ವಿದ್ಯಾನಗರ ರಸ್ತೆಗಳ ದುರಸ್ಥಿಗೆ ಒತ್ತಾಯ
ಮಧುಗಿರಿ, ಆ. ೩೧- ಪಟ್ಟಣದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ವಿದ್ಯಾನಗರದಲ್ಲಿನ ಕೆಲ ರಸ್ತೆಗಳಲ್ಲಿ ಸಾರ್ವಜನಿಕರು ಓಡಾಡಲು ಸಮಸ್ಯೆ ಉಂಟಾಗುತ್ತಿದೆ ಎಂದು ನಾಗರೀಕರು ಆರೋಪಿಸಿದ್ದಾರೆ.
ಪಟ್ಟಣದ ಸಿರಾಗೇಟ್ ಸಮೀಪವಿರುವ ವಿದ್ಯಾನಗರದಲ್ಲಿ ಕಳೆದ ವರ್ಷ ಸಿ ಸಿ ರಸ್ತೆಯನ್ನು ನಿರ್ಮಿಸಲಾಗಿತ್ತು. ಆದರೆ ಮಳೆ ನೀರು ರಸ್ತೆಯ ಮೇಲೆ ಸುರಿದ ಪರಿಣಾಮ ಸಿಸಿ ರಸ್ತೆಯ ಆರಂಭದಲ್ಲಿ ಹಾಕಲಾಗಿದ್ದ ಮಣ್ಣು ಕೊಚ್ಚಿಕೊಂಡು ಹೋಗಿದೆ.
ವಾರ್ಡಿನಲ್ಲಿರುವ ನಾಗರಿಕರು ವಾಹನಗಳಲ್ಲಿ ಓಡಾಡಲು ತುಂಬಾ ಅನಾನೂಕೂಲವಾಗುತ್ತಿದೆ. ದ್ವಿಚಕ್ರ, ಆಟೋ, ಕಾರುಗಳ ಟೈರ್‌ಗಳು ಸಿಸಿ ರಸ್ತೆಯ ಮುಂಭಾಗ ಹಾಕಲಾಗಿರುವ ಮೋರಿಯ ಕಬ್ಬಿಣದ ಕಂಬಿಗಳು ಹೊರ ಬಂದಿರುವುದರಿಂದ ಟೈರ್‌ಗಳು ಹಾಳಾಗುತ್ತಿವೆ ಎಂದು ನಾಗರೀಕರು ದೂರಿದ್ದಾರೆ.
ರಸ್ತೆಯ ತಿರುವುಗಳಲ್ಲಿ ಹಾಕಲಾಗಿದ್ದ ಮಣ್ಣು ಕೊಚ್ಚಿ ಹೋಗಿದ್ದು ಗುಂಡಿಗಳು ಬಿದ್ದಿದ್ದು ವಾಹನ ಸವಾರರು ವಾಹನಗಳಿಂದ ಬಿದ್ದು ಗಾಯಗೊಂಡಿದ್ದಾರೆ. ಈ ಹಿಂದೆ ಹಲವಾರು ಬಾರಿ ವಾರ್ಡಿನ ನಾಗರೀಕರೆ ಸಿಸಿ ರಸ್ತೆಯ ಮುಂಭಾಗದಲ್ಲಿ ಮಣ್ಣು ಹಾಕಿ ತಮ್ಮ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಂಡಿದ್ದರು. ಆದರೆ ಮಳೆ ಹೆಚ್ಚಾಗುತ್ತಿರುವುದರಿಂದ ಪದೇ ಪದೇ ಮಣ್ಣು ಕೊಚ್ಚಿ ಹೋಗುತ್ತಿದ್ದು ಶಾಶ್ವತವಾಗಿ ಸಿಮೆಂಟ್ ಹಾಕಿಸಿ ಸುಗಮ ಸಂಚಾರಕ್ಕೆ ಅನೂಕೂಲ ಮಾಡಿಕೊಡುವಂತೆ ಪುರಸಭಾ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.