ದೇಶದಲ್ಲಿ ಕುಲಾಂತರಿ ಆಹಾರ ಬೆಳೆಗಳನ್ನು ನಿಷೇಧಿಸಿ
ಸಂಜೆವಾಣಿ ನ್ಯೂಸ್
ಮೈಸೂರು: ಆ.31:- ಮನುಷ್ಯನ ಆರೋಗ್ಯ ಮತ್ತು ಪರಿಸರದ ಮೇಲೆ ಅಡ್ಡ ಪರಿಣಾಮ ಬೀರುವ ಕುಲಾಂತರಿ ಆಹಾರ ಬೆಳೆಗಳಿಗೆ ಯಾವುದೇ ಕಾರಣಕ್ಕೂ ದೇಶದಲ್ಲಿ ಅವಕಾಶ ನೀಡಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧÀ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.
ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಣಿಜ್ಯ ಬೆಳೆಗಳಲ್ಲಿ ಕುಲಾಂತರಿ ಬಿಟಿ ಹತ್ತಿಯನ್ನು ಈಗಾಗಲೇ ದೇಶದ ರೈತರ ಹೊಲಕ್ಕೆ ಇಳಿಸಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದೇವೆ. ಈ ನಡುವೆ ಕುಲಾಂತರಿ ಸಾಸಿವೆ ಬೆಳೆಯನ್ನು ರೈತರ ಹೊಲದಲ್ಲಿ ಬೆಳೆಸಲು ಬಹುರಾಷ್ಟ್ರೀಯ ಬೀಜ ಕಂಪನಿಗಳು ಪ್ರಯತ್ನ ಮಾಡಿದ ಹಿನ್ನೆಲೆಯಲ್ಲಿ ಇದರ ವಿರುದ್ದ ರೈತ ಸಂಘಟನೆಗಳು ಮತ್ತು ರೈತ ಕೃಷಿ ವಿಜ್ಞಾನಿಗಳು ಸುಪ್ರಿಂ ಕೋರ್ಟ್‍ನಲ್ಲಿ ರಿಟ್ ಪಿಟಿಷನ್ ಸಲ್ಲಿಸಿದ್ದರು. ಸರ್ವೋಚ್ಚ ನ್ಯಾಯಾಲಯ ಸಾರ್ವಜನಿಕರ ಆತಂಕ ಅರ್ಥ ಮಾಡಿಕೊಂಡು ರೈತ ಸಂಘಟನೆಗಳು, ಕೃಷಿ ವಿಜ್ಞಾನಿಗಳು, ಕಂಪನಿಗಳೊಡನೆ ಸಮಾಲೋಚನೆ ನಡೆಸಿ ನಂತರ ಈ ಸಂಬಂಧ ರಾಷ್ಟ್ರೀಯ ನೀತಿ ರೂಪಿಸಬೇಕೆಂದು ಆದೇಶ ಮಾಡಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡ ಯಾವುದೇ ಕಾರಣಕ್ಕೂ ಕುಲಾಂತರಿ ಆಹಾರ ತಳಿಗಳಿಗೆ ಅವಕಾಶ ಕಲ್ಪಿಸಬಾರದು. ಈ ಸಂಬಂಧ ವಿಧಾನಸಭಾ ಅಧಿವೇಶನದಲ್ಲಿ ನಿರ್ಣಯ ಕೈಗೊಂಡು ಈ ತಳಿಗಳನ್ನು ನಿಷೇದಿಸಬೇಕು ಎಂದು ಆಗ್ರಹಿಸಿದರು.
ದಿನೇ ದಿನೇ ಕೃಷಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕುತ್ತಿದೆ. ಹೀಗಾಗಿ ಸರ್ಕಾರ ರೈತರಿಗೆ ಉತ್ತಮ ಗುಣಮಟ್ಟದ ಬೀಜ, ನೀರು, ವಿದ್ಯುತ್ ಪೂರೈಕೆ ಮಾಡುವುದರ ಜತೆಗೆ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಬೇಕು. ವಿಶ್ವದಲ್ಲಿ ಅತಿ ಹೆಚ್ಚು ಕೃಷಿ ಮಾಡುವ ದೇಶ ಭಾರತ. ಆದರೆ, ನಮ್ಮಲ್ಲಿ ಕೃಷಿಗೆ ಸೂಕ್ತ ಉತ್ತೇಜನ ನೀಡುತ್ತಿಲ್ಲ. ರೈತರಿಗೆ ಪ್ರೋತ್ಸಾಹ ಸಿಗುತ್ತಿಲ್ಲ. ನೀರನ್ನು ವಾಣಿಜ್ಯ ಬಳಕೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಖಾಸಗಿ ಕಂಪನಿಗಳಿಗೆ ವಿದ್ಯುತ್ ನೀಡುತ್ತಿದ್ದಾರೆ. ಹಿಂದೆ ಸರ್ಕಾರವೇ ಗುಣಮಟ್ಟದ ಬಿತ್ತನೆ ಬೀಜ ನೀಡುತ್ತಿತ್ತು. ಈಗ ಖಾಸಗಿ ಕಂಪನಿಯವರಿಗೆ ನೀಡಿದ್ದಾರೆ. ಬಿಟಿ ಸಾಸಿವೆ ಹಿಂದೆ ವಾಣಿಜ್ಯ ಕ್ಷೇತ್ರದಲ್ಲಿತ್ತು. ಈಗ ಆಹಾರ ಕ್ಷೇತ್ರಕ್ಕೆ ಬಿಟಿ ಸಾಸಿವೆ ಕಾಲಿಟ್ಟಿದೆ. ಯಾವುದೇ ಕೃಷಿ ಯೋಜನೆಗಳನ್ನು ಜಾರಿ ಮಾಡುವಾಗ ರೈತರು, ಕಂಪನಿಗಳು, ವಿಜ್ಞಾನ ಸಂಸ್ಥೆಗಳ ಜತೆಗೆ ಚರ್ಚಿಸಿ ಜಾರಿ ಮಾಡಬೇಕು ಎಂದು ತಿಳಿಸಿದರು.
ಸೆ.4ರಂದು ಸಭೆ: ಸಂಡೂರಿನಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವ ಕುರಿತು ಮಾತನಾಡಿ, ಗಣಿಗಾರಿಕೆಗೆ ನಮ್ಮ ವಿರೋಧವಿದೆ. ಸರ್ಕಾರ ಅರಣ್ಯ ಪ್ರದೇಶಗಳಲ್ಲಿ ಗಣಗಾರಿಕೆಗೆ ಅನುಮತಿ ನೀಡಿ ಅರಣ್ಯ ನಾಶ ಮಾಡುವುದಲ್ಲದೆ ಗಿಡ ಮರ ಬೆಳೆಸಲು ರೈತರ ಭೂಮಿ ಕಬಳಿಸುತ್ತದೆ. ಬಳಿಕ ರೈತರ ಭೂಮಿಯನ್ನು ಬಿ ಕರಾಬು ಎಂದು ಘೋಷಿಸಿ ಅರಣ್ಯ ಇಲಾಖೆಗೆ ಸೇರಿಸುತ್ತದೆ. ಸರ್ಕಾರದ ಇಂತಹ ನಿರ್ಧಾರವನ್ನು ನಾವು ಖಂಡಿಸುತ್ತೇನೆ. ಈ ಸಂಬಂಧ ಸೆ.4ರಂದು ಸಂಡೂರಿನಲ್ಲಿ ವಿವಿಧ ರೈತ ಸಂಘಟನೆಗಳು ಸಭೆ ನಡೆಸಲಿವೆ. ಸಂಡೂರಿನಿಂದಲೇ ನಮ್ಮ ಹೋರಾಟ ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದರು.
ಸರ್ವೋದಯ ಕರ್ನಾಟಕ ಪಕ್ಷದ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ ಮಾತನಾಡಿ, ರೈತ ಚಳವಳಿ ಬಗ್ಗೆ ಸಂಸದೆ ಕಂಗನಾ ರಣಾವತ್ ಹಗುರವಾಗಿ ಮಾತನಾಡಿದ್ದಾರೆ. ರೈತರ ಬಗ್ಗೆ ಕಾಳಜಿ ಇರುವ ಯಾರೊಬ್ಬರೂ ಈ ರೀತಿ ಹೇಳಿಕೆ ನೀಡುವುದಿಲ್ಲ. ಚಳುವಳಿಗಳ ಮೂಲಕವೇ ಅನೇಕ ಹೋರಾಟಗಳಿಗೆ ಜಯ ಸಿಕ್ಕಿದೆ. ಕಂಗನಾ ಅವರು ಈ ಹಿಂದೆಯೂ ಹೋರಾಟದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆ ಖಂಡನೀಯವಾಗಿದ್ದು, ಕೂಡಲೇ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಪಿ.ಮರಂಕಯ್ಯ, ಮೈಸೂರು ತಾಲ್ಲೂಕು ಅಧÀ್ಯಕ್ಷ ಆನಂದೂರು ಪ್ರಭಾಕರ್, ಮಂಡಕಳ್ಳಿ ಮಹೇಶ್ ಹಾಜರಿದ್ದರು.