ಶಿಕ್ಷಣದಿಂದ ಬಡತನ ನಿರ್ಮೂಲನೆ ಸಾಧ್ಯ
ತುಮಕೂರು, ಆ. ೩೧- ಇತ್ತೀಚಿನ ದಿನಗಳಲ್ಲಿ ಬಡತನ ನಿರ್ಮೂಲನೆ ಮಾಡಬೇಕಾದರೆ ಶಿಕ್ಷಣ ಕ್ಷೇತ್ರ ಅಗತ್ಯವಾಗಿದೆ. ಉತ್ತಮ ಶಿಕ್ಷಣ ನೀಡಿದರೆ ಯಶಸ್ಸು ಸಿಗುತ್ತದೆ. ಉತ್ತಮ ವಾತಾವರಣ ಮತ್ತು ಉತ್ತಮ ಪರಿಸರ ಹೊಂದಿದ್ದರೆ ಉತ್ತಮ ಗುರಿ ಮುಟ್ಟಲು ಸಾಧ್ಯ ಎಂದು ವಿ-ಟೆಕ್ ಸೆಲ್ಯೂಷನ್ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾ ಪ್ರದೀಪ್ ಹೇಳಿದರು.
ಗುಬ್ಬಿ ತಾಲ್ಲೂಕಿನ ಗುಡ್ಡದಹಳ್ಳಿ ಹಟ್ಟಿಯಲ್ಲಿ ಮಡಿಲು ಸೇವಾ ಟ್ರಸ್ಟ್, ವಿಪ್ರೋ ಕೇರ್ಸ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಅಕ್ಷರ ಮಡಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕು. ಶಿಕ್ಷಣದಿಂದ ಎಲ್ಲ ಮೂಲಭೂತ ಹಕ್ಕನ್ನು ಉಪಯೋಗಿಸಿಕೊಳ್ಳಬೇಕು. ಮಡಿಲು ಸಂಸ್ಥೆಯ ಜತೆ ಹಲವು ವರ್ಷಗಳ ಒಡನಾಟವಿದೆ. ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಡಿಲು ಸಂಸ್ಥೆ ಮಾಡುತ್ತಿದ್ದು, ಮಡಿಲು ಸಂಸ್ಥೆಯೂ ರಾಜ್ಯಮಟ್ಟದಲ್ಲಿ ಎನ್.ಜಿ.ಒ.ಗಳಿಂದ ಗುರುತಿಸಿಕೊಂಡಿದೆ. ಮಡಿಲು ಸಂಸ್ಥೆಯೂ ಪ್ರತಿ ವರ್ಷವೂ ೬ ಮಡಿಲು ಕಲಿಕಾ ಕೇಂದ್ರದ ಮಕ್ಕಳಿಗೆ ರೈತ ಮಕ್ಕಳು, ಕಾರ್ಮಿಕ ಮಕ್ಕಳು, ಗುಡ್ಡದಹಳ್ಳಿ ಹಟ್ಟಿಯ ಕಾಡಗೊಲ್ಲ ಮಕ್ಕಳ ಜತೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬಿದರೆ ಪಂಚಾಯ್ತಿ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಮಡಿಲು ಸೇವಾ ಟ್ರಸ್ಟ್ ವತಿಯಿಂದ ಎಲ್ಲ ರೈತ ಬುಡಕಟ್ಟು ಕಾಡಗೊಲ್ಲ ಮಕ್ಕಳಿಗೆ ಇತಂಹ ಕಾರ್ಯಕ್ರಮಗಳನ್ನು ರೂಪಿಸಿರುವುದು ಅದ್ಭುತವಾಗಿದೆ. ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಲ್ಲಿರುವ ಪ್ರತಿಭೆಯನ್ನು ರೂಪಿಸುವ ಕೆಲಸ ಮಡಿಲು ಸಂಸ್ಥೆ ಸುಮಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಅಜ್ಞಾನದಿಂದ ಜ್ಞಾನದವರೆಗೆ ಮಾಡಲು ಮಡಿಲು ಸಂಸ್ಥೆ ಹೆಜ್ಜೆ ಮಹತ್ವದ ನಿಲುವುವಾಗಿದೆ ಎಂದು ಹೇಳಿದರು.
ಗ್ರಾಮದ ಮುಖಂಡ ಗುರುಲಿಂಗಯ್ಯ ಮಾತನಾಡಿ, ಹಿಂದುಳಿದ ಶಾಲೆಯ ಮಕ್ಕಳನ್ನು ಆಯ್ಕೆ ಮಾಡಿಕೊಂಡು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕುವ ಕೆಲಸವನ್ನು ಈ ಮಡಿಲು ಸಂಸ್ಥೆ ಸುಮಾರು ೧೦ ವರ್ಷಗಳಿಂದಲೂ ಸಹ ನಡೆಸುತ್ತಾ ಬಂದಿದೆ. ಮಡಿಲು ಸಂಸ್ಥೆ ಹೆಜ್ಜೆ ಮಹತ್ವದ ನಿಲುವುವಾಗಿದೆ. ಅಲೆಮಾರಿ ಜನಾಂಗದ ಸಾಧಕ ಮಕ್ಕಳನ್ನು ಗುರುತಿಸಿ ನೆನಪಿನಲ್ಲಿ ಇಟ್ಟುಕೊಳ್ಳುವುದು ಉತ್ತಮವಾಗಿದೆ. ಬಡ ಮಕ್ಕಳ ನಿರ್ಗತಿಕ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಿ ಎಷ್ಟೋ ಜನಾಂಗದ ಮಕ್ಕಳ ನೆರವಿಗೆ ಮಡಿಲು ಸಂಸ್ಥೆ ಮುಂದಾಗಿದೆ. ಮಡಿಲು ಸಂಸ್ಥೆಯ ಕಾರ್ಯಕ್ರಮಗಳು ಹೀಗೆ ನಿರಂತರವಾಗಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ಬಿದರೆ ಬಿಆರ್‍ಪಿ ಕ್ಲಸ್ಟರ್ ಶಿಕ್ಷಣ ಇಲಾಖೆಯ ಗಿರೀಶ್ ಮಾತನಾಡಿ, ಸುತ್ತಮುತ್ತ ಶಾಲೆಗಳನ್ನು ಗುರುತಿಸಿ ಅವರಿಗೆ ಬೇಕಾದ ಶಾಲಾ ಸಾಮಾಗ್ರಿಗಳಾದ ಪುಸ್ತಕ, ಬ್ಯಾಗ್ ಸೇರಿದಂತೆ ಇತರೆ ಕಲಿಕಾ ಸಮಾಗ್ರಿಗಳನ್ನು ನೀಡುತ್ತಾ ಬಂದಿರುವುದು ಮಡಿಲು ಸಂಸ್ಥೆ. ಬಡ, ನಿರ್ಗತಿಕ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಿ ಎಷ್ಟೋ ಜನಾಂಗದ ಮಕ್ಕಳ ನೆರವಿಗೆ ಮಡಿಲು ಸಂಸ್ಥೆ ಮುಂದಾಗಿದೆ. ಮಡಿಲು ಸಂಸ್ಥೆಯ ಕಾರ್ಯಕ್ರಮಗಳು ಹೀಗೆ ನಿರಂತರವಾಗಿ ನಡೆಯಲಿ ಎಂದರು.
ಮಡಿಲು ಸೇವಾ ಟ್ರಸ್ಟ್ ಮುಖ್ಯಸ್ಥೆ ಲಕ್ಷ್ಮಿ ಅರಸು ಮಾತನಾಡಿ, ತುಮಕೂರಿನ ಸುತ್ತಮುತ್ತಲಿನಲ್ಲಿ ಸುಮಾರು ೧೧ ಕ್ಕೂ ಹೆಚ್ಚು ಕಲಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮುಂದಿನ ವರ್ಷದಲ್ಲಿ ೫ ಕಲಿಕಾ ಕೇಂದ್ರಗಳನ್ನು ನಡೆಸಲಾಗುವುದು. ಕಲಿಕಾ ಕೇಂದ್ರಗಳ ಸರ್ಕಾರಿ ಶಾಲೆಯ ಮಕ್ಕಳಿರುವ ಜಾಗದಲ್ಲಿಯೇ ನಡೆಸಲಾಗುವುದು. ನಾವು ಕಾರ್ಯಕ್ರಮ ಮಾಡುತ್ತಿರುವುದು ಸರ್ಕಾರಿ ಶಾಲೆಯ ಮಕ್ಕಳಿಗಾಗಿ. ಕಳೆದ ವರ್ಷ ಮಡಿಲು ಸಂಸ್ಥೆಗೆ ರಾಜ್ಯಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸರ್ಕಾರವೂ ಸಹ ಇಂತಹ ಮಡಿಲು ಸಂಸ್ಥೆಗೆ ಉತ್ತೇಜನ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಮರಳೂರಿನ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ರೇಖಾ ಕೃಷ್ಣಮೂರ್ತಿ, ಬಿದರೆ ಗ್ರಾ.ಪಂ. ಅಧ್ಯಕ್ಷ ಕೃಷ್ಣಪ್ಪ, ಬಿಆರ್‍ಸಿ ಗಿರೀಶ್, ಮಡಿಲು ಸಂಸ್ಥೆಯ ಅಬ್ರಹಾಂ, ಮುಖಂಡರಾದ ಕುಮಾರಯ್ಯ, ಗುರುಲಿಂಗಯ್ಯ, ಬಸವರಾಜು, ಶಿಕ್ಷಕರಾದ ನಾಗರಾಜು, ನಾಗರತ್ನ ಮತ್ತಿತರರು ಉಪಸ್ಥಿತರಿದ್ದರು.