ಮಾರೇನಹಳ್ಳಿ ಗ್ರಾಮಕ್ಕೆ ಹೆಚ್.ಟಿ.ಮಂಜು ಭೇಟಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.31: ವಾಂತಿ ಬೇಧಿಯಿಂದ ಇಬ್ಬರು ಮಹಿಳೆಯರು ಮೃತರಾಗಿ ಹಲವಾರು ಜನ ಆಸ್ಪತ್ರೆಗೆ ದಾಖಲಾಗಿದ್ದ ತಾಲೂಕಿನ ಮಾರೇನಹಳ್ಳಿ ಗ್ರಾಮಕ್ಕೆ ಶಾಸಕ ಹೆಚ್.ಟಿ.ಮಂಜು ಭೇಟಿ ನೀಡಿ ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬಸ್ಥರ ಮನೆಗಳಿಗೆ ಹೋಗಿ ಪರಿಸ್ಥಿತಿಯ ಮಾಹಿತಿ ಪಡೆದರಲ್ಲದೆ ಮಾರೇನಹಳ್ಳಿ ವ್ಯಾಪ್ತಿಯ ಭಾರತೀಪುರ ಕ್ರಾಸ್ ನಲ್ಲಿರುವ ಸರ್ಕಾರಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿಗಳ ಸಭೆ ನಡೆಸಿ ಮಾಹಿತಿ ಪಡೆದರು.
ಮಾರೇನಹಳ್ಳಿ ಗ್ರಾಮದ ನೀರು ಪೂರೈಕೆ ಕೇಂದ್ರಗಳು ಹಾಗೂ ಮತ್ತಿತರ ಕಡೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ ಶಾಸಕರು ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ತಾಲೂಕು ಆರೋಗ್ಯ ಇಲಾಖೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಇದರಿಂದಾಗಿ ಗ್ರಾಮಸ್ಥರು ಯಾವುದೇ ರೀತಿಯಲ್ಲಿಯೂ ಆತಂಕ ಪಡುವ ಅಗತ್ಯವಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿಗಳು ಸ್ಥಳದಲ್ಲಿದ್ದು ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ವಹಿಸಿದ್ದಾರೆ. ರಾಜ್ಯ ಮಟ್ಟದ ಆರೋಗ್ಯ ಪರಿವೀಕ್ಷಣಾ ತಂಡದ ವೈದ್ಯರೂ ಇಲ್ಲಿಗೆ ಬಂದು ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ. ರಾಜ್ಯ ಆರೋಗ್ಯ ಇಲಾಖೆಯೂ ಇಲ್ಲಿನ ಪರಿಸ್ಥಿತಿಯ ಮಾಹಿತಿ ಪಡೆದಿದೆ. ವೈದ್ಯರ ಸೂಚನೆಯನ್ನು ಗ್ರಾಮಸ್ಥರು ಪರಿಪಾಲಿಸಬೇಕು. ಇದೀಗ ವಾಂತಿ ಬೇಧಿ ಪ್ರಕರಣ ನಿಂತಿದೆ. ಅದು ಮತ್ತೆ ಮರುಕಳಿಸಿದರೆ ತಕ್ಷಣವೇ ವೈದ್ಯರಿಗೆ ಮಾಹಿತಿ ನೀಡಬೇಕು. ಗ್ರಾಮಸ್ಥರು ಸಾಧ್ಯವಾದಷ್ಟು ತಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ಶಾಸಕ ಹೆಚ್.ಟಿ.ಮಂಜು ಮನವಿ ಮಾಡಿದರು.
ಭಾರತೀಪುರ ಕ್ರಾಸ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ವೈದ್ಯಕೀಯ ಸಿಬ್ಬಂಧಿಗಳ ಸಭೆಯಲ್ಲಿ ಮಾರೇನಹಳ್ಳಿ ಪ್ರಕರಣ ಕುರಿತು ಶಾಸಕರಿಗೆ ಮಾಹಿತಿ ನೀಡಿದ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಅಜಿತ್ ಗ್ರಾಮದ ಕುಡಿಯುವ ನೀರು ಪೂರೈಕೆ ಜಾಲದ ಸರ್ವ ಪರಿವೀಕ್ಷಣೆ ಮಾಡಲಾಗಿದೆ. ಗ್ರಾಮ ಪಂಚಾಯತಿ ವತಿಯಿಂದ ಪೂರೈಕೆಯಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಪ್ರಯೋಗಾಲಯದ ವರದಿ ತಿಳಿಸಿದೆ. ಗ್ರಾಮದ ಇತರೆ ಜಲ ಮೂಲಗಳ ಬಗ್ಗೆಯೂ ಪರಿಶೀಲನೆ ಮಾಡಲಾಗಿದೆ. ಇದು ವೈರಲ್ ಡಯಾರಿಯಾ ಎಂದು ಶಂಕಿಸಲಾಗಿದ್ದು ಗ್ರಾಮಸ್ಥರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಹಾಸನ, ಚನ್ನರಾಯಪಟ್ಟಣ ಮುಂತಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದವರು ಗುಣಮುಖರಾಗುತ್ತಿದ್ದು ತಾಲೂಕು ಆರೋಗ್ಯ ಇಲಖೆ ನಿರಂತರ ಸಂಪರ್ಕದಲ್ಲಿದೆ. ವೈದ್ಯರುಗಳಲ್ಲದೆ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ತೀವ್ರ ನಿಗಾ ವಹಿಸಿದ್ದು ಗ್ರಾಮಸ್ಥರಿಗೆ ಅಗತ್ಯವಾದ ಮಾತ್ರೆಗಳು ಮತ್ತು ಓ.ಆರ್.ಎಸ್ ಪೌಡರ್ ಮತ್ತಿತರ ಔಷಧಿಗಳನ್ನು ಪೂರೈಕೆ ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಗಾಬರಿ ಪಡಬೇಕಾದ ಸನ್ನಿವೇಶ ಇಲ್ಲ ಎಂದು ತಿಳಿಸಿದರು.
ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸ್ವಪ್ನಾ, ಪಿ.ಡಿ.ಓ ದಿನೇಶ್, ಭಾರತೀಪುರ ಕ್ರಾಸ್ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಹರ್ಷವರ್ಧಿನಿ,ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ರವಿಕುಮಾರ್, ಸೇರಿದಂತೆ ಹಲವರಿದ್ದರು.