ಸಿಎಂ ವಿರುದ್ದ ರಾಜ್ಯಪಾಲರ ತೀರ್ಮಾನ ಅತುರದ್ದಾಗಿದೆ: ಆರ್. ಬಾಲರಾಜು
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.31- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ರಾಜ್ಯಪಾಲರು ತನಿಖೆಗೆ ಆದೇಶ ನೀಡಿರುವುದು ಅತುರದ ನಿರ್ಧಾರವಾಗಿದ್ದು, ಮತ್ತೊಂದು ಬಾರಿ ಈ ವಿಚಾರದ ಬಗ್ಗೆ ಪರಿಶೀಲನೆ ಮಾಡಬೇಕಾಗಿತ್ತು. ಜನ ಬೆಂಬಲದ ಸರ್ಕಾರ ವಿರುದ್ದ ಇಂಥ ನಿರ್ಣಯಗಳು ಅಭಿವೃದ್ದಿಗೆ ಮಾರಕವಾಗುತ್ತದೆ ಎಂದು ಜಿ.ಪಂ. ಮಾಜಿ ಸದಸ್ಯ ಆರ್. ಬಾಲರಾಜು ತಿಳಿಸಿದರು.
ನಗರದ ಜಿಲ್ಲಾಕಾರ್ಯ ನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನೀಡುವ ಜೊತೆಗೆ 136 ಶಾಸಕರ ಬೆಂಬಲದೊಂದಿಗೆ ಮುಖ್ಯಮಂತ್ರಿಗಳಾಗಿದ್ದಾರೆ. ಕಳೆದ 40 ವರ್ಷಗಳಿಂದ ಒಂದು ಕಪ್ಪುಚುಕ್ಕೆ ಇಲ್ಲದೇ ರಾಜಕಾರಣ ಮಾಡಿಕೊಂಡು ಬಂದಿರುವ ಸಿದ್ದರಾಮಯ್ಯ ವಿರುದ್ದ ಮುಡಾ ಹಗರಣದ ಮಸಿಯನ್ನು ಹಾಕಲು ವಿರೋಧ ಪಕ್ಷಗಳು ಸಂಚು ಮಾಡಿದೆ. ಇದು ಯಾವುದೇ ಕಾರಣಕ್ಕೆ ಸಫಲವಾಗುವುದಿಲ್ಲ. ನ್ಯಾಯಾಲಯವು ಸಹ ಸಿದ್ದರಾಮಯ್ಯ ಅವರ ಪರವಾಗಿ ತೀರ್ಪು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಪಾಲರು ಸಿಎಂ ವಿರುದ್ದ ನೀಡಿರುವ ತನಿಖೆ ಅದೇಶವು ಜನಾಭಿಪ್ರಾಯದ ಸರ್ಕಾರದ ವಿರುದ್ದ ಷಡ್ಯಂತರ ನಡೆಯುತ್ತಿದೆ ಎಂಬ ಭಾವನೆ ಮೂಡಿದೆ. ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ನಡೆಸುತ್ತಿರುವ ಪ್ರಯತ್ನ ವಿಫಲವಾಗಲಿದೆ. ವಿರೋಧ ಪಕ್ಷವಾದ ಬಿಜೆಪಿ ಹಾಗು ಜೆಡಿಎಸ್ ಸರ್ಕಾರದ ತಪ್ಪುಗಳನ್ನು ರಚನಾತ್ಮಕವಾಗಿ ಟೀಕೆ ಮಾಡುವ ಮೂಲಕ ತಿದ್ದುಕೊಳ್ಳಲು ಅವಕಾಶ ನೀಡಬೇಕಾಗಿತ್ತು. ಇದನ್ನು ಬಿಟ್ಟು ಜನ ಬೆಂಬಲದ ಸರ್ಕಾರವನ್ನು ತೆಗೆಯುವ ಪ್ರಯತ್ನ ಸರಿಯಾದ ಕ್ರಮವಲ್ಲ. ಕಳೆದ ಆರು ತಿಂಗಳ ಹಿಂದೆಯೇ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿ ಜೆಡಿಎಸ್ ಪಕ್ಷದ ಮುಖಂಡರು ಹೇಳುತ್ತಿದ್ದರು. ಈಗ ಇದರ ಒಳ ಮರ್ಮ ಅರ್ಥವಾಗುತ್ತಿದೆ. ಇದರ ವಿರುದ್ದ ಈಗಾಗಲೇ ನಮ್ಮ ಪಕ್ಷದ ನಾಯಕರು ಧ್ವನಿ ಎತ್ತಿದ್ದಾರೆ. ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದಾರೆ. ವಾದ ವಿವಾದಗಳನ್ನು ಆಲಿಸುತ್ತಿರುವ ನ್ಯಾಯಾಧೀಶರು ಅಂತಿಮವಾಗಿ ಸರ್ಕಾರ ಪರವಾಗಿ ತೀರ್ಪು ನೀಡಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಬಾಲರಾಜು ತಿಳೀಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್, ಮುಖಂಡರಾದ ಪುಟ್ಟಸ್ವಾಮಿ, ಶಿವಲಿಂಗೇಗೌಡ, ರಾಜಣ್ಣ, ಮರಿಸ್ವಾಮಿ, ಶಿವಕುಮಾರ್ ಇದ್ದರು.