ಜಾತ್ರೆಯಂಗವಾಗಿ ಜರುಗಿದ ಸೈಕಲ್ ಮೋಟಾರ್ ಸ್ಲೋ ರೇಸ್ ಸ್ಪರ್ಧೆ
ಬಸವನಬಾಗೇವಾಡಿ, ಆ. ೩೧:ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ ( ಬಸವೇಶ್ವರ) ಜಾತ್ರಾಮಹೋತ್ಸವದಂಗವಾಗಿ ಇದೇ ಪ್ರಥಮ ಬಾರಿಗೆ ಜಾತ್ರಾ ಉತ್ಸವ ಸಮಿತಿ ಜಾತ್ರೆಯ ಕೊನೆ ದಿನವಾದ ಶುಕ್ರವಾರ ಸ್ಥಳೀಯ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಸೈಕಲ್ ಮೋಟಾರ್ ಸ್ಲೋ ರೇಸ್ (ಗೇರ್ ಗಾಡಿ) ಸ್ಪರ್ಧೆಯನ್ನು ಆಯೋಜನೆ ಮಾಡಿತ್ತು.
ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಅವರು ಸ್ಪರ್ಧೆಗೆ ಮೋಟಾರ್ ಸೈಕಲ್ ಹತ್ತಿ ಓಡಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಎಂ.ಬಿ.ಆದಿಗೊAಡ ಮಾತನಾಡಿ, ಜಾತ್ರಾ ಮಹೋತ್ಸವದಂಗವಾಗಿ ಇದೇ ಪ್ರಥಮ ಬಾರಿಗೆ ಇಂತಹ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಯಾವುದೇ ಸ್ಪರ್ಧೆಯಲ್ಲಿ ಆರೋಗ್ಯಕರವಾದ ಸ್ಪರ್ಧೆ ಇರಬೇಕು. ಜೀವನದಲ್ಲಿ ನಿಧಾನವೇ ಪ್ರಧಾನ ಎಂಬುವದನ್ನು ನಾವು ಅರಿತುಕೊಂಡು ನಡೆದರೆ ಜೀವನ ಸುಗಮವಾಗಿ ಸಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಗುರಲಿಂಗ ಬಸರಕೋಡ, ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಬಸವರಾಜ ಹಾರಿವಾಳ,ಶೇಖರ ಗೊಳಸಂಗಿ, ಸಂಗಮೇಶ ಓಲೇಕಾರ, ಶಂಕರಗೌಡ ಬಿರಾದಾರ, ಸುರೇಶಗೌಡ ಪಾಟೀಲ, ಬಸವರಾಜ ಅಳ್ಳಗಿ, ಮಿರಾಸಾಬ ಕೊರಬು, ವಿಶ್ವನಾಥ ಹಾರಿವಾಳ, ಎಂ.ಬಿ.ತೋಟದ ಇತರರು ಇದ್ದರು. ಮಹೇಶ ಹುಮನಾಬಾದ, ಎಂ.ಪಿ.ಗಾರಗೆ, ಸೀತಾರಾಮ ಭಜಂತ್ರಿ ಮೈದಾನ ಸಿದ್ಧ ಗೊಳಿಸಿದರು. ನಿರ್ಣಾಯಕರಾಗಿ ಜಗದೀಶ ಬಿಜಾಪುರ, ಮಲ್ಲು ಪಡಶೆಟ್ಟಿ, ಸಂಗಮೇಶ ಮೈಲೇಶ್ವರ ಕಾರ್ಯನಿರ್ವಹಿಸಿದರು. ಶಂಕರಗೌಡ ಬಿರಾದಾರ ಸ್ವಾಗತಿಸಿದರು. ಚನ್ನಪ್ಪ ಶಿವಗೊಂಡ ನಿರೂಪಿಸಿದರು.
ಸ್ಪರ್ಧೆಯಲ್ಲಿ ತಾಲೂಕು ಸೇರಿದಂತೆ ವಿವಿಧೆಡೆಗಳಿಂದ ೫೦ ಜನ ಮೋಟಾರ್ ಸೈಕಲ್ ಸವಾರರು ಭಾಗವಹಿಸಿದ್ದರು. ಬಬಲಾದಿಯ ಹಣಮಂತ ಝಳಕಿ ಪ್ರಥಮ, ರಾಯಬಾಗದ ಸುರೇಶ ಮುಗದಮ ದ್ವಿತೀಯ, ಬಬಲಾದಿಯ ಬಾಹುಬಲ ಶ್ರೀಮಂತ ಖವಟಕೊಪ್ಪ(ಬೆಂಕಿಬಬಲಾದಿ) ತೃತೀಯ ಸ್ಥಾನ ಪಡೆದುಕೊಂಡರು.