ವಿವಿಧ ರಸ್ತೆಗಳ ಅಭಿವೃದ್ದಿ, ಅತಿಕ್ರಮಣ ತೆರವಿಗೆ ಡಿಸಿ ಸೂಚನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೩೧: ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ನಗರ ಪರಿವೀಕ್ಷಣೆ ನಡೆಸಿ, ನಗರದ ವಿವಿಧ ರಸ್ತೆಗಳ ಅಭಿವೃದ್ದಿ, ಅತಿಕ್ರಮಣ ತೆರವುಗೊಳಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಬೆಳ್ಳಂಬೆಳಿಗ್ಗೆ ವಿಜಯಪುರ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಬಾಗಲಕೋಟೆ ರಸ್ತೆ, ಅತಾವುಲ್ಲಾ ಚೌಕ ಹತ್ತಿರ ಕಂದಕ ಹಾಗೂ ನವಭಾಗ ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಹಾಗೂ ಅಗಲೀಕರಣ ಕಾಮಗಾರಿಗಳ ಪರಿಶೀಲನೆ ನಡೆಸಿದರು. ನವಭಾಗ ರಸ್ತೆಯ ಅಗಲೀಕರಣ ಬಗ್ಗೆ ಸರ್ವೇ ಕಾರ್ಯವನ್ನು ಕೈಗೊಂಡು ಅತಿಕ್ರಮಣವನ್ನು ತೆರವುಗೊಳಿಸಲು ಅಗತ್ಯ ಕ್ರಮಕೈಗೊಳ್ಳಲು, ಪಾಲಿಕೆಯ ಆಯುಕ್ತರು ಹಾಗೂ ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ವಾರ್ಡ್ ನಂ.೨೮ರÀ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿ, ಈ ಕಾಮಗಾರಿಯನ್ನು ೧೫ ದಿನಗಳ ಒಳಗಾಗಿ ಪೂರ್ಣಗೊಳಿಸಿ, ಸಾರ್ವಜನಿಕರ ಒಡಾಟಕ್ಕೆ ಅನುಕೂಲ ಕಲ್ಪಿಸುವಂತೆ ಅವರು ಸೂಚನೆ ನೀಡಿದರು.
ನಗರದಲ್ಲಿ ಇರುವ ಬೇಗಂ ತಾಲಾಬ್ ಕೆರೆ ಪರಿವೀಕ್ಷಣೆ ಕೈಗೊಂಡು, ವಾಯು ವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ, ಉದ್ಯಾನವನದಲ್ಲಿರುವ ಮೂಲಭೂತ ಸೌಕರ್ಯಗಳು, ಫೋಡ್ ಕೋರ್ಟ್ ಹಾಗೂ ಇತರೆ ಸೌಲಭ್ಯಗಳನ್ನು ಕೂಡಲೇ ಟೆಂಡರ್ ಕರೆದು ಕ್ರಮಕೈಗೊಳ್ಳಲು ಸೂಚಿಸಿದರು.
ನಗರದ ತಾಜ್ ಬಾವಡಿಯ ಪರಿಶೀಲನೆ ನಡೆಸಿ, ಈ ಬಾವಿಯ ಪುನಶ್ಚೇತನ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ನಗರದ ಶಿವಾಜಿ ವೃತ್ತದ ಹತ್ತಿರುವ ಇರುವ ಕಂದಕವನ್ನು ಹಾಗೂ ಬೇಗಂ ತಲಾಬ ಅಭಿವೃದ್ಧಿಪಡಿಸಲು ಮಹಾನಗರ ಪಾಲಿಕೆಯ ಮಹಾಪೌರರು ಹಾಕಿಕೊಂಡಿರುವ ಕಾಮಗಾರಿಯ ಯೋಜನೆಗಳನ್ನು ಪೂರ್ಣಗೊಳಿಸಬೇಕು. ನಗರದ ಸೊಲ್ಲಾಪೂರ ರಸ್ತೆಯಲ್ಲಿರುವ ಕಬ್ರಸ್ತಾನ ಪರಿಶೀಲಿಸಿದ ಅವರು, ಕಾಂಪೌAಡ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ವಿವಿಧ ಸದಸ್ಯರು, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ತಹಶೀಲ್ದಾರ, ಪಾಲಿಕೆ ಅಭಿಯಂತರರು, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.