ಭೇರ್ಯ ದಯಾನಂದ ವಿದ್ಯಾಸಂಸ್ಥೆ ನೂತನ ಶಾಲಾ ಕೊಠಡಿಗಳ ಉದ್ಘಾಟನೆ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಆ.31:- ಬುದ್ದ, ಬಸವಣ್ಣ, ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರುಗಳು ದೇವಾಲಯ ಕಟ್ಟುವ ಮೊದಲು ಗ್ರಾಮದಲ್ಲಿ ಶಾಲೆ ತೆರೆಯಿರಿ ಎಂದು ಎಲ್ಲರಿಗೂ ಮಾರ್ಗದರ್ಶನ ನೀಡಿದವರು ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಪೀಠಾಧ್ಯಕ್ಷ ಜ್ಞಾನ ಪ್ರಕಾಶ ಸ್ವಾಮಿಜಿ ತಿಳಿಸಿದರು.
ಭೇರ್ಯ ಗ್ರಾಮದ ದಯಾನಂದ ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ನಿರ್ಮಿಸಿರುವ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ದೇವಸ್ಥಾನ ಕಟ್ಟಿದರೆ ಭಿಕ್ಷಕರು ಹೆಚ್ಚಾಗುತ್ತಾರೆ, ಅದೇ ನೀವು ಶಾಲೆಗಳನ್ನು ನಿರ್ಮಿಸಿದರೆ ಸಾವಿರಾರು ಮಕ್ಕಳಿಗೆ ಶಿಕ್ಷಣ ಪಡೆದು ತಮ್ಮ ಉತ್ತಮ ಭವಿಷ್ಯ ನಿರ್ಮಿಸಿ ಕೊಳ್ಳುತ್ತಾರೆ ಎಂದರಲ್ಲದೆ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣ ಪಡೆಯ ಬೇಕಾದರೆ, ಜ್ಯೋತಿ ಭಾಪುಲೆ ಮತ್ತು ಸಾವಿತ್ರಿ ಭಾಪುಲೆ ಅವರು ಕಟ್ಟಿದ ಶಾಲೆಯಲ್ಲಿ ವ್ಯಾಸಂಗ ಮಾಡಿ ವಿಶ್ವಕ್ಕೆ ಮಾದರಿಯಾದವರು ಎಂದರು.
ಶಾಸಕ.ಡಿ.ರವಿಶಂಕರ್ ಮಾತನಾಡಿ ಶಿಕ್ಷಕರು ಎಲ್ಲವೂ ಗೊತ್ತಿದೆ ಎಂಬ ಭಾವನೆಯಲ್ಲಿರುವುದು ಸರಿಯಲ್ಲ. ನಿರಂತರವಾಗಿ ಅಧ್ಯಯನದ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸಬೇಕು ಎಂದರು.
ಪ್ರಸ್ತುತ ಸಮಾಜದಲ್ಲಿ ಬದಲಾದ ಬೆಳವಣಿಗೆಯಲ್ಲಿ ಅಶಾಂತಿ, ಭಾವೈಕ್ಯತೆಗೆ ಧಕ್ಕೆಯ ವಾತಾವರಣ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಲ್ಲಿ ಸಾಮರಸ್ಯ, ಬದ್ಧತೆಯನ್ನು ಕಾಪಾಡುವಂತಹ ಮನೋಭಾವನೆಯನ್ನು ಮೈಗೂಡಿಸಿಕೊಳ್ಳುವಂತಹ ಮೌಲ್ಯಯುತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ತಿಳಿಸಿದರು.
ಮಹನೀಯರ ಸಾಧನೆಯ ಬಗ್ಗೆ ಮಕ್ಕಳಿಗೆ ನಿರಂತರವಾಗಿ ಸ್ಫೂರ್ತಿಯನ್ನು ತುಂಬೇಕು. ಶಿಕ್ಷಣದಲ್ಲಿ ಕೇವಲ ಅಂಕಗಳಿಕೆಯೇ ಮುಖ್ಯವಲ್ಲ. ಇದು ಮೌಲ್ಯವನ್ನು ಹೊಂದಿರಬೇಕು. ಕೌಶಲ ವೃದ್ಧಿಯೊಂದಿಗೆ ಉದ್ಯೋಗವನ್ನು ಪಡೆಯುವ ಸಾಮಥ್ರ್ಯವನ್ನು ಬೆಳೆಸಬೇಕು ಎಂದರು.
ಇದಕ್ಕೂ ಮೊದಲು ಮಾತನಾಡಿದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಪಿ.ರಮೇಶ್ ಗ್ರಾಮೀಣ ಪ್ರದೇಶಗಳಲ್ಲಿ ಬಡವರು, ಶೋಷಿತರ ಮಕ್ಕಳು ಶೈಕ್ಷಣಿಕ ವ್ಯಾಸಂಗ ಬಹಳ ಕಷ್ಟಕರವಾದ ಪರಿಸ್ಥಿತಿಯಾಗಿದೆ. ಅಂತಹದಲ್ಲೂ ದಯಾನಂದ ವಿದ್ಯಾಸಂಸ್ಥೆಯವರು ಯಾವುದೇ ಶುಲ್ಕವಿಲ್ಲದೆ ಬಡವರಿಗೆ, ಶೋಷಿತರ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು. ಇದೇ ಸಂದರ್ಭದಲ್ಲಿ ದಯಾನಂದ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ತಾ.ಶರಣು ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಪಿ.ರಮೇಶ್ ಒಂದು ಲಕ್ಷ ದೇಣಿಗೆ ಚೆಕ್ ನ್ನು ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮಿಜಿಗಳ ಮೂಲಕ ಸಂಸ್ಥೆಗೆ ಹಸ್ತಾಂತರ ಮಾಡಿದರು. ಜ್ಞಾನ ಪ್ರಕಾಶ ಸ್ವಾಮಿಜಿ, ಇಂತಹ ದಾನಿಗಳಿಂದ ದೇಶದಲ್ಲಿ ಶೈಕ್ಷಣಿಕವಾಗಿ ಬಡವರು, ಶೋಷಿತರ ಮಕ್ಕಳಿಗೆ ವಿದ್ಯಾಭ್ಯಾಸ ದೊರೆಯುತ್ತಿದೆ, ಇವರ ಸೇವೆ ಶ್ಲಾಘನೀಯ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷ ಬಿ.ಕೆ.ಮಂಜಪ್ಪ, ಸಂಸ್ಥೆಯ ಕಾರ್ಯದರ್ಶಿ ಪ್ರಸನ್ನ, ಸಂಸ್ಥಾಪಕ ನಿರ್ಧೇಶಕ ಹೆಚ್.ಎಸ್.ಸ್ವಾಮಿ, ಕಾಂಗ್ರೆಸ್ ಮುಖಂಡ, ಸಮಾಜ ಸೇವಕ ಗಂಧನಹಳ್ಳಿ ವೆಂಕಟೇಶ್, ನಿವೃತ್ತ ತಂಬಾಕು ಮಂಡಳಿ ಅಧೀಕ್ಷಕ ಮಂಜುರಾಜ್, ತಾ.ಎಸ್.ಸಿ.ಘಟಕದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ನಂದೀಶ್, ಕಂಠಿಕುಮಾರ್, ದಲಿತ ಮುಖಂಡರಾದ ರಾಜಯ್ಯ, ಪುಟ್ಟಮಾದಯ್ಯ, ಸಿದ್ದರಾಜು, ಉಪನ್ಯಾಸಕ ಕೃಷ್ಣ,, ಬೀಮ್ ಆರ್ಮಿ ತಾ.ಅಧ್ಯಕ್ಷ ಗುರು, ಮುಖಂಡರಾದ ಟೈಲರ್ ಸಣ್ಣಯ್ಯ, ಹುಚ್ಚೇಗೌಡ, ಡಿ.ತಮ್ಮಯ್ಯ, ಎಸ್.ಪೀರ್ ಖಾನ್, ಮುಖ್ಯ ಶಿಕ್ಷಕಿ ಜಯಮ್ಮ, ಶಿಕ್ಷಕರಾದ ಬಿ.ವಿ.ವಿಜೇಂದ್ರ, ದೊಡ್ಡಮೊಗೇಗೌಡ, ದೃವರಾಜ್, ಬಿ.ಆರ್.ಪುರಶೋತ್ತಮ, ಗಿರೀಶ್, ಸುರೇಶ್, ಕೃಷ್ಣೇಗೌಡ, ಮಹದೇವ, ಬಸವರಾಜು, ಪ್ರವೀಣ್ ಖವಾಲಿ, ಕಾವ್ಯ, ಸುಜಾತ, ಜಯಂತಿ, ಉದಯ್ ಗೌಡ, ಸಿಬ್ಬಂದಿಗಳಾದ ಶಿವಪ್ಪ, ಲಕ್ಷ್ಮಣ ಸೇರಿದಂತೆ ಇದ್ದರು.