ಪ್ರಕೃತಿ ಚಿಕಿತ್ಸೆಯಿಂದ ಅಡ್ಡ ಪರಿಣಾಮವಿಲ್ಲ-ಡಾ.ಅರ್ಚನಾ
ಕೋಲಾರ,ಆ,೩೧- ಪ್ರಕೃತಿ ಚಿಕಿತ್ಸೆಯಿಂದ ಆರೋಗ್ಯದ ಮೇಲೆಯಾವುದೇ ಅಡ್ಡಪರಿಣಾಮ ಆಗದು, ಜೀವನದಲ್ಲಿ ಉತ್ತಮ ಆರೋಗ್ಯಕ್ಕಾಗಿ ನಿರಂತರ ಧ್ಯಾನ,ಯೋಗಾಭ್ಯಾಸ ಮಾಡಿ ಎಂದು ಮಂಗಳೂರಿನ ಆಳ್ವಾಸ್ ಆನಂದಮಯ ಆರೋಗ್ಯಧಾಮ ನೇಚರ್ ಕೇರ್ ಅಂಡ್ ಯೋಗ ಆಸ್ಪತ್ರೆಯ ಹಿರಿಯ ತಜ್ಞೆ ಡಾ.ಅರ್ಚನಾ ತಿಳಿಸಿದರು.
ಕೋಲಾರದ ಲಯನ್ಸ್ ಕ್ಲಬ್‌ನಲ್ಲಿಂದು ಆಳ್ವಾಸ್ ಆನಂದಮಯ ಆರೋಗ್ಯಧಾಮ ನೇಚರ್ ಕೇರ್ ಅಂಡ್ ಯೋಗ ಆಸ್ಪತ್ರೆ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಸತ್ಯಸಾಯಿ ಏಜೆನ್ಸೀಸ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಬದಲಾದ ಆಹಾರ ಪದ್ದತಿಗಳಿಂದ ಇಂದು ಆರೋಗ್ಯ ಹಾಳಾಗುತ್ತಿದೆ ಎಂದು ವಿಷಾದಿಸಿದ ಅವರು, ಆರೋಗ್ಯ ರಕ್ಷಣೆಗೆ ಯೋಗ,ಧ್ಯಾನ ಹೆಚ್ಚು ಪರಿಣಾಮಕಾರಿ ಎಂದು ಮನದಟ್ಟು ಮಾಡಿದರು.
ಎಷ್ಟೇ ಆಸ್ತಿ ಐಶ್ವರ್ಯವಿದ್ದರೂ ಉತ್ತಮ ಆರೋಗ್ಯ ಇಲ್ಲವಾದಲ್ಲಿ ಎಲ್ಲವೂ ವ್ಯರ್ಥ ಎಂದ ಅವರು,ತಲೆನೋವು, ಡಯಾಬಿಟೀಸ್, ಹೈಪರ್ ಟೆನ್ಷನ್ ಮತ್ತಿತರ ಆರೋಗ್ಯ ಸಮಸ್ಯೆಗಳಿಗೆ ವಿನಾಕಾರಣ ಮಿತಿಮೀರಿದ ಔಷಧಿ ಸೇವನೆ ಮಾಡುವುದು ಒಳ್ಳೆಯ ಲಕ್ಷಣವಲ್ಲ, ಇದರಿಂದ ಕಿಡ್ನಿ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿ, ಪ್ರಕೃತಿ ಚಿಕಿತ್ಸೆಯಿಂದ ಎಂತಹ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬಹುದು ಎಂದು ವಿವರಿಸಿದರು.
ಆಳ್ವಾಸ್ ಕಾಲೇಜು ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್, ಕುಶಲ ಚಿಕಿತ್ಸೆಗಳ ಕುರಿತು ತರಬೇತಿ ನೀಡುತ್ತಿದೆ ಎಂದ ಅವರು ನಮ್ಮ ಆರೋಗ್ಯಧಾಮದಲ್ಲಿ ಫಿಸಿಯೋಥೆರಪಿ, ಮಸಾಜ್‌ಗೂ ಅವಕಾಶವಿದ್ದು, ಶ್ರದ್ಧಾಪೂರ್ವಕ ಉದಾತ್ತ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಸ್ಥೂಲಕಾಯತೆ ತಡೆಯಲು ನಮ್ಮಲ್ಲಿ ಪ್ರಕೃತಿ ಚಿಕಿತ್ಸೆ ಇದ್ದು, ಇದು ವಿಶ್ವಮಟ್ಟದ್ದಾಗಿದೆ ಎಂದ ಅವರು, ರೋಗಿಗಳು ರೋಗ ಬರುವುದಕ್ಕಿಂತ ಮುಂಚೆಯೇ ನಾವು ಹೇಳುವ ಪ್ರಕೃತಿದತ್ತವಾದ ಯೋಗ,ಧ್ಯಾನ ಮತ್ತಿತರವುಗಳನ್ನು ಅನುಸರಿಸಿದರೆ ಉತ್ತಮ ಆರೋಗ್ಯ ಪಡೆಯಬಹುದು ಎಂದರು.
ಸತ್ಯಸಾಯಿ ಏಜೆನ್ಸೀಸ್‌ನ ಡಾ.ಮಂಜುನಾಥ್ ಮಾತನಾಡಿ, ಪ್ರಕೃತಿ ಚಿಕಿತ್ಸೆಯಲ್ಲಿ ವಿಶ್ವಮಾನ್ಯತೆ ಹೊಂದಿರುವ ಆಳ್ವಾಸ್ ಆನಂದಮಯ ಆರೋಗ್ಯಧಾಮದ ತಜ್ಞರು ಕೋಲಾರಕ್ಕೆ ಆಗಮಿಸಿ ಇಲ್ಲೇ ಉಚಿತ ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಧನ್ಯವಾದ ಸಲ್ಲಿಸಿದರು. ಕೋಲಾರದ ಜನತೆಗೆ ಉಚಿತ ತಪಾಸಣೆ ಸ್ಥಳದಲ್ಲೇ ಚಿಕಿತ್ಸೆಗೆ ಅವಕಾಶ ದೊರೆತಿದ್ದು, ಇದರಿಂದ ಪ್ರಕೃತಿ ಚಿಕಿತ್ಸಾ ವಿಧಾನದ ಕುರಿತು ಅರಿವು ನೀಡುವಲ್ಲಿಯೂ ಈ ಕಾರ್ಯಕ್ರಯ ಯಶಸ್ವಿಯಾಗಿದೆ ಎಂದರು.
ಜಿಲ್ಲೆಯ ಇತಿಹಾಸದಲ್ಲೇ ಇದು ಪ್ರಥಮವಾಗಿದ್ದು, ಆಳ್ವಾಸ್ ಆನಂದಮಯ ಆರೋಗ್ಯ ಧಾಮದ ತಜ್ಞರ ತಂಡವೇ ಇಲ್ಲಿಗೆ ಆಗಮಿಸುತ್ತಿದ್ದು, ಶಿಬಿರದಲ್ಲಿ ಯೋಗ, ನೇಚುರೋಪತಿ, ಫಿಸಿಯೋತೆರಫಿ, ಆಕ್ಯೂಪಂಕ್ಚರ್, ಪ್ರಾಣಾಯಾಮ, ಧ್ಯಾನ ಮತ್ತಿತರವುಗಳ ಮೂಲಕ ವಿವಿಧ ರೋಗಗಳ ನಿವಾರಣೆಗೆ ಮಾರ್ಗವನ್ನು ತಿಳಿಸಿಕೊಡುವುದರ ಜತೆಗೆ ಉಚಿತ ಆರೋಗ್ಯ ತಪಾಸಣೆಯನ್ನೂ ನಡೆಸಿದ್ದು, ನೂರಕ್ಕೂ ಹೆಚ್ಚು ಮಂದಿ ತಪಾಸಣೆಗೆ ಒಳಗಾದರು.
ಶಿಬಿರದಲ್ಲಿ ವೈದ್ಯರಾದ ಡಾ.ಡಾರ್ವೀನ್, ಡಾ.ಶಾರದಾಶೆಟ್ಟಿ, ಡಾ.ಅರ್ಜುನ್ ಆಳ್ವ, ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳಾದ ಬಿ.ಡಿ.ವೆಂಕಟೇಶ್, ಪದ್ಮ ಸತ್ಯಸಾಯಿ ಏಜೆನ್ಸೀಸ್‌ನ ಐ.ಎಸ್.ದಿವ್ಯ, ಸಾಯಿಶ್ರೀಧರ್ ಮತ್ತಿತರರಿದ್ದರು.