ವಿದ್ಯಾರ್ಥಿಗಳು ಹೆಚ್ಚಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ
ಕೋಲಾರ,ಆ.೩೧- ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ತೋರಲು ಕ್ರೀಡೆಗಳು ಸಹಕಾರಿಯಾಗಲಿದ್ದು, ವಿದ್ಯಾರ್ಥಿಗಳು ಹೆಚ್ಚಾಗಿ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಅಪರ ಜಿಲ್ಲಾಧಿಕಾರಿ ಮಂಗಳಾ ಕರೆ ನೀಡಿದರು.
ನಗರದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೋಲಾರ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಾಗೂ ವಿವಿಧ ಕ್ರೀಡಾ ಸಂಸ್ಥೆಗಳ ವತಿಯಿಂದ ಮೇಜರ್ ಧ್ಯಾನ್ ಚಂದ್ ನೆನಪಿನ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಕ್ರೀಡಾ ಪಟುಗಳು ಓದಿನ ಜೊತೆಗೆ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ, ತಂದೆ ತಾಯಂದಿರಿಗೆ, ಶಾಲೆಗಳಿಗೆ, ಗುರುಗಳಿಗೆ ಕೀರ್ತಿ ತರುವಂತೆ ಕಿವಿಮಾತು ಹೇಳಿದರು.
ಜಿಲ್ಲೆಯಲ್ಲಿ ಸುಸಜ್ಜಿತ ಸಿಂಥೆಟಿಕ್ ಟ್ರ್ಯಾಕ್ ಕ್ರೀಡಾಂಗಣ ನವೀಕರಣಗೊಂಡಿದ್ದು,ಸದುಪಯೋಗ ಪಡೆದುಕಕೊಂಡು, ಉತ್ತಮ ಕ್ರೀಡಾ ಪಟುಗಳಾಗಿ ಹೊರ ಹೊಮ್ಮುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ ಶುಭ ಹಾರೈಸಿದರು.
ಕ್ರೀಡಾ ಪಟುಗಳು ಶ್ರಮವಹಿಸಿ ಅಭ್ಯಾಸ ಮಾಡಿದರೆ, ತಮಗೆ ಪ್ರತಿಫಲ ದೊರೆಯುತ್ತದೆ. ಈ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ವಿಜಯಶಾಲಿಗಳಾಗಿ ಎಂದು ಹಿರಿಯ ಕ್ರೀಡಾ ಪಟು, ನಿವೃತ್ತ ಶಿಕ್ಷಕ ಆರ್.ಶ್ರೀನಿವಾಸನ್ ತಿಳಿಸಿ, ತಮ್ಮ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಎನ್.ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಆರ್.ರಾಘವೇಂದ್ರ, ಹಿರಿಯ ಕ್ರೀಡಾಪಟು, ತರಬೇತುದಾರ ಹೆಚ್.ಜಗನ್ನಾಥನ್, ಜಿಲ್ಲಾ ಕಾಂಗ್ರೆಸ್ ಎಸ್.ಸಿ.ಘಟಕದ ಅಧ್ಯಕ್ಷ ಕೆ.ಜಯದೇವ್, ಎನ್.ಐ.ಎಸ್ ಅಥ್ಲೆಟಿಕ್ ಕೋಚ್ ಎನ್.ಆರ್.ರಮೇಶ್, ಹಿರಿಯ ಕ್ರೀಡಾಪಟುಗಳಾದ ಅಂಚೆ ಅಶ್ವಥ್, ಹಾಬಿ ರಮೇಶ್, ಪಿ.ಎಸ್.ಐ ಜಗನ್ನಾಥ್, ತರಬೇತುದಾರ ಎಂ.ವೆಂಕಟೇಶ್, ಕೆ.ಎ.ಎ ಉಪಾಧ್ಯಕ್ಷ ಗೌಸ್ ಖಾನ್, ಜಂಟಿ ಕಾರ್ಯದರ್ಶಿ ರಾಜೇಶ್ ಬಾಬು, ಖಜಾಂಚಿ ಪುರುಷೋತ್ತಮ್, ಸದಸ್ಯ ನಾಗೇಶ್, ಕೆ.ಜಿ.ಎಫ್‌ನ ಡೊಮನಿಕ್, ಕಾಶಿ ಮತ್ತಿತರರು ಉಪಸ್ಥಿತರಿದ್ದರು.
ರಸ್ತೆ ಓಟದ ಸ್ಪರ್ಧೆಯನ್ನು ೧೪ ರಿಂದ ೧೬ ವರ್ಷದೊಳಗಿನ ಬಾಲಕ (೪ ಕಿ.ಮೀ), ಬಾಲಕಿಯರಿಗೆ (೩ ಕಿ.ಮೀ) ಏರ್ಪಡಿಸಲಾಗಿತ್ತು. ೧೪ ವರ್ಷದೊಳಗಿನ ಬಾಲಕ/ಬಾಲಕಿಯರ ವಿಭಾಗದಲ್ಲಿ ನಂದನ್.ಆರ್ (ಪ್ರಥಮ), ಡಿ.ಆರ್.ಧನುಷ್ (ದ್ವಿತೀಯ), ಧನುಷ್ .ಎಸ್ ( ತೃತೀಯ ) ಮತ್ತು ನಕ್ಷತ್ರ ( ಪ್ರಥಮ), ವೆನ್ನಲಾ (ದ್ವಿತೀಯ ), ದೀಕ್ಷಾ ( ತೃತೀಯ).
೧೬ ವರ್ಷದೊಳಗಿನ ಬಾಲಕ/ ಬಾಲಕಿಯರ ವಿಭಾಗದಲ್ಲಿ ವಿದ್ಯಾಸಾಗರ್ ( ಪ್ರಥಮ), ಸಿಲಂಬರಸನ್ (ದ್ವಿತೀಯ), ಮಹೇಶ್ ಬಾಬು (ತೃತೀಯ) ಹಾಗೂ ಅಂಜಲಿ .ಎನ್ (ಪ್ರಥಮ), ಅಮ್ಮುಲು (ದ್ವಿತೀಯ), ಸ್ಪಂದನಾ ( ತೃತೀಯ) ಸ್ಥಾನ ಗಳಿಸಿದ್ದಾರೆ.
ವಿವಿಧ ಶಾಲೆಗಳ ಬಾಲಕ/ ಬಾಲಕಿಯರು ಭಾಗವಹಿಸಿದ್ದರು. ವಿಜೇತರಾದ ಕ್ರೀಡಾ ಪಟುಗಳಿಗೆ ಪದಕ ಹಾಗೂ ಪಾಲ್ಗೊಂಡವರಿಗೆ ಪ್ರಶಂಸಾ ಪತ್ರಗಳನ್ನು ವಿತರಿಸಲಾಯಿತು. ರೇಣುಕಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.