ಅಂಚೆ ಸಂಪರ್ಕ ಅಭಿಯಾನ
ಸಂಜೆವಾಣಿ ನ್ಯೂಸ್
ಮೈಸೂರು: ಆ.31:- ಪೆÇೀಸ್ಟ್ ಎಂಬ ಕೂಗು ಎಲ್ಲರನ್ನು ಎಚ್ಚರಿಸುವ ಮಾಂತ್ರಿಕ ಶಕ್ತಿಯನ್ನು ಹೊಂದಿದೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.
ಭಾರತೀಯ ಅಂಚೆ ಇಲಾಖೆ ಬೋಗಾದಿಯ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ಅಂಚೆ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಪ್ರಪಂಚದಲ್ಲಿ ಮೊದಲ ಬಾರಿಗೆ ಬ್ಯಾಬಿಲೋನಿಯಾ ಸಾಮ್ರಾಜ್ಯದಲ್ಲಿ ಮಣ್ಣಿನ ಫಲಕಗಳ ಮೂಲಕ ಪ್ರಾರಂಭವಾದ ಅಂಚೆ ಸೇವೆ ನಂತರ ಈಜಿಪ್ಟ್, ಪರ್ಷಿಯಾದಲ್ಲಿ ವಿಸ್ತರಿಸಿ ಭಾರತದಲ್ಲಿ 1766ರಲ್ಲಿ ಪ್ರಾರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಪ್ರಪಂಚದ ಜನರ ನಡುವೆ ಸಂಬಂಧವನ್ನು ಬೆಸೆಯುವ ಕೆಲಸವನ್ನು ಅಂಚೆ ಇಲಾಖೆ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ. ಸೊಗಸಿನ ಸುದ್ಧಿ ಮತ್ತು ವ್ಯಸನದ ವಾರ್ತೆಯನ್ನು ಕೊಡುವ ಅಂಚೆ ಇಲಾಖೆಗೆ ಎಲ್ಲಾ ಸುದ್ಧಿಗಳು ಒಂದೇ ಆಗಿದ್ದು, ನಿಟ್ಟುಸಿರೆದೆಯನ್ನು ನೀಗಿಸಿ, ನಿರಾಸೆ ಎದೆಯನ್ನು ಬೆಳಗಿಸಿ, ಹೆಣ್ಣಿನ ಕಂಬನಿ ಬತ್ತಿಸಿ, ಆಶಾ ಜ್ಯೋತಿ ಹೊತ್ತಿಸುವ ಸೇವಾ ಕೈಂಕರ್ಯವನ್ನು ಭಾರತೀಯ ಅಂಚೆ ಇಲಾಖೆ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಭಾರತೀಯ ಅಂಚೆ ಇಲಾಖೆಯ ಮೈಸೂರಿನ ವೆಸ್ಟ್ ಸಬ್ ಡಿವಿಷನ್‍ನ ಎಎಸ್‍ಪಿ ಎಂ.ಜೆ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರ್ಕಾರ ಅಂಚೆ ಸೇವೆಯನ್ನು ಮನೆ ಬಾಗಿಲಿಗೆ ಕೊಂಡೊಯ್ಯುವ ಕಾರ್ಯಕ್ರಮವನ್ನು ಅಂಚೆ ಇಲಾಖೆ ಮೂಲಕ ಪ್ರಾರಂಭಿಸಿದ್ದು, ಉಳಿತಾಯ ಖಾತೆ, ಆಧಾರ್ ಸೇವೆ, ಐಪಿಪಿಬಿ ಖಾತೆ, ಜೀವವಿಮೆ ಮತ್ತು ವಿವಿಧ ಬಿಲ್‍ಗಳ ಪಾವತಿಗಳನ್ನು ಅಂಚೆ ಸಂಪರ್ಕ ಅಭಿಯಾನದಲ್ಲಿ ಸೇರಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬೋಗಾದಿ ಅಂಚೆ ಕಚೇರಿಯ ಎಸ್‍ಪಿಎಂ ಸುಜಾತ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಗ್ರಾ.ಪಂ ಅಧ್ಯಕ್ಷ ನಾಗರಾಜು ಮಾತನಾಡಿದರು. ನಯನ ಎಸ್.ಸ್ವಾಮಿ ಪ್ರಾರ್ಥನೆ ಮಾಡಿದರೆ ಪ್ರಸನ್ನ ಕುಮಾರ್ ಸ್ವಾಗತಿಸಿದರು. ಟಿ.ರಾಣಿ ನಿರೂಪಣೆ ಮಾಡಿದರೆ ನಟೇಶ್ ವಂದಿಸಿದರು.