ಲೋಕಸೇವಾ ಆಯೋಗ ಪ್ರಶ್ನೆ ಪತ್ರಿಕೆ ಲೋಪಕ್ಕೆ ಆಕ್ಷೇಪಣೆ ಕೇಳಿದ್ದು ಸರಿಯಲ್ಲ: ಶಾಸಕ ಯತ್ನಾಳ
ಸಂಜೆವಾಣಿ ವಾರ್ತೆ,.
ವಿಜಯಪುರ,ಆ.೩೧: ಕರ್ನಾಟಕ ಲೋಕಸೇವಾ ಆಯೋಗ ತಯಾರಿಸಿರುವ ಪ್ರಶ್ನೆ ಪತ್ರಿಕೆಯಲ್ಲಿರುವ ಗೊಂದಲಗಳು, ದೋಷಗಳಿಗೆ, ಭಾಷಾಂತರ ತಪ್ಪುಗಳಿಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಹೊರಡಿಸಿರುವ ಪ್ರಕಟಣೆ ಹಾಸ್ಯಾಸ್ಪದವಾಗಿದೆ ಎಂದು ಕೇಂದ್ರದ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಈ ಕುರಿತಂತೆ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿರುವ ಅವರು, ಪ್ರಶ್ನೆ ಪತ್ರಿಕೆಯಲ್ಲಿರುವ ದೋಷಗಳು ಸ್ವಯಂ ವಿವರಣಾತ್ಮಕ ಆಗಿದೆ. ಯಾವುದೇ ಪ್ರಶ್ನೆ ಪತ್ರಿಕೆ ತಯಾರಾದ ನಂತರ ತರ್ಜುಮೆಯ ಗುಣಮಟ್ಟ, ಆಂಗ್ಲ ಹಾಗೂ ಕನ್ನಡದಲ್ಲಿ ಪ್ರಶ್ನೆಗಳ ಸಾಮ್ಯತೆ, ವ್ಯಾಕರಣ ದೋಷ, ಮುದ್ರಣದ ಗುಣಮಟ್ಟ, ಅಸಂಬದ್ಧ ವಾಕ್ಯ ರಚನೆ, ತದ್ವಿರುದ್ದ ಅರ್ಥಗಳು ಇದ್ದಲ್ಲಿ, ಅದನ್ನು ಸರಿಪಡಿಸಿ ಮತ್ತೊಮ್ಮೆ ಪರೀಕ್ಷೆ ಮಾಡಿ, ಪ್ರೂಫ್ ಮಾಡಿದ ನಂತರ ಬಿಡುಗಡೆ ಮಾಡಬೇಕು.
ಜಾಲತಾಣಗಳಲ್ಲಿ, ಪ್ರಮುಖ ಪತ್ರಿಕೆಗಳಲ್ಲಿ ನೀವು ಮಾಡಿದ ತಪ್ಪುಗಳು ಚರ್ಚೆಯಾದಾಗ ಆಕ್ಷೇಪಣೆ ಸಲ್ಲಿಸಬೇಕು ಎಂದು ಪ್ರಕಟಣೆ ಹೊರಡಿಸಿರುವುದು ಆಯೋಗದ ಅಸಮರ್ಥತೆ ತೋರಿಸುತ್ತದೆ. ಪರೀಕ್ಷಾರ್ಥಿಗಳಿಗೆ, ಪತ್ರಿಕೆಗಳು ಸವಿವರವಾಗಿ ಪ್ರಶ್ನೆ ಪತ್ರಿಕೆಯಲ್ಲಾದ ತಪ್ಪುಗಳನ್ನು ತೋರಿಸಿದ್ದು, ಆಯೋಗದ ಕಣ್ಣಿಗೆ ಬೀಳದಿರುವುದು ವಿಷಾದನೀಯ.
ಈ ಕೂಡಲೇ ಪ್ರಶ್ನೆ ಪತ್ರಿಕೆ ತಯಾರು ಮಾಡಿದ ಅಧಿಕಾರಿಯನ್ನು ಅಮಾನತ್ತಿನಲ್ಲಿಟ್ಟು, ನಿಮ್ಮ ಇಲಾಖೆಯಲ್ಲಿ ಕಿಂಚಿತ್ತಾದರೂ ಶಿಸ್ತಿದೆ ಎಂದು ಮೇಲ್ಪಂಕ್ತಿ ಹಾಕಿಕೊಡಿ ಎಂದು ತಿಳಿಸಿದ್ದಾರೆ.