ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.31:- ಪರಿಸರ ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ಸಾಗಬೇಕಿದ್ದು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಮೈಸೂರು ವಿವಿ ಕುಲಪತಿ ಪೆÇ್ರ.ಬಿ.ಕೆ.ಲೋಕನಾಥ್ ಹೇಳಿದರು.
ಮೈಸೂರು ವಿವಿ ಸಹಯೋಗದೊಂದಿಗೆ ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಮತ್ತು ರೋಟರಿ ಕ್ಲಬ್ ಆಫ್ ಶ್ರೀಗಂಧ ಮೈಸೂರು ಸಂಯುಕ್ತಾಶ್ರಯದಲ್ಲಿ ವಿವಿ ಆವರಣದಲ್ಲಿ ಶುಕ್ರವಾರ ನಡೆದ 2 ಸಾವಿರ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಕಾಳಜಿಯ ಜತೆಗೆ ಸುಸ್ಥಿರ ಅಭಿವೃದ್ಧಿ ಸಮಾಜಕ್ಕೆ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ನಾವೆಲ್ಲರೂ ಪರಿಸರ ಉಳಿಸಿ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕೆಂದ ಅವರು, ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿ, ಕರ್ತವ್ಯ ಹೊಂದಬೇಕು. ವಿವಿ ಆವರಣ ಮತ್ತಷ್ಟು ಹಸಿರು ವಾತಾವರಣವಾಗಲು ಅಗತ್ಯ ಸಹಕಾರ ನೀಡುವುದಾಗಿ ಇದೇ ವೇಳೆ ಭರವಸೆ ನೀಡಿದರು.
ಪರಿಸರವನ್ನು ನಾವು ನಾಶ ಮಾಡುತ್ತ ಹೋದರೆ, ಮುಂದೊಂದು ದಿನ ಮನುಕುಲವೇ ನಾಶವಾಗುವ ಸಂದರ್ಭ ಎದುರಾಗಬಹುದಾಗಿದ್ದು, ಪರಿಸರವನ್ನು ತಾಯಿಯಂತೆ ಪೂಜಿಸಿ, ಮಗುವಿನಂತೆ ಪಾಲನೆ ಮಾಡಬೇಕು ಎನ್ನುವುದೇ ನಮ್ಮೆಲ್ಲರ ಆಶಯವಾಗಿದೆ ಎಂದರು.
ರೋಟರಿ ಜಿಲ್ಲಾ ಗವರ್ನರ್ ರೊ.ವಿಕ್ರಮದತ್ತ ಮಾತನಾಡಿ, ಪರಿಸರ, ಪ್ರತಿಯೊಂದು ಸಸಿ, ಗಿಡ-ಮರದ ಮಹತ್ವದ ಕುರಿತು ಅರಿವು ನೀಡಿದರಲ್ಲದೇ, ಸಸಿಗಳನ್ನು ನೆಟ್ಟು ಪೆÇೀಷಿಸಬೇಕು.ಸುಂದರ ಪರಿಸರವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ದೈನಂದಿನ ಜೀವನ ಶೈಲಿಯಲ್ಲಿ ಪರಿಸರ ಪೂರಕ ಕ್ರಮಗಳನ್ನು ಅಳವಡಿಸಿಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ರೊಟರಿ ಭೂಮಿ ಮತ್ತು ಹಸಿರು ಉಳಿಸಿ ವಿಭಾಗದ ಉಪಾಧ್ಯಕ್ಷ ರೊ.ಎನ್.ವೈ.ಚಿಗರಿ ಮಾತನಾಡಿ, ಪರಿಸರ ನಾಶದಿಂದ ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿದ್ದು, ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಸರವನ್ನು ಉಳಿಸಿ ಬೆಳೆಸುವಲ್ಲಿ ಅತ್ಯಂತ ಆಸಕ್ತಿ ವಹಿಸಬೇಕಿದೆ ಎಂದರಲ್ಲದೇ, ಎಲ್ಲರೂ ಸಸಿ ನೆಡುವುದಷ್ಟೇ ಅಲ್ಲದೇ, ನೆಟ್ಟ ಸಸಿಗಳನ್ನು ಪೆÇೀಷಿಸಿ ಬೆಳೆಸುವುದು ಹಾಗೂ ತಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವಂತೆ ಎಲ್ಲರಲ್ಲೂ ಜಾಗೃತಿ ಮೂಡಿಸುವುದು ಅವಶ್ಯಕ ಎಂದು ಕಿವಿಮಾತು ಹೇಳಿದರು.
ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಅಧ್ಯಕ್ಷ ರಾಜೇಶ್.ಆರ್ ಅವರು ಮಾತನಾಡಿ, ಇಂದು ಚಿನ್ನ ಬೆಳ್ಳಿ, ಆಸ್ತಿಗೆ ನೀಡುವಂತಹ ಮಹತ್ವ ಪರಿಸರ ಸಂರಕ್ಷಣೆಗೆ ನೀಡದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಸಸ್ಯಶಾಸ್ತ್ರ ತಜ್ಞ .ಬಿಜಿಎಲ್ ಸ್ವಾಮಿಯವರ ನುಡಿಯಂತೆ ಹಸಿರೇ ಹೊನ್ನು ಎಂಬ ವಾಕ್ಯದೊಂದಿಗೆ ಪರಿಸರ ಸಂರಕ್ಷಣೆ ಮಾಡಬೇಕಿದೆ. ಚಿನ್ನ, ಬೆಳ್ಳಿ ನಮಗೆ ಗಾಳಿ ಬೆಳಕು ನೀಡೊಲ್ಲ ಹಸಿರೇ ಉಸಿರು ಎಂಬುದು ಹಿಂದಿನಿಂದಲೂ ಚಾಲ್ತಿಯಲ್ಲಿರುವ ಮಾತಾಗಿದ್ದು, ಇತ್ತೀಚಿನ ದಿನಗಳಲ್ಲಿ ಮನುಕುಲ ತನ್ನ ಅತಿ ಆಸೆಗೆ ಪರಿಸರದ ಮೇಲೆ ದೌರ್ಜನ್ಯ ಎಸಗುತ್ತಿದ್ದು, ಇದನ್ನು ತಪ್ಪಿಸುವ ಕೆಲಸಕ್ಕೆ ನಾವೆಲ್ಲ ಮುಂದಾಗಬೇಕಿದೆ ಎಂದರಲ್ಲದೇ, ಪ್ರತಿಯೊಂದು ಮನೆಯ ಮುಂದೆ ಗಿಡ ನೆಟ್ಟು ಬೆಳೆಸುವ ಪ್ರವತ್ತಿಯನ್ನು ನಾವು ಬೆಳೆಸಿಕೊಳ್ಳಬೇಕು. ಈ ಹಿನ್ನಲೆಯಲ್ಲಿ ಹಸಿರು ಕ್ರಾಂತಿ ಎಂಬ ಬಿರುದಿನ ಶೀರ್ಷಿಕೆಯಡಿ ಮೈಸೂರು ವಿಶ್ವವಿದ್ಯಾನಿಲಯ ಆವರಣದಲ್ಲಿ ಸುಮಾರು 2ಸಾವಿರ ಗಿಡ ನೆಡುವ ಕಾರ್ಯಕ್ಕೆ ಮುಂದಾಗಿದ್ದೇವೆ ಹಾಗೂ ಟಿಕೆ.ಲೇಔಟ್ ನಿವಾಸಿಯಾಗಿರುವ ಹೆಚ್.ಆರ್.ಲಕ್ಷ್ಮೀಸಾಗರ್ ಅವರಿಗೆ ಸೇರಿದ ಶಕ್ತಿನಾಯಕನಹಳ್ಳಿಯಲ್ಲಿ ಇರುವ ತೋಟದಲ್ಲಿ ಸುಮಾರು 1 ಸಾವಿರ ಶ್ರೀಗಂಧ ಸಸಿಗಳನ್ನು ಕೂಡಾ ನೆಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮೈಸೂರು ವಿವಿ ನಿವೃತ್ತ ಪ್ರಾಂಶುಪಾಲ ಡಾ.ಸಿ.ರಾಮಸ್ವಾಮಿ ಡಿಎಸ್ ಡಬ್ಲ್ಯೂ, ರೊಟರಿ ಕ್ಲಬ್ ಆಫ್ ಶ್ರೀಗಂಧದ ಅಧ್ಯಕ್ಷ ಚಂದ್ರು ಎನ್, ಮೈಸೂರು ವಿವಿ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ.ಸುಷ್ಮಾ, ಮಾನಸ ಗಂಗೋತ್ರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪೆÇ್ರ.ರಂಗರಾಜನ್, ರೋಟರಿ ಜಿಲ್ಲಾ ಕಾರ್ಯದರ್ಶಿ ರೊ.ಮೇಜರ್ ಡೋನರ್ ರಿತೇಶ್ ಬಳಿಗ, ವಲಯ7ರ ಸಹಾಯಕ ಗವರ್ನರ್ ರೊ.ಪ್ರಹಲ್ಲಾದ್ ಕೆ.ಎ, ವಲಯ8ರ ಸಹಾಯಕ ಗವರ್ನರ್ ರೊ.ರಾಜೀವ್ ಎಂ, ರೊಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಸಂಸ್ಥಾಪಕ ಅಧ್ಯಕ್ಷ ರೊ.ಮಂಜುನಾಥ್ ಕೆ, ಕಾರ್ಯದರ್ಶಿ ರೊ.ಸುಂದರರಾಜ ಬಿ.ಸಿ, ರೊ.ಎನ್.ರಾಮು, ವಿವಿ ಎನ್‍ಎಸ್‍ಎಸ್ ಸಂಯೋಜಕರಾದ ಡಾ.ಎಂ.ಬಿ.ಸುರೇಶ್ ಮತ್ತು ಡಾ.ಮಧುಸೂಧನ್, ರೊ.ಕೇಶವಬಿದರೆ, ರೊ.ಸುಧಿಂದ್ರ ಮಿಂಚು, ಜಂಟಿ ಕಾರ್ಯದರ್ಶಿ ರೊ.ಮಧುಸೂಧನ್ ರೊ.ಶಂಭು ಹೆಗಡೆ, ರೊ.ನಾರಾಯಣ ನಾಯಕ್ ಇತರರು ಉಪಸ್ಥಿತರಿದ್ದರು.