ಸಂಶೋಧನೆಯತ್ತ ಇರಲಿ ನಿಮ್ಮ ಚಿತ್ತ
ಬಾಗಲಕೋಟೆ,ಆ31: ಉಳಿದೆಲ್ಲ ದೇಶಗಳಿಗಿಂತ ಭಾರತ ದೇಶದಲ್ಲಿ ಸಂಶೋಧನೆಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗದಿರುವುದೇ ಒಂದು ಸವಾಲಾಗಿದೆ ಆದರೂ ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದತ್ತ ವಿದ್ಯಾರ್ಥಿಗಳು ಮುಖಮಾಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಧಾರವಾಡ ವಿಶ್ವವಿದ್ಯಾಲಯದ ಭೌತಶಾಸ್ತ್ರದ ವಿಭಾಗದ ಕಾರ್ಯಾಧ್ಯಕ್ಷ ಪ್ರೊ. ಎಂ. ಕೆ. ರಬಿನಾಳ ಅಭಿಪ್ರಾಯ ಪಟ್ಟರು.
ನಗರದ ಬಿ.ವ್ಹಿ.ವ್ಹಿ ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಾಲೆಂಜಸ್ ಆ್ಯಂಡ್ ಸೊಲ್ಯುಶನ್ಸ್ ಇನ್ ಸೈನ್ಸ ಆ್ಯಂಡ್ ಟೆಕ್ನಾಲಜಿ ಎಂಬ ವಿಷಯದ ಕುರಿತು ಜರುಗಿದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧಕರಿಗೆ ಸಾಕಷ್ಟು ಅವಕಾಶಗಳಿವೆ. ಅನುದಾನಗಳೂ ಇವೆ. ಹೀಗಾಗಿ ಯುವ ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಮನಸ್ಥಿತಿಯನ್ನು ಕೌಶಲ್ಯಪೂರ್ಣ ಸಂಶೋಧನೆ ಕೈಗೊಳ್ಳುವಲ್ಲಿ ತೊಡಗಿಸಿಕೊಳ್ಳಬೇಕು. ಆದರೆ ದಾರಿ ಸುಗಮವಾಗಿಲ್ಲ ಸಾಧ್ಯತೆಗಳಿದ್ದಷ್ಟೇ ಸವಾಲುಗಳೂ ಇವೆ. ಸವಾಲನ್ನು ಮೆಟ್ಟಿನಿಲ್ಲುವ ಸಾಮಥ್ಯ ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಗುರುಬಸವ ಎಸ್. ಸೂಳಿಬಾವಿ ಅವರು ಮಾತನಾಡಿ ಪ್ರತಿವರ್ಷ ನಮ್ಮ ಕಾಲೇಜು ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಇಂತಹ ಅನೇಕ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ವಿಚಾರ ಸಂಕೀರಣಗಳನ್ನು ಹಮ್ಮಿಕೊಳ್ಳುತ್ತ ಬರುತ್ತಲಿದ್ದೇವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಜೊತೆಗೆ ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘವು ಇಂತಹ ಕಾರ್ಯಕ್ರಮಕ್ಕೆ ಸಹಯೋಗವನ್ನು ವಹಿಸಿಕೊಂಡು ವಿದ್ಯಾರ್ಥಿಗಳ ಕಲಿಕೆ ಮತ್ತು ಸಂಶೋಧನೆಗೆ ಮತ್ತಷ್ಟು ಉತ್ತೇಜನ ನೀಡುತ್ತಿರುವುದು ಅತ್ಯಂತ ಖುಷಿಯ ಸಂಗತಿಯಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಡಿ.ಎಂ. ಪೊರೆ ಹಾಗೂ ಶಿವಮೊಗ್ಗದ ‘ಪಂಚವಟಿ ರಿಸರ್ಚ್ ಅಕಾಡೆಮಿ ಫಾರ್ ನೇಚರ್’ನ ಪರಿಸರ ತಜ್ಞ ಡಾ. ಕೆ.ಜಿ.ಗಿರೀಶ ಸಂಶೋಧನಾ ಸಾಧ್ಯತೆ ಮತ್ತು ಸವಾಲುಗಳ ಕುರಿತು ಸುವಿಸ್ತಾರವಾಗಿ ಉಪನ್ಯಾಸ ನೀಡಿದರು. ನಂತರದ ಅವಧಿಯಲ್ಲಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧ ಮಂಡಿಸಿದರು.
ವೇದಿಕೆ ಮೇಲೆ ಪ್ರಾಚಾರ್ಯರಾದ ಡಾ. ಎಸ್. ಎಂ. ಗಾಂವಕರ್, ಶಿವಮೊಗ್ಗದ ‘ಪಂಚವಟಿ ರಿಸರ್ಚ್ ಅಕಾಡೆಮಿ ಫಾರ್ ನೇಚರ್’ನ ಪರಿಸರ ತಜ್ಞ ಡಾ. ಕೆ.ಜಿ.ಗಿರೀಶ, ಐಕ್ಯುಎಸಿ ಸಂಯೋಜಕ ಡಾ.ಡಿ.ಎಸ್. ಲಮಾಣಿ, ಹಳೆವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಡಾ. ಬಿ.ಎನ್. ಕಿರಸೂರ, ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ. ಎಸ್. ಆರ್. ಕಲಾದಗಿ ಇದ್ದರು. ಪ್ರಾಚಾರ್ಯ ಡಾ. ಎಸ್. ಎಂ. ಗಾಂವಕರ್ ಸ್ವಾಗತಿಸಿ, ಡಾ. ಡಿ.ಎಸ್. ಲಮಾಣಿ ಅತಿಥಿಗಳನ್ನು ಪರಿಚಯಿಸಿದರು. ಕುಮಾರಿ ಸಹನಾ ಹಾಗೂ ತಂಡದವರು ಪ್ರಾರ್ಥಿಸಿದರು. ಶ್ರೀಮತಿ ಮಹಾನಂದ ಮಠ ಹಾಗೂ ಶ್ರೀಮತಿ ಸವಿತಾ ದಾದನಟ್ಟಿ ನಿರೂಪಿಸಿ, ವಂದಿಸಿದರು.