ನಾಥನಿರುವವರಿಗೆ ಯಾರೂ ಅನಾಥರಲ್ಲ: ಹಾರಕೂಡ ಶ್ರೀ
ಬೀದರ್: ಆ.೩೧:ಭಾರತದ ನೆಲ ಉನ್ನತ ಪರಂಪರೆಗಳ ಹಂದರವಾಗಿದ್ದು, ಅದರಲ್ಲಿ ನಾಥ ವಾರಿಕರ್ ಪರಂಪರೆಯೂ ಹೌದು.ನಾಥ ಎಂದರೆ ಒಡೆಯ, ಸರ್ವರ ಒಡೆಯನೇ ಆ ಭಗವಂತ.ನಾಥನಿರುವವರೆಗೆ ಯಾರೂ ಅನಾಥರಲ್ಲ ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಆಲಗೂಡ ಗ್ರಾಮದಲ್ಲಿ ಆಯೋಜಿಸಿದ ಗುರುವಂದನೆ ಹಾಗೂ ೭೦೪ನೇ ತುಲಾಭಾರ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಏಕನಿಷ್ಠೆಯಿಂದ ನಾಥನಲ್ಲಿ ಶ್ರದ್ಧೆ ಭಕ್ತಿಯನ್ನಿಟ್ಟು ಪ್ರಾಪಂಚಿಕ ವಿಷಯವಾಸನೆ ತ್ಯಜಿಸಿ ಪಾರಮಾರ್ಥಿಕದೆಡೆಗೆ ಸಾಗುವವನೇ ಏಕನಾಥ.
ಶ್ರಾವಣ ಮಾಸವೆಂದರೆ ಅಂತರAಗ-ಬಹಿರAಗ ಶುದ್ಧೀಕರಣಗೊಳಿಸಿಕೊಳ್ಳುವ ಪವಿತ್ರ ಪರ್ವಕಾಲವಾಗಿದೆ.
ಕಾಯ-ವಾಚ-ಮನಸಾ ಶುಚಿತ್ವಗೊಂಡು, ಸತ್ಯ ಶುದ್ಧ ಕಾಯಕಧಾರಿಯಾಗಿ ಬದುಕಲು ಶ್ರಾವಣ ಮಾಸ ಆಧ್ಯಾತ್ಮ ನಿಧಿ ಒದಗಿಸುತ್ತದೆ.
ಬದುಕಿನ ಫಲವತ್ತತೆ ಹೆಚ್ಚಿಸಿಕೊಂಡು ದೇವ ವೃಕ್ಷದ ಕೃಷಿಯಿಂದ ಸಾತ್ವಿಕ ಫಲ ಪಡೆದುಕೊಳ್ಳಲು ಶ್ರಾವಣ ಮಾಸ ಅಮೃತ ಕಾಲವೆಂಬುದು ಯಾರೂ ಮರೆಯುವಂತಿಲ್ಲ.
ಪ್ರವಚನ, ಪಾರಾಯಣ, ಕೀರ್ತನೆ, ಭಜನೆ, ಶಿವನಾಮ ಸ್ಮರಣೆಗಳಿಂದ ಮಾರ್ಧನಿಸುವ ಗ್ರಾಮ ಅದು ಡಿವೈನ್ ಪಾರ್ಕ್ ಆಗಿ ಕಂಗೊಳಿಸುತ್ತದೆ.
ಆರಾಧನೆಗಳ ಪರಿ ಬೇರೆ ಬೇರೆ ಎನಿಸಿದರೂ ಅಂತಿಮ ಧ್ಯೇಯ ಅನಂತನದಲ್ಲಿ ಲೀನವಾಗುವುದೆ ಆಗಿದೆ.
ನಮ್ಮ ಆವಿರ್ಭವ, ವಿಕಾಸ ಹಾಗೂ ಪರಿಸಮಾಪ್ತಿಗೆ ಕಾರಣವಾದ ಆ ದಿವ್ಯ ಶಕ್ತಿಯಲ್ಲಿ ನಿಷ್ಠೆಯಿಂದ ದೃಢವಾದ ಮನಸ್ಸನ್ನು ಸಮರ್ಪಿಸುವುದು ಒಂದು ವೃತವೂ ಹೌದು, ತಪಸ್ಸು ಹೌದು.
ಧರ್ಮಾಚಾರಣೆಯೇ ನಮ್ಮ ಸತ್ಯ ಸಂಕಲ್ಪವಾಗಿಸಿಕೊAಡು ಪ್ರತಿದಿನ ದೈವಿಕ ನಾವಿನ್ಯತೆ ಅನುಭವಿಸುವ ಶ್ರೇಷ್ಠ ಚಿಂತನೆಯಲ್ಲಿ ಬದುಕು ಸಾಗಿಸುವುದೇ ನಮ್ಮ ಧ್ಯೇಯವಾಗಬೇಕು.
ಧರ್ಮ ಕಾರ್ಯ ಹಾಗೂ ದಾಸೋಹಕ್ಕೆ ಹೆಸರಾದ ಆಲಗೂಡ ಗ್ರಾಮದ ಎಲ್ಲಾ ಸದ್ಭಕ್ತರು ಕೂಡಿಕೊಂಡು ನಮಗೆ ಗುರುವಂದನೆ ಹಾಗೂ ತುಲಾಭಾರ ಸೇವೆ ಸಲ್ಲಿಸಿರುವುದು ಖುಷಿ ತಂದಿದೆ.
ಈ ಸಮಾರಂಭ ಆಲಗೂಡ ಜನತೆ ಹಾರಕೂಡ ಮಠದಮೇಲೆ ಇಟ್ಟಿರುವ ಅಚಲವಾದ ಭಕ್ತಿಗೆ ದೊಡ್ಡ ನಿದರ್ಶನವಾಗಿದೆ.
ಪ್ರತಿ ಸೂರ್ಯೋದಯದಂದು, ಹಾರಕೂಡ ಚೆನ್ನಬಸವ ಶಿವಯೋಗಿಗಳ ಆಶೀರ್ವಾದ ಮೊದಲ ಉಷಾಕಿರಣದೊಂದಿಗೆ ಆಲಗೂಡ ಗ್ರಾಮಕ್ಕೆ ತಲುಪುವಂತಾಗಲಿ, ಊರಿನಲ್ಲಿ ಯಾವತ್ತು ಸುಭಿಕ್ಷೆ ನೆಲೆಗೊಳ್ಳಲಿ ಎಂದು ಹಾರೈಸಿದರು.
ಆಲಗೂಡ ಪ್ರೌಢಶಾಲೆ ಶಿಕ್ಷಕರಾದ ರಮೇಶ ರಾಜೋಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀಕಾಂತ ಪಾಟೀಲ ಸ್ವಾಗತಿಸಿದರು.
ಬಸಯ್ಯಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ ವೀರೇಶ ಹೊದಲೂರೆ, ತಾನಾಜಿ ಸೋಮವಂಶಿ, ದತ್ತು ಹುಪ್ಪಳ್ಳೆ, ವಾಮನ ಉಕಾವಲೆ, ರಾಮ ತಳನೆ, ರಾಜಕುಮಾರ ವಾಡಿಕರ್, ದಾದಾರಾವ ಪಾಟೀಲ, ಶರಣು ಪೆದ್ದೆ, ಶರಣಪ್ಪ ಬಂಗಾರಿ ಉಪಸ್ಥಿತರಿದ್ದರು.
ಕರಬಸಯ್ಯ ಸ್ವಾಮಿ ಕೋಹಿನೂರ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು.
ಕಾರ್ತಿಕ ಸ್ವಾಮಿ ಯಲದಗುಂಡಿ, ದಿಲೀಪ ದೇಸಾಯಿ, ಶರಣಪ್ಪ ಸುಂಠಾಣ ಹಾಗೂ ಖ್ಯಾತ ಗಾಯಕಿ ಚಂದ್ರಿಕಾ ಸಂಗೀತ ಸೇವೆ ಸಲ್ಲಿಸಿದರು.
ಬಸಯ್ಯ ಸ್ವಾಮಿ ವಂದಿಸಿದರು.
ಖ್ಯಾತ ನಿರೂಪಕ ಭಕ್ತ ಕುಂಬಾರ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮಕ್ಕೆ ಆಗಮಿಸಿದ ಹಾರಕೂಡ ಪೂಜ್ಯರನ್ನು ಅಲಂಕೃತ ಸಾರೋಟಿನಲ್ಲಿ ಅದ್ದೂರಿ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಚಿತ್ರ : ಬಸವಕಲ್ಯಾಣ ತಾಲೂಕಿನ ಆಲಗೂಡ ಗ್ರಾಮದಲ್ಲಿ ಜರುಗಿದ ಗುರುವಂದನೆ ಹಾಗೂ ೭೦೪ನೇ ತುಲಾಭಾರ ಸಮಾರಂಭವನ್ನು ಆರುಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಶ್ರೀಕಾಂತ ಪಾಟೀಲ, ಬಸಯ್ಯಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ ವೀರೇಶ ಹೊದಲೂರೆ, ಶರಣು ಪೆದ್ದೆ, ನಾಗೇಶ ಮಹಾಜನ, ಅಪ್ಪಣ್ಣ ಜನವಾಡ ಮುಂತಾದವರು ಉಪಸ್ಥಿತರಿದ್ದರು.