೧೨೦ಕೋಟಿ ವೆಚ್ಚದಲ್ಲಿ ತುಮಕೂರು ರೈಲ್ವೆ ನಿಲ್ದಾಣ ಅಭಿವೃದ್ದಿ
ತುಮಕೂರು, ಆ. ೩೧- ಇತಿಹಾಸ ಪ್ರಸಿದ್ದ ಸಿದ್ದಗಂಗಾ ಮಠದ ಮಾದರಿಯಲ್ಲೇ ತುಮಕೂರಿನ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಅಮೃತ್ ಭಾರತ್ ಯೋಜನೆಯಡಿ ತುಮಕೂರು ರೈಲ್ವೆ ನಿಲ್ದಾಣವನ್ನು ೧೨೦ ಕೋಟಿ ರೂ., ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಈಗಾಗಲೇ ರೈಲ್ವೆ ನಿಲ್ದಾಣಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಿಡುವಂತೆ ಒತ್ತಾಯ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣವನ್ನು ಶ್ರೀಮಠದ ಮಾದರಿಯಲ್ಲಿ ವಿನ್ಯಾಸಗೊಳಿಸಲು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮುಂದಾಗಿದ್ದಾರೆ.
ಬೆಂಗಳೂರಿನ ಕಂಟೋನ್ಮೆಂಟ್, ಯಶವಂತಪುರ ವ್ಯವಸ್ಥಿತ ರೈಲ್ವೆ ನಿಲ್ದಾಣಗಳಂತೆ ತುಮಕೂರಿನ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗಿದೆ. ಅಲ್ಲದೆ, ರಾಜ್ಯದ ೬೧ ರೈಲ್ವೆ ನಿಲ್ದಾಣಗಳನ್ನು ಒಟ್ಟು ೨ ಸಾವಿರ ಕೋಟಿ ರೂ., ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ರೈಲ್ವೆ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.
ಸುಸಜ್ಜಿತ ರೈಲ್ವೆ ನಿಲ್ದಾಣ: ರೈಲ್ವೆ ಖಾತೆ ರಾಜ್ಯ ಸಚಿವರು ಆದ ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯ ವಿ.ಸೋಮಣ್ಣ ಪ್ರತಿನಿಧಿಸುವ ಕ್ಷೇತ್ರದ ಈ ರೈಲ್ವೆ ನಿಲ್ದಾಣಕ್ಕೆ ಹೊಸ ಸ್ಪರ್ಶ ನೀಡಲಾಗುತ್ತಿದೆ. ಲಕ್ಷಾಂತರ ಬಡಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ಕಲ್ಪಿಸಿದ ಸಿದ್ದಗಂಗಾ ಮಠದ ಮಾದರಿಯನ್ನೇ ಹೋಲುವಂತೆ ರೈಲ್ವೆ ನಿಲ್ದಾಣ ಕಟ್ಟಡ ವಿನ್ಯಾಸ ಇರಲಿದೆ ಎಂದು ಹೇಳಲಾಗುತ್ತಿದೆ.
ರೈಲ್ವೆ ನಿಲ್ದಾಣದಲ್ಲಿ ಬಹುಹಂತದ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಪ್ರಯಾಣಿಕರ ಅತ್ಯಾಧುನಿಕ ಲಾಂಜ್‌ಗಳು, ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಒಳಗೊಂಡಿರುತ್ತದೆ. ರೈಲು ನಿಲ್ದಾಣವನ್ನು ಪ್ರಯಾಣಿಕರ ಸ್ನೇಹಿ ಸೌಕರ್ಯಗಳೊಂದಿಗೆ ನವೀಕರಣಗೊಂಡು ಬಹು ಹಂತದ ಪಾರ್ಕಿಂಗ್ ವ್ಯವಸ್ಥೆ, ಬೆಳೆಯುತ್ತಿರುವ ತುಮಕೂರಿನ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಹೆಚ್ಚಿನ ಪ್ಲಾಟ್‌ಫಾಮ್‌ರ್ಗಳನ್ನು ನಿರ್ಮಿಸಲಾಗುತ್ತಿದೆ
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು, ತುಮಕೂರು ನಿಲ್ದಾಣವನ್ನು ಪ್ರಯಾಣಿಕರ ಸ್ನೇಹಿ ಸೌಕರ್ಯಗಳೊಂದಿಗೆ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ನವೀಕರಣಗೊಳ್ಳುವ ನಿಲ್ದಾಣಲ್ಲಿ ಬಹುಹಂತದ ಪಾರ್ಕಿಂಗ್ ವ್ಯವಸ್ಥೆ, ಆಧುನಿಕ ಪ್ರಯಾಣಿಕರ ಲಾಂಜ್‌ಗಳು, ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ಬಾಗಿಲುಗಳು ಇರಲಿವೆ. ಅದಲ್ಲದೇ, ಬೆಳೆಯುತ್ತಿರುವ ತುಮಕೂರಿನ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಹೆಚ್ಚಿನ ಪ್ಲಾಟ್‌ಪಾರ್ಮ್‌ಗಳನ್ನು ನಿರ್ಮಿಸಲಾಗತ್ತದೆ ಎಂದು ಹೇಳಿದ್ದಾರೆ.