ಕೆಲಸದ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಲು ಸಲಹೆ
ಚಿಕ್ಕನಾಯಕನಹಳ್ಳಿ, ಆ. ೩೧- ಯಾವುದೇ ಸ್ಥಳದಲ್ಲಿ ನೌಕರರು ಕೆಲಸ ನಿರ್ವಹಿಸುವಾಗ ಆ ಸ್ಥಳದ ಸ್ವಚ್ಛತೆ, ವಾತಾವರಣ ಉತ್ತಮವಾಗಿದ್ದರೆ ಕೆಲಸ ಮಾಡಲು ಮತ್ತಷ್ಟು ಹುಮ್ಮಸ್ಸು ಸೃಷ್ಠಿಯಾಗುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಹೇಳಿದರು.
ತಾಲ್ಲೂಕಿನ ಬೆಳಗುಲಿ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ನಿರ್ಮಿಸಲಾದ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಈ ಗ್ರಾಮ ಪಂಚಾಯ್ತಿಯ ಕಟ್ಟಡ ನೋಡಿ ತುಂಬಾ ಖುಷಿಯಾಗುತ್ತದೆ. ನಾವು ಕೆಲಸ ಮಾಡಬೇಕಾದರೆ ಅದರ ಒಳಗೆ ಹೋದರೆ ಮನಸ್ಸಿಗೆ ಪ್ರಶಾಂತತೆಯಾಗುತ್ತದೆ. ಇಂದು ಕಟ್ಟಿರುವ ಕಟ್ಟಡ ಉತ್ತಮವಾಗಿ, ಸುಂದರವಾಗಿದೆ. ಕಟ್ಟಡದೊಳಗೆ ಬರುವ ಪ್ರತಿಯೊಂದು ಅರ್ಜಿಯೂ ಸಹ ಕಟ್ಟಡದಷ್ಟೇ ಸುಂದರವಾಗಿ ಸಾರ್ವಜನಿಕರಿಗೆ ಉತ್ತರ ಸಿಗಬೇಕು ಆ ರೀತಿಯಲ್ಲಿ ಪಿಡಿಒ ಹಾಗೂ ಅಧ್ಯಕ್ಷರುಗಳು ನಿಭಾಯಿಸಬೇಕು ಎಂದರು. ಬೆಳಗುಳಿ ಗ್ರಾಮ ಪಂಚಾಯ್ತಿಯಲ್ಲಿ ೩೫ ಲಕ್ಷ ರೂ. ವೆಚ್ಚದಲ್ಲಿ ಸುಂದರ ಕಟ್ಟಡ ನಿರ್ಮಾಣವಾಗಿದೆ. ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳಿರಬಹುದು. ನೀರು ಇರಬಹುದು, ಕೇಂದ್ರದ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಎಲ್ಲ ಹಳ್ಳಿಯಲ್ಲಿ ಕೂಡಾ ಮನೆ ಮನೆಗೆ ಗಂಗೆ ನೀರು ಕೊಡುವಂತಹ ಕೆಲಸ ಆಗಿದೆ ಎಂದರು.
ಒಂದು ಗ್ರಾಮದ ಟ್ಯಾಂಕ್‌ನಿಂದ ಮತ್ತೊಂದು ಟ್ಯಾಂಕ ಫಿಲ್ಟರ್ ಲಿಂಕ್ ಮಾಡುವ ಮುಖಾಂತರ ಬೋರ್‌ವೆಲ್ ಫೇಲ್ ಆಗಿರುವ ಕಡೆ ನೀರಿನ ಸಮಸ್ಯೆ ಆಗದಂತೆ ಸಿದ್ದಪಡಿಸಲಾಗುತ್ತಿದೆ. ಯಾವ ಗ್ರಾಮ ಪಂಚಾಯ್ತಿಗೂ ಭೇದ ಭಾವ ಮಾಡದಂತೆ ಫಲಾನುಭವಿಗಳನ್ನು ಆಯ್ಕೆ ಮಾಡುವಂತಹ ಅಧಿಕಾರವಿರುವುದು ಗ್ರಾಮ ಪಂಚಾಯ್ತಿಯವರಿಗೆ ಎಂದರು.
ನಿಮ್ಮ ಪಂಚಾಯ್ತಿಯಲ್ಲಿ ಜನರಲ್ ಮನೆ ಎಷ್ಟು ಬೇಕು ಹಾಗೂ ಎಸ್.ಸಿ, ಎಸ್.ಟಿ ಗೆ ಎಷ್ಟು ಬೇಕು ಅಂತ ಎಲ್ಲವೂ ಕೂಡಾ ಒಂದು ಪಟ್ಟಿ ಮಾಡಿ ಸಿದ್ಧಪಡಿಸಿಕೊಡಿ. ನೀವು ನೀಡಿದ ಪಟ್ಟಿಯನ್ನು ಸಚಿವರೊಂದಿಗೆ ಮಾತನಾಡುತ್ತೇನೆ ಎಂದರಲ್ಲದೆ, ಬೆಳಗುಲಿ ಗ್ರಾಮದ ವಿದ್ಯಾರ್ಥಿನಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಗ್ರಾಮಕ್ಕೆ, ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷ ಬಿ.ಎಂ.ರಾಮಯ್ಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದೊಡ್ಡಸಿದ್ದಯ್ಯ, ಸಹಾಯಕ ನಿರ್ದೇಶಕ ಎಂ. ಸಿ. ಕಾಂತರಾಜು, ಗ್ರಾ.ಪಂ. ಉಪಾಧ್ಯಕ್ಷೆ ಕೆಂಪಮ್ಮ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಸ್. ರಮೇಶ್, ಕಾರ್ಯದರ್ಶಿ ಶಿವಣ್ಣ, ಬೆಳಗುಲಿ ಗ್ರಾಮ ಪಂಚಾಯ್ತಿ ಸದಸ್ಯ ತಾರೀಕಟ್ಟೆ ಶಾಂತರಾಜು ಮತ್ತಿತರರು ಉಪಸ್ಥಿತರಿದ್ದರು.