟ ಬಂದಾಗ ತನ್ನ ಕೈಕಾಲು ಮುಖಗಳನ್ನು ಮುಚ್ಚಿಕೊಂಡು ತನ್ನ ರಕ್ಷಾ ಕವಚದಿಂದ ಬಂದ ಕಷ್ಟವನ್ನು ಎದುರಿಸುವಂತೆ ಮನುಷ್ಯನು ಕೂಡಾ ಜೀವನದಲ್ಲಿ ಬರುವಂತ ಕಷ್ಟಗಳಿಗೆ ಹೆದರದೇ ಬದುಕು ಸಾಗಿಸಬೇಕೆಂಬ ಸಂದೇಶ ಆ ಆಮೆ (ಕೂರ್ಮ) ಯಿಂದ ತಿಳಿಯಬಹುದಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಮಾತನಾಡಿ ಮಹಾಪುರುಷರು ಯಾವುದೇ ಜಾತಿ ಧರ್ಮಕ್ಕೆ ಸೀಮಿತರಲ್ಲ. ಇಂತವಹ ಜಯಂತಿ ಉತ್ಸವಕ್ಕೆ ಅಭಿಮಾನಿಗಳು, ಭಕ್ತರು ಆರಾಧಕರು ಸ್ವಯಂ ಪ್ರೇರಿತರಾಗಿ ನಿಗದಿತ ಸಮಯದಲ್ಲಿ ಆಗಮಿಸಿ ಜಯಂತಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದಾಗ ಮಾತ್ರ ಅದಕ್ಕೊಂದು ಬೆಲೆ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರಾದ ಭೀಮಶಿ ಹಣಮರ್, ಸತ್ಯಪ್ಪ ಹಣಮರ, ಬಸವರಾಜ ಯಾದವ, ಫಕೀರಪ್ಪ ಯಾದವ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಂಕರಲಿಂಗ ದೇಸಾಯಿ ನಿರೂಪಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಶ್ರೀಕೃಷ್ಣರ ಭಾವಚಿತ್ರಕ್ಕೆ ಪ್ರಭಾರಿ ಅಪರ ಜಿಲ್ಲಾಧಿಕಾರಿ ಸಂತೋಷ ಜಗಲಾಸರ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ನಗರದ ನಾನಾ ಕಡೆ ಸಂಚರಿಸಿ ಕೊನೆ ಅಂಬೇಡ್ಕರ ಭವನಕ್ಕೆ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು.