ಮೊದಲ ೧೦೦ ಸ್ಥಾನದಲ್ಲಿ ತುಮಕೂರು ವಿವಿ ಸೇರ್ಪಡೆ: ಕುಲಪತಿಗೆ ಅಭಿನಂದನೆ
ತುಮಕೂರು, ಆ. ೩೧- ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಪಟ್ಟಿಯಲ್ಲಿ ತುಮಕೂರು ವಿಶ್ವವಿದ್ಯಾನಿಲಯವು ಮೊದಲ ೧೦೦ ಸ್ಥಾನಗಳಲ್ಲಿ ಸೇರಿರುವುದಕ್ಕೆ ಬಿಜೆಪಿ ಮುಖಂಡರು ಹಾಗೂ ಕನ್ನಡಪರ ಸಂಘಟನೆಗಳ ವತಿಯಿಂದ ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹಾಗೂ ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲ ಸಚಿವ ಪ್ರೊ. ಪ್ರಸನ್ನಕುಮಾರ್ ರವರನ್ನು ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿಗಳು, ಕಳೆದ ಒಂದು ವರ್ಷದಲ್ಲಿ ಸಂಶೋಧನೆ, ಧನ ಸಹಾಯ ಸಂಸ್ಥೆಗಳಿಗೆ ೮೦ ಸಂಶೋಧನ ಪ್ರಸ್ತಾವನೆಗಳನ್ನು ವಿವಿಧ ವಿಭಾಗಗಳ ಪ್ರಾಧ್ಯಾಪಕರು ಸಲ್ಲಿಸಿದ್ದರು. ಅದರಲ್ಲಿ, ೨೨ ಸಂಶೋಧನೆಗಳ ಪ್ರಸ್ತಾವನೆಗಳಿಗೆ ಅನುಮೋದನೆ ದೊರೆತಿದ್ದು, ೧.೫ ಕೋಟಿಯಷ್ಟು ಧನ ಸಹಾಯದ ಮಾನ್ಯತೆ ದೊರೆತಿರುವುದು ವಿವಿಯ ಸಂಶೋಧನ ಗುಣಮಟ್ಟಕ್ಕೆ ನಿದರ್ಶನವಾಗಿದೆ.
ಸಂಶೋಧನಾಧಾರಿತ ಶಿಕ್ಷಣದಿಂದ ವಿವಿಯ ಗುಣಮಟ್ಟ ಎತ್ತರಕ್ಕೆ ಏರಿದೆ ಎಂದರು.
ಕುಲ ಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ತುಮಕೂರು ವಿಶ್ವವಿದ್ಯಾನಿಲಯವು ದೇಶದ ಟಾಪ್ -೧೦೦ ವಿವಿ ಗಳಲ್ಲಿ ಸ್ಥಾನ ಪಡೆದಿರುವುದಕ್ಕೆ ಹರ್ಷ ವ್ಯಕ್ತಪಡಿಸಿ, ಈ ಸಾಧನೆಗೆ ಕಾರಣಿಭೂತರಾದ ಸಮಸ್ತ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರಿಗೂ, ಆಡಳಿತ ಮಂಡಳಿಗೂ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಜಿಲ್ಲಾ ವಕ್ ಬೋರ್ಡಿನ ಉಪಾಧ್ಯಕ್ಷ ಶಬ್ಬೀರ್ ಅಹಮದ್, ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿಯ ಓಬಿಸಿ ಘಟಕದ ಜಿಲ್ಲಾಧ್ಯಕ್ಷ ಎಸ್. ರಾಮಚಂದ್ರ ರಾವ್, ಬಿಜೆಪಿ ಮುಖಂಡರುಗಳಾದ ಎನ್. ವೆಂಕಟೇಶ್‌ಆಚಾರ್, ಕೋಮಲ ವೀರಭದ್ರಯ್ಯ, ರಫೀಕ್ ಅಹಮದ್, ರಾಮಣ್ಣ, ಮಮತಾ ಶಿವಕುಮಾರ್, ದಾನೇಶ್ವರಿ, ನಳಿನ, ಆದಿಲ್ ಭಾಷಾ, ಪ್ರೇಮ ಮತ್ತಿತರರು ಉಪಸ್ಥಿತರಿದ್ದರು.