ಗ್ರಾಮೀಣ ಪ್ರದೇಶದಲ್ಲಿ ರಂಗಕಲೆ ಇನ್ನೂ ಜೀವಂತ
ತುಮಕೂರು, ಆ. ೩೧- ಜಿಲ್ಲೆ ರಂಗಭೂಮಿಗೆ ತವರೂರು. ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ರಂಗಕಲೆ ಇನ್ನೂ ಜೀವಂತವಾಗಿದೆ. ಕಾವ್ಯೇಷು ನಾಟಕಂ ರಮ್ಯಂ’ ನಾಟಕ ಮನೋಜ್ಞವಾದದ್ದು. ಇಂತಹ ಕಲೆಗೆ ವಿದ್ಯೆಯ ಇತಿಮಿತಿಯಿಲ್ಲ, ಪ್ರತಿಭೆ ಇದ್ದರೆ ಸಾಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಹೇಳಿದರು.
ನಗರದ ಕನ್ನಡ ಭವನದಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಶಾಲೆಗಳಲ್ಲಿ ಸಂಗೀತ, ನಾಟಕ, ನೃತ್ಯ, ಚಿತ್ರಕಲೆ ಬೋಧಿಸುವ ಶಿಕ್ಷಕರಿರಬೇಕು. ಅಲ್ಲಿಂದಲೇ ಇವುಗಳಿಗೆ ಪ್ರೋತ್ಸಾಹ ಸಿಗಬೇಕು. ಸರ್ಕಾರಗಳ ಅನುದಾನ ಬಹಳ ಕಡಿಮೆ ಇದೆ. ಕಲಾವಿದರ ಪ್ರೋತ್ಸಾಹಕ್ಕೆ ಕಾರ್ಪೊರೇಟ್ ಕಂಪನಿಗಳು ಮುಂದೆ ಬರಬೇಕು. ಬೆಂಗಳೂರಿನಲ್ಲಿರುವ ಆಧುನಿಕ ಹೆಸರಾಂತ ಕಲಾವಿದರಿಗೆ ನೀಡುವ ಸಹಾಯಕ್ಕಿಂತ, ಗ್ರಾಮಾಂತರ ಪ್ರದೇಶದ ಪ್ರತಿಭಾನ್ವಿತರನ್ನು ಗುರ್ತಿಸಬೇಕು ಎಂದರು.
ಕರ್ನಾಟಕ ಸರ್ಕಾರದ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಮಾತನಾಡಿ, ತುಮಕೂರು ಜಿಲ್ಲೆಗೆ ಒಂದು ರಂಗಾಯಣ ಸಂಸ್ಥೆ ಮಂಜೂರಾಗಬೇಕು. ನಗರದ ೩೫ ವಾರ್ಡುಗಳಲ್ಲಿ ಬಯಲು ರಂಗಮಂದಿರ ನಿರ್ಮಿಸಬೇಕು ಎಂದರು. ಮತ್ತೊಬ್ಬ ಸದಸ್ಯ ರವೀಂದ್ರ ಸಿರಿವರ ಮಾತನಾಡಿ, ೧೪ ಸಾವಿರ ಪೌರಾಣಿಕ ನಾಟಕಗಳು ಪ್ರತಿವರ್ಷ ನಡೆಯುತ್ತಿವೆ ಎನ್ನುವ ಅಂದಾಜಿದೆ. ಅವುಗಳಲ್ಲಿ ತುಮಕೂರು ಜಿಲ್ಲೆ ಮುಂಚೂಣಿಯಲ್ಲಿದೆ. ಇವುಗಳು ಯಾವುದೇ ಅನುದಾನವಿಲ್ಲದೆ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಕಲಾವಿದರ ಒಕ್ಕೂಟದ ಅಧ್ಯಕ್ಷ ವೀರೇಶ್ ಮಾತನಾಡಿ, ಸರ್ಕಾರಗಳು ಲಕ್ಷಾಂತರ ಕೋಟಿ ಬಜೆಟ್ ಮಂಡಿಸುತ್ತಿದ್ದು, ಕನ್ನಡ ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಅನುದಾನ ನೀಡಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ೧೦ ಮಂದಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಲಾವಿದರಾದ ಮೈಲಾರಪ್ಪ, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು. ಕಲಾವಿದ ಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.