ಸರ್ಕಾರಿ ನಿವೃತ್ತ ನೌಕರರ ಸಂಘಕ್ಕೆ ನಿವೇಶನ ನೀಡಲು ಬೈರಪ್ಪ ಆಗ್ರಹ
ಕೋಲಾರ,ಆ.೩೧- ಕೋಲಾರ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘಕ್ಕೆ ಕಟ್ಟಡ ಕಟ್ಟಲು ಕೋಲಾರ ನಗರದ ಹಳೇ ಮಾಧ್ಯಮಿಕ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ೧೦೦೧೦೦ ಅಡಿಗಳ ನಿವೇಶನವನ್ನು (ಜಮೀನು) ಸರ್ಕಾರದಿಂದ ಉಚಿತವಾಗಿ ಮಂಜೂರು ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ.ಬೈರಪ್ಪ ಸರ್ಕಾರವನ್ನು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಜಿಲ್ಲಾ ಶಾಖೆ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ೮೦ ವರ್ಷ ವಯೋಮಿತಿ ಪೂರೈಸಿರುವ ರಾಜ್ಯ ಸರ್ಕಾರಿ ನಿವೃತ್ತ ನೌಕರರಿಗೆ ಸನ್ಮಾನ ಮತ್ತು ದ್ವೈವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಘದಲ್ಲಿ ೫,೫೦೦ ಸದಸ್ಯರಿರುತ್ತರೆ. ನಿವೃತ್ತ ನೌಕರರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಭೆಗಳನ್ನು ನಡೆಸಲು ಸಂಘಕ್ಕೆ ತನ್ನದೇ ಆದ ಸಂಘದ ಸ್ವಂತ ಕಟ್ಟಡ ಇಲ್ಲದೆ ಸಮಸ್ಯೆಯಾಗಿದೆ. ಪ್ರಾರಂಭಿಕ ದಿನಗಳಲ್ಲಿ ಸಭೆಗಳನ್ನು ಪ್ರಧಾನ ಅಂಚೆ ಕಚೇರಿಯ ಬಳಿ ಇರುವ ಬಯಲು ಬಸವೇಶ್ವರ ದೇವಾಲಯದ ಆವರಣದಲ್ಲಿ ಇಲ್ಲವಾದಲ್ಲಿ ಸರ್ವಜ್ಞ ಪಾರ್ಕಿನಲ್ಲಿ ಸಭೆಗಳನ್ನು ನಡೆಸಲಾಗುತ್ತಿತ್ತು. ಈ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರನ್ನು ಸಂಪರ್ಕಿಸಲಾಗಿ ಅವರ ಕಟ್ಟದಲ್ಲಿ ಸಭೆಗಳನ್ನು ನಡೆಸಲು ಅವಕಾಶ ಕೊಟ್ಟಿದ್ದರು, ಈಗ ಸರ್ಕಾರಿ ನೌಕರರ ಭವನದ ಕಟ್ಟಡವನ್ನು ಡೆಮಾಲೀಷನ್ (ರಿನೋವೇಶನ್) ಮಾಡಿರುವ ಕಾರಣ ವಿವೃತ್ತ ನೌಕರರ ಕುಂದು ಕೊರತೆಗಳ ಬಗ್ಗೆ ಚರ್ಚಿಸಲು ಹಾಗೂ ಮಾಹೆಯಾನ ಸಭೆಗಳನ್ನು ನಡೆಸಲು ಸ್ಥಳಾವಕಾಶವಿಲ್ಲದೆ ಇರುವುದರಿಂದ ಕೋಲಾರ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘಕ್ಕೆ ತನ್ನದೇ ಆದ ಸ್ವಂತ ಕಟ್ಟಡ ಕಟ್ಟಿಕೊಳ್ಳಲು ಕೋಲಾರ ನಗರದ ಹಳೇ ಮಾಧ್ಯಮಿಕ ಶಾಲೆಯ ಆವರಣದಲ್ಲಿ ನಿವೃತ್ತ ನೌಕರರ ಭವನ ಕಟ್ಟಿಕೊಳ್ಳಲು ಘನ ರಾಜ್ಯ ಸರ್ಕಾರದಿಂದ ೧೦೦೧೦೦ ಅಡಿಗಳ ನಿವೇಶನವನ್ನು (ಜಮೀನು) ಮಂಜೂರು ಮಾಡಿಕೊಡಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಕೆ.ದ್ಯಾವರಪ್ಪ ಅಧ್ಯಕ್ಷತೆ ಮಾತನಾಡಿ, ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘವು ಮುಂದಿನ ದಿನಗಳಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಸ್ವಂತ ಕಟ್ಟಡ ಇಲ್ಲದೆ ಇರುವುದು ಬೇಸರದ ಸಂಗತಿ. ಇದರ ಸಲುವಾಗಿ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಕಾರ್ಯಚಟುವಟಿಕೆಗಳನ್ನು ಮುಂದುವರೆಸಲು ಸಂಘವು ಹಲವು ಉದ್ದೇಶಗಳನ್ನು ಪೂರೈಸಲು ಸಮ್ಮತಿಯನ್ನು ಹೊಂದಿರುತ್ತದೆ. ನಿವೇಶನವನ್ನು ಜಮೀನು ಮಂಜೂರು ಮಾಡಿಸಿ ಸಂಘದ ಬೇಡಿಕೆಯನ್ನು ಈಡೇರಿಸಿ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.ಕೋಲಾರ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎ.ಜಯರಾಮರೆಡ್ಡಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಸಂಘವು ನಡೆದ ಬಂದ ಹಾದಿ ಹಾಗೂ ಸಂಘದ ಪ್ರಗತಿಯ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಜಿಲ್ಲಾ ಶಾಖೆಯ ಗೌರವಾಧ್ಯಕ್ಷ ಶಂಕರಾಚಾರಿ, ಖಜಾಂಚಿ ಕೆ.ಗೋಪಾಲರೆಡ್ಡಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಗೋವಿಂದಪ್ಪ, ಬೆಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಡಾ.ಹೆಚ್.ಮುನಿಯಪ್ಪ, ಉಪಾಧ್ಯಕ್ಷರಾದ ಎಂ.ವೆಂಕಟಸ್ವಾಮಿ, ನಾರಾಯಣಮ್ಮ, ಯಲವಾರ ಮುನಿವೆಂಕಟಪ್ಪ, ಎಂ.ನಾಗರಾಜ್, ಪೈಲ್ವಾನ್ ಆಂಜನಪ್ಪ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಕೆ.ವಿ.ನಂಜಾಮರಿ, ಕೆ.ಆರ್.ಎನ್.ಕೃಷ್ಣಮೂರ್ತಿ, ಲೆಕ್ಕಪರಿಶೋಧಕ ಲಕ್ಷ್ಮಯ್ಯ, ಸದಸ್ಯರಾದ ಡಿ.ವಿ.ಮುನಿಯಪ್ಪ, ಸೊಣ್ಣಯ್ಯ, ಬಿ.ರಾಮಕೃಷ್ಣಪ್ಪ, ಮುಳಬಾಗಿಲು ಅಧ್ಯಕ್ಷ ನಂಜುಂಡಪ್ಪ, ಮಾಲೂರು ಅಧ್ಯಕ್ಷ ವೆಂಕಟಸ್ವಾಮಿ, ಬಂಗಾರಪೇಟೆ ಅಧ್ಯಕ್ಷ ಕೆ.ಪೆರುಮಾಳ್, ಶ್ರೀನಿವಾಸಪುರ ಅಧ್ಯಕ್ಷ ಸಿ.ನಾರಾಯಣರೆಡ್ಡಿ, ಕೆ.ಜಿ.ಎಫ್ ಅಧ್ಯಕ್ಷ ವೀರವೆಂಕಟಪ್ಪ ಉಪಸ್ಥಿತರಿದ್ದರು.