ಸಣ್ಣ ನೀರಾವರಿ ಕಚೇರಿ ಸ್ಥಳಾಂತರ ಖಂಡಿಸಿ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.31: ತಾಲೂಕಿನ ಬೂಕನಕೆರೆ ಹೋಬಳಿ ಕೇಂದ್ರದಲ್ಲಿರುವ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಯನ್ನು ನಾಗಮಂಗಲಕ್ಕೆ ಸ್ಥಳಾಂತರ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಅವರ ನಡೆಯನ್ನು ಖಂಡಿಸಿ ರೈತ ಹೋರಾಟಗಾರರು ಮಂಡ್ಯ ಜಿಲ್ಲಾ ರೈತ ಸಂಘದ ಮಾಜಿ ಉಪಾಧ್ಯಕ್ಷ ಮುದುಗೆರೆ ರಾಜೇಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ರೈತ ಹೋರಾಟಗಾರರು ನಮ್ಮ ಜಿಲ್ಲೆಯವರೆ ಆದ ಸಚಿವ ಚೆಲುವರಾಯಸ್ವಾಮಿಯವರು ಸಣ್ಣ ನೀರಾವರಿ ಕಚೇರಿಯನ್ನು ತಮ್ಮ ತಾಲೂಕಿಗೆ ಸ್ಥಳಾಂತರ ಮಾಡುತ್ತಿರುವುದುರ ಹಿಂದೆ ಸ್ವಾರ್ಥ ತುಂಬಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಚೆಲುವರಾಯಸ್ವಾಮಿಯವರಿಗೆ ತೀರಾ ಹಿನ್ನಡೆಯಾಗಿರುವುದನ್ನು ಮರೆಮಾಚಲು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಹಾಗಾದರೆ ನಾಗಮಂಗಲಕ್ಕಿಂತ ಹೆಚ್ಚು ಮತವನ್ನು ಕಾಂಗ್ರೆಸ್‍ಗೆ ನೀಡಿದ ತಾಲೂಕಿನ ಜನರಿಗೆ ಮೋಸಮಾಡಲು ಹೊರಟಿರುವುದು ಸರಿಯಲ್ಲ. ಇವರು ಕೆ.ಆರ್.ಪೇಟೆ ತಾಲೂಕಿಗೆ ಸಚಿವರಲ್ಲವೆ? ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರೈತ ಹೋರಾಟಗಾರ ಮುದುಗೆರೆ ರಾಜೇಗೌಡ ಕೆ.ಆರ್.ಪೇಟೆ ತಾಲೂಕಿಗೆ ಬಹಳ ಹಿಂದಿನಿಂದಲೂ ಇದೆ ಅನ್ಯಾಯವಾಗುತ್ತಿದೆ. ಕೆ.ಆರ್.ಪೇಟೆ ತಾಲೂಕಿನಲ್ಲಿ ಬಹುದೊಡ್ಡ ಏತ ನೀರಾವರಿ ಯೋಜನೆಯು ಚಾಲನೆಯಲ್ಲಿದೆ. ಜೊತೆಗೆ ಹಲವಾರು ಕೆರೆಗಳ ಅಭಿವೃದ್ಧಿಗೆ ಅನುದಾನವನ್ನು ಒದಗಸಿಬೇಕಾಗಿದೆ. ಬೂಕನಕೆರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ವಗ್ರಾಮ. ರೈತರ ಬದುಕಿನ ಜೊತೆ ತಳುಕುಹಾಕಿಕೊಂಡಿರುವ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುವ ಕೆರೆಗಳ ಅಭಿವೃದ್ದಿಪಡಿಸಬೇಕಾಗಿದೆ. ಹೂಳನ್ನು ತೆಗೆಸಿ ಅಂತರ್ಜಲವನ್ನು ಉಳಿಸಿಕೊಳ್ಳಬೇಕಾಗಿದೆ. ಬೂಕನೆಕರೆ ಹೋಬಳಿಯು ಅತಿ ಹೆಚ್ಚು ತೋಟಗಾರಿಕಾ ಬೆಳೆಯನ್ನು ಬೆಳೆಯುವ ಪ್ರದೇಶ. ಆದ್ದರಿಂದ ಚೆಲುವರಾಯಸ್ವಾಮಿಯವರು ನಮ್ಮ ತಾಲೂಕಿನ ಕಚೇರಿಯನ್ನು ಸ್ಥಳಾಂತರ ಮಾಡಬಾರದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಜವರಾಯಿಗೌಡ, ಮಾಜಿ ಸದಸ್ಯ ಹುಲ್ಲೇಗೌಡ, ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಕುರುಬಹಳ್ಳಿ ನಾಗೇಶ್, ಬೂಕನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ಯಾಮ್‍ಪ್ರಸಾದ್, ಸದಸ್ಯ ಸ್ವಾಮಿ, ರೈತ ಮುಖಂಡ ರಾಮಕೃಷ್ಣೇಗೌಡ, ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.