ಪರಿಸರ ಸ್ನೇಹಿ ಗಣಪತಿ ಪೂಜಿಸಲು ಸಹಕರಿಸಿ
ಕೋಲಾರ,ಆ,೩೧- ವಿದ್ಯಾರ್ಥಿಗಳು ಪೋಷಕರಿಗೆ ಒತ್ತಾಯ ಮಾಡದೇ ಮಾರುಕಟ್ಟೆಯಲ್ಲಿ ಸಿಗುವ ಪರಿಸರಕ್ಕೆ ಮಾರಕವಾದ ಗಣಪತಿಗಳನ್ನು ಪೂಜಿಸದೇ ಪರಿಸರ ಸ್ನೇಹಿ ಗಣಪತಿಗಳನ್ನು ಪೂಜಿಸುವ ಮೂಲಕ ಪರಿಸರ ಸಂರಕ್ಷಣೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಪರಿಸರ ಅಧಿಕಾರಿ ರಾಜು ತಿಳಿಸಿದರು
ನಗರದ ರವಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೋಲಾರ, ರೋಟರಿ ಕೋಲಾರ ನಂದಿನಿ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಛೇರಿ ಕೋಲಾರ ವತಿಯಿಂದ ಆಯೋಜಿಸಿದ್ದ ಅರಿಶಿಣ ಗಣಪತಿ ತಯಾರಿಸುವ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡಬಹುದು, ಮುಂದಿನ ವಾರ ನಡೆಯುವ ಗಣೇಶ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಬಣ್ಣಗಳನ್ನು ಬಳಿದ ಹಾಗೂ ಪಿ.ಓ.ಪಿ ಗಣಪಗಳನ್ನು ಕೊಳ್ಳದೇ ತಾವೇ ತಮ್ಮ ಮನೆಗೆ ಬೇಕಾದ ಅರಿಶಿಣ ಗಣಪತಿಗಳನ್ನು ತಯಾರಿಸಿ ಬಳಸುವ ಮೂಲಕ ನಮ್ಮ ಸುತ್ತಲಿನ ವಾತಾವರಣವನ್ನು ಉತ್ತಮವಾಗಿಟ್ಟು ಕೊಳ್ಳೋಣ ಎಂದರು.
ಜಿಲ್ಲಾ ಆಯುಕ್ತ ಕೆ.ಆರ್.ಸುರೇಶ್ ಮಾತನಾಡಿ ನಮ್ಮ ಸಂಸ್ಥೆಯ ವತಿಯಿಂದ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಪರಿಸರ ಸ್ನೇಹಿ ಗಣಪತಿಗಳನ್ನು ಹೇಗೆ ಮಾಡುವ ಹಾಗೂ ಬಳಸುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದು, ಈ ಕಾರ್ಯಗಾರದಲ್ಲಿ ಮಕ್ಕಳು ತುಂಭಾ ಉತ್ಸಾಹದಿಂದ ಭಾಗವಹಿಸುತ್ತಾ ತಮ್ಮ ಮನೆಗಳ ಸಮೀಪದ ಜನರಿಗೂ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿರುವುದು ನಮಗೆ ಸಂತಸ ತಂದಿದೆ, ನಾವು ನೀವು ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಣೆ ಮಾಡೋಣ ಎಂದು ತಿಳಿಸಿದರು.
ರೋಟರಿ ಕೋಲಾರ ನಂದಿನಿ ಅಧ್ಯಕ್ಷ ಸ್ಕೌಟ್ ಬಾಬು ರವರು ಮಾತನಾಡಿ ಈ ವರ್ಷ ನಮ್ಮ ಸಂಸ್ಥೆ ಹದಿನೈದು ಸಾವಿರ ವಿದ್ಯಾರ್ಥಿಗಳಿಗೆ ನೇರವಾಗಿ ಅಥವಾ ಆನ್ ಲೈನ್ ನಲ್ಲಿ ಅರಿಶಿಣ ಗಣಪತಿಯನ್ನು ತಯಾರಿಸುವ ಬಗ್ಗೆ ತರಬೇತಿಯನ್ನು ನೀಡಿ , ತರಬೇತಿ ಪಡೆದ ಪ್ರತಿ ವಿದ್ಯಾರ್ಥಿ ಕನಿಷ್ಟ ಐದು ಗಣಪತಿಗಳನ್ನು ತಯಾರಿಸಿ ತಮ್ಮ ಸ್ನೇಹಿತರಿಗೆ ಅಥವಾ ಬಂಧು ಬಳಗಕ್ಕೆ ನೀಡುವ ಮೂಲಕ ಪರಿಸರ ಮಾಲಿನ್ಯವಾಗುವುದನ್ನು ತಡೆಯಲು ಪ್ರಯತ್ನಿಸೋಣ ಎಂದರು.
ರವಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸುಷ್ಮಾ ರವರು ಮಾತನಾಡಿ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಆಶಯಗಳು ಪರಿಸರಕ್ಕೆ ಪೂರಕವಾಗಿದ್ದು, ಇಂತಹ ಕಾರ್ಯಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಹೆಚ್ಚಿದ್ದು, ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಉತ್ತಮ ಪರಿಸರವನ್ನು ಉಳಿಸಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಕೌಟ್ಸ್ ಸಂಸ್ಥೆಯ ವಿಠಲ್ ರಾವ್ , ಉಮಾದೇವಿ, ಹರೀಶ್, ಧನುಂಜಯ್, ಹೇಮಾವತಿ, ಶಾಲಾ ಮುಖ್ಯ ಶಿಕ್ಷಕಿ ಭವಾನಿ, ಬಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ ರೆಡ್ಡಿ, ಶಾಲಾ ಶಿಕ್ಷಕರು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.