ಕೊಂಡವಾಡಿ ವಿರುದ್ಧ ಹರಿಹಾಯ್ದ ನಾಗೇಶ್‌ಬಾಬು
ಮಧುಗಿರಿ, ಆ. ೩೧- ತುಮಕೂರು ಹಾಲು ಒಕ್ಕೂಟದ ನೇಮಕಾತಿಯಲ್ಲಿ ಏನೆಲ್ಲ ಅವ್ಯವಹಾರಗಳಾಗಿವೆ ಎಂಬುದು ನಮಗೂ ಗೊತ್ತು ಎಂದು ಕೊಂಡವಾಡಿ ಚಂದ್ರಶೇಖರ್ ರವರಿಗೆ ತುಮುಲ್ ಮಾಜಿ ಅಧ್ಯಕ್ಷ ಬಿ. ನಾಗೇಶ್‌ಬಾಬು ತಿರುಗೇಟು ನೀಡಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕೂಟದ ನೇಮಕಾತಿಯಲ್ಲಿ ಭಾಗವಹಿಸಿದ್ದ ೭೭ ಅಂಕ ಪಡೆದಿರುವ ಅಭ್ಯರ್ಥಿಯೊಬ್ಬರಿಗೆ ೧೪ ನೀಡಿದರೂ ೯೧ ಅಂಕ ಆಗುತ್ತದೆ. ಆದರೆ ಅತಿ ಹೆಚ್ಚು ೧೦೨ ಅಂಕ ಬಂದಿರುವವರನ್ನು ಬಿಟ್ಟು ೭೭ ಅಂಕ ಪಡೆದವರಿಗೆ ಕೆಲಸ ನೀಡಿದ್ದರ ಮರ್ಮವೇನು ಎಂದು ತಿಳಿಸಿ ಈ ವಿಚಾರ ಉಚ್ಚ ನ್ಯಾಯಾಲಯದ ದ್ವಿ ಸದಸ್ಯ ಪೀಠದಲ್ಲಿದೆ ಎಂದು ಖಾರವಾಗಿ ಹೇಳಿದರು.
೨೦೧೩- ೧೪ ರಲ್ಲಿ ಅಕ್ಟೋಬರ್‌ನಲ್ಲಿ ರೈತರಿಂದ ಖರೀದಿಸಿದ ಲೀಟರ್ ಹಾಲಿಗೆ ೨೧.೨೦ ಪೈಸೆ ನೀಡಲಾಗುತ್ತಿದ್ದು, ೨೪ ರೂ.ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಗ್ರಾಹಕರು ಮತ್ತು ರೈತರ ನಡುವೆ ೨.೮೦ ರೂ.ಗಳ ಅಂತರ ಇತ್ತು. ಆದರೆ ೨೦೧೮-೧೯ ಅಂತರ ೧೨.೦೬ ರೂ ಆಗಿದೆ. ಈ ಅವಧಿಯಲ್ಲಿ ರೈತರಿಗ ೨೨.೯೪ ರೂಗಳನ್ನು ಲೀಟರ್ ಹಾಲಿಗೆ ನೀಡಲಾಗಿದ್ದು, ಈ ಅವಧಿಯಲ್ಲಿ ಒಕ್ಕೂಟಕ್ಕೆ ಪ್ರತೀ ದಿನ ೬ ಲಕ್ಷ ಲೀಟರ್ ಹಾಲು ಸರಬರಾಜಾಗುತ್ತಿದ್ದು, ೬ ಲಕ್ಷ ಲೀಟರ್‌ಗೆ ಕನಿಷ್ಠ ೮ ರೂಗಳೆಂದರೂ ಸುಮಾರು ೪೮ ಕೋಟಿ ನಷ್ಟ ರೈತರಿಗಾಗಿದೆ. ೩೦ ವರ್ಷಗಳಲ್ಲಿ ಇದು ಅವರ ದೊಡ್ಡ ಸಾಧನೆ ಮಾಡಿದ ಮಹಾನ್ ವ್ಯಕ್ತಿ ಎಂದು ಕುಟುಕಿದರು
ಹಾಲು ಉತ್ಪಾದಕ ಸಂಘದ ಷೇರನ್ನು ಸಚಿವರು ೨೫೦೦ ರೂಗಳಿಗೆ ಹೆಚ್ಚಿಸಲಾಗಿದೆ ಎಂದು ಕೊಂಡವಾಡಿ ಆರೋಪ ಮಾಡಿದ್ದು, ಆದರೆ ಷೇರು ಹಣವನ್ನು ನಿಮ್ಮ ಅವಧಿಯಲ್ಲಿ ಹೆಚ್ಚಿಸಿರುವುದು ನೀವೆ ಸ್ವಾಮಿ…ಇದಕ್ಕೆ ನಮ್ಮಲ್ಲಿ ದಾಖಲೆಗಳಿವೆ ಎಂದು ಕೊಂಡವಾಡಿ ಚಂದ್ರಶೇಖರ್ ವಿರುದ್ದ ಹರಿಹಾಯ್ದರು.
ನಾವ್ಯಾರೂ ಅವರಿಗೆ ಹಾಲಿನ ಕಳ್ಳ ಎಂದು ಹೇಳಿಲ್ಲ. ಆದರೆ ಒಂದೇ ರೂಟ್‌ನಲ್ಲಿ ೨ ಹಾಲಿನ ಟ್ಯಾಂಕರ್ ಓಡಾಡುತ್ತಿದ್ದು, ಒಂದು ಒಕ್ಕೂಟಕ್ಕೆ ಹಾಲು ತುಂಬಿಕೊಳ್ಳಲು ಮತ್ತೊಂದು ಖಾಸಗಿ ಅವರಿಗೆ ಹಾಲು ಸರಬರಾಜು ಮಾಡಲು ಎಂದು ಕುಟುಕಿದ ಅವರು, ಈ ಸಂದರ್ಭದಲ್ಲಿ ಮೂರು ಮಂದಿ ಅಧಿಕಾರಿಗಳನ್ನು ಕರ್ತವ್ಯ ಲೋಪದ ಮೇಲೆ ಅಮಾನತು ಮಾಡಲಾಗಿದ್ದನ್ನು ತಿಳಿಸಿದವರು ನಂದಿನಿ ಪತ್ತಿನ ಸಹಕಾರ ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದರು.
ಕೊಂಡವಾಡಿ ಚಂದ್ರಶೇಖರ್ ಅಧಿಕಾರ ಪಡೆದಾಗ ೧೬ ವಾರ ಬಟವಾಡಿ ಬಾಕಿ ಇತ್ತು ಎಂದು ಹೇಳಿರುವುದು ಶುದ್ಧ ಸುಳ್ಳು ಇದು ಹಾಲು ಉತ್ಪಾದಕರನ್ನು ದಾರಿ ತಪ್ಪಿಸುವ ತಂತ್ರ. ೯೩. ೯೬ ರ ಅವಧಿಯಲ್ಲಿ ೧೪ರಿಂದ ೧೬ ವಾರ ಹಾಲು ಉತ್ಪಾದಕರಿಗೆ ಬಟವಾಡಿ ನಿಲ್ಲಿಸಲಾಗಿತ್ತು ಅಲ್ಲಿಂದ ಇಲ್ಲಿಯವರೆಗೂ ೨ರಿಂದ ೩ ವಾರ ಬಟವಾಡಿ ಬಾಕಿ ಇರುತ್ತದೆ ಎಂದು ತಿಳಿಸಿದರು. ನನ್ನ ವಿರುದ್ಧ ಯಾವುದೇ ಕಪ್ಪು ಚುಕ್ಕೆ ಇಲ್ಲ. ಬಿಳಿ ಚುಕ್ಕೆ ಇದ್ದರೆ ತಾನೆ ಕಪ್ಪು ಚುಕ್ಕೆ ಕಾಣುವುದು ಎಂದು ಕುಟುಕಿದರು
ಕೆಎಂಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು ಮಾತನಾಡಿ, ಇದೇ ಕೊಂಡವಾಡಿ ಚಂದ್ರಶೇಖರ್ ೨೦೦೪ ರಲ್ಲಿ ಯಾವುದಾದರೂ ಒಂದು ಸ್ಥಾನಮಾನ ಕೊಡಿಸಿ ಎಂದು ನನ್ನ ಬಳಿ ಬಂದಾಗ, ಜಿಲ್ಲಾ ಜೆಡಿಎಸ್ ಕಾರ್ಯದರ್ಶಿ ಹುದ್ದೆ ಕೊಡಿಸಲಾಗಿತ್ತು ಎಂಬುದನ್ನು ಅವರು ನೆನೆಯಬೇಕು. ಸಂಘದ ಸದಸ್ಯತ್ವ ಇಲ್ಲ ಎಂದು ನನ್ನ ಬಗ್ಗೆ ಅರೋಪಿಸಿದ್ದು, ನಾನು ಸದಸ್ಯತ್ವ ಪಡೆದಿದ್ದೇನೆ. ಸಂಘಕ್ಕೆ ಹಾಲು ಹಾಕುತ್ತಿದ್ದೇನೆ. ಹಸುಗಳ ಫಾರಂ ಹೊಂದಿದ್ದೇನೆ. ನನಗಲ್ಲ ಇವರಿಗೇ ಎಬಿಸಿಡಿ ಗೊತ್ತಿಲ್ಲ. ನಮ್ಮ ದಾಖಲೆಗಳು ಪಟಾಕಿ ದಾಖಲೆಗಳಾದರೆ ನಿನ್ನ ಅವ್ಯವಹಾರದ ದಾಖಲೆಗಳು ಆಟಂ ಬಾಂಬ್ ದಾಖಲೆಗಳು ಎಂದು ಲೇವಡಿ ಮಾಡಿದ ಅವರು,
ನವೆಂಬರ್‌ಗೆ ಒಕ್ಕೂಟಕ್ಕೆ ಚುನಾವಣೆ ಬರಲಿದ್ದು, ನೀನು ಗೆದ್ದು ತೋರಿಸು ಎಂದು ಸವಾಲು ಹಾಕಿದರು.
ನಾನು ಮರಳು ಹೊಡೆದು ಜೀವನ ಮಾಡಿದವನು ಎಂದು ನೀನು ಹೇಳಿದ್ದು, ನಾನೇನೂ ಚಾಪೆ ಹಾಕಿಕೊಂಡು ಇಸ್ಪೀಟು ಆಡಿಸಿ ಕಮಿಷನ್ ತೆಗೆದುಕೊಂಡು ಜೀವನ ಮಾಡಿಲ್ಲ ಹಿಂದೆಲ್ಲ ಕೆ. ಎನ್. ರಾಜಣ್ಣ ರವರನ್ನು ಹೊಗಳಿ ಅಧಿಕಾರ ಪಡೆದುಕೊಂಡ ಬಗ್ಗೆ ಕೊಂಡವಾಡಿ ಚಂದ್ರಶೇಖರ್ ವಿರುದ್ಧ ಎಂದು ಕುಟುಕಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣ ರೆಡ್ಡಿ, ಪುರಸಭಾ ಮಾಜಿ ಅಧ್ಯಕ್ಷರುಗಳಾದ ಕೆ.ಪ್ರಕಾಶ್, ಎನ್.ಗಂಗಣ್ಣ, ವಕೀಲರ ಸಂಘದ ಅಧ್ಯಕ್ಷ ಪಿ.ಸಿ. ಕೃಷ್ಣಾರೆಡ್ಡಿ, ಪುರಸಭಾ ಸದಸ್ಯರುಗಳಾದ ಲಾಲಪೇಟೆ ಮಂಜುನಾಥ್, ಶ್ರೀಧರ್, ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಸುವರ್ಣಮ್ಮ, ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಚಂದ್ರಮ್ಮ, ವಕೀಲರ ಸಂಘದ ಅಧ್ಯಕ್ಷ ಪಿ.ಸಿ. ಕೃಷ್ಣಾರೆಡ್ಡಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಕೊಂಡವಾಡಿ ರಾಜಕುಮಾರ್, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷರಾದ ಡಿ.ಎಚ್. ನಾಗರಾಜು, ಸಿದ್ಧಾಪುರ ವೀರಣ್ಣ, ಮುಖಂಡರುಗಳಾದ ರವಿಕುಮಾರ್, ಸದಾಶಿವಮೂರ್ತಿ, ಪ್ರಸನ್ನಕುಮಾರ್, ಬಂದ್ರೆಹಳ್ಳಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.