ಡಿಸಿಸಿ ಬ್ಯಾಂಕ್ ಗೆ ೨೦.೨೨ ಕೋಟಿ ನಿವ್ವಳ ಲಾಭ: ಶಿವಾನಂದ ಪಾಟೀಲ
ಸಂಜೆವಾಣಿ ವಾರ್ತೆ,
ವಿಜಯಪುರ,ಆ. ೩೧:ನಗರದ ಪ್ರತಿಷ್ಠಿತ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ೨೦೨೩-೨೪ ನೇ ಸಾಲಿನಲ್ಲಿ ರೂ.೨೦.೨೨ ಕೋಟಿ ನಿವ್ವಳ ಲಾಭ ಗಳಿಸಿದ್ದು, ಇದು ದಾಖಲಾರ್ಹ ಸಾಧನೆಯಾಗಿದೆ ಎಂದು ಸಕ್ಕರೆ ಸಚಿವ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ತಿಳಿಸಿದರು.
ಶನಿವಾರ ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬ್ಯಾಂಕ್ ಸಾಧನೆ ವಿವರ ನೀಡಿದರು.
ಬ್ಯಾಂಕಿನ ಈ ವರ್ಷದ ಲಾಭವನ್ನು ೨೦೨೨-೨೩ ನೇ ಸಾಲಿನ ಲಾಭ ರೂ.೧೪.೩೦ ಕೋಟಿಗಳಿಗೆ ಹೋಲಿಸಿದಾಗ ಶೇ.೪೧.೪೦ ರಷ್ಟು ಏರಿಕೆಯಾಗಿದೆ. ವ್ಯವಹಾರದಲ್ಲಿ ಹೆಚ್ಚಳ ಹಾಗೂ ಅನುತ್ಪಾದಕ ಆಸ್ತಿ ಪ್ರಮಾಣದಲ್ಲಿ ಇಳಿಕೆಯಾಗಿದ್ದರಿಂದ ಲಾಭದಲ್ಲಿ ಏರಿಕೆಯಾಗಿದೆ ಎಂದರು.
೩೧-೦೩-೨೦೨೩ ಕ್ಕೆ ಶೇ.೬.೨೧ ರಷ್ಟಿದ್ದ ಬ್ಯಾಂಕಿನ ಎನ್.ಪಿ.ಎ ಪ್ರಮಾಣ ೩೧-೦೩-೨೦೨೪ ಶೇ.೪.೧೬ ರಷ್ಟಾಗಿದ್ದು ನೆಟ್ ಎನ್.ಪಿ.ಎ ಶೇ.೦.೭೪ ರಷ್ಟು ಇದ್ದದ್ದು ಶೂನ್ಯವಾಗಿದೆ ಎಂದು ತಿಳಿಸಿದರು.
ರಿಜರ್ವ್ ಬ್ಯಾಂಕ್ ನಿಯಮಾನುಸಾರ ಸಿಆರ್‌ಎಆರ್ ಪ್ರಮಾಣ ಶೇ.೯ ರಷ್ಟು ಇರಬೇಕಿದ್ದು ನಮ್ಮ ಬ್ಯಾಂಕಿನ
ಸಿಆರ್‌ಎಆರ್ ಪ್ರಮಾಣ ಶೇ.೧೨.೫೫ ರಷ್ಟು ಇರುವುದು. ಇದು ಬ್ಯಾಂಕಿನ ಸದೃಢತೆಯನ್ನು ಸ್ಪಷ್ಟಪಡಿಸುತ್ತದೆ ಎಂದು ನುಡಿದರು.
ಬ್ಯಾಂಕಿನ ಒಟ್ಟು ವ್ಯವಹಾರ ಕಳೆದ ವರ್ಷ ರೂ.೬೦೮೩ ಕೋಟಿ ಇದ್ದದ್ದು ೨೦೨೩-೨೪ ಕ್ಕೆ ರೂ.೬೬೦೭ ಕೋಟಿಗಳಷ್ಟಾಗಿದೆ. ಈ ವರ್ಷದಲ್ಲಿ ರೂ.೫೨೪ ಕೋಟಿ ಏರಿಕೆಯಾಗಿದೆ ಎಂದರು.
೩೧-೦೩-೨೦೨೪ ಕ್ಕೆ ಬ್ಯಾಂಕ್ ನೀಡಿದ ಕೃಷಿ ಸಾಲಗಳ ಬಾಕಿ ರೂ.೧೮೬೫ ಕೋಟಿ ಮತ್ತು ಕೃಷಿಯೇತರ ಸಾಲ ಬಾಕಿ ರೂ.೧೨೪೭ ಕೋಟಿ ಒಟ್ಟಾರೆ ರೂ.೩೧೧೨ ಕೋಟಿಗಳಷ್ಟು ಇರುವುದು. ಬ್ಯಾಂಕು ಕೃಷಿ ಮತ್ತು ಕೃಷಿಯೇತರ ಸಾಲಗಳಿಗೆ ಶೇ.೬೦:೪೦ ರ ಅನುಪಾತದಲ್ಲಿ ಸಾಲ ನೀಡಿದೆ. ಬ್ಯಾಂಕು ೨.೪೩ ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ಹಾಗೂ ಶೇ.೩ ರ ಬಡ್ಡಿ ದರದಲ್ಲಿ ಕೃಷಿ ಅವಧಿ ಸಾಲ ನೀಡಿದೆ ಎಂದು ತಿಳಿಸಿದರು.
ಸರ್ಕಾರದ ಬಡ್ಡಿ ಸಹಾಯಧನ ಯೋಜನೆಯಡಿ ಶೂನ್ಯ ಬಡ್ಡಿ ದರದಲ್ಲಿ ನೀಡುವ ಬೆಳೆ ಸಾಲದ ಮಿತಿಯನ್ನು ರೂ.೩ ರಿಂದ ರೂ.೫ ಲಕ್ಷಕ್ಕೆ ಹಾಗೂ ಕೃಷಿ ಮಧ್ಯಮಾವಧಿ ಸಾಲಗಳ ಮಿತಿಯನ್ನು ರೂ.೧೦ ರಿಂದ ರೂ.೧೫ ಲಕ್ಷಕ್ಕೆ ಹೆಚ್ಚಿಸಿದೆ. ಬ್ಯಾಂಕು ಸಂಪನ್ಮೂಲ ಆಧರಿಸಿ ಸಾಲ ವಿತರಣೆಗೆ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಪ್ರಸಕ್ತ ವರ್ಷ ಸಕಾಲಿಕ ಮಳೆ ಆಗಿದ್ದು ತಲಾ ರೈತರಿಗೆ ಫ್ಯಾಕ್ಸುಗಳ ಮೂಲಕ ನೀಡುವ ಬೆಳೆ ಸಾಲದ ಕನಿಷ್ಠ ಮಿತಿಯನ್ನು ರೂ.೬೫,೦೦೦ ಗಳಿಂದ ರೂ.೭೫,೦೦೦ ಗಳಿಗೆ ಹೆಚ್ಚಿಸಿದೆ. ಇದರಿಂದ ಈ ವರ್ಷ ರೂ.೨೦೦ ಕೋಟಿ ಹೆಚ್ಚುವರಿ ಸಾಲ ವಿತರಣೆಗೆ ಮೀಸಲಿರಿಸಲಾಗಿದೆ ಎಂದರು.
ನಬಾರ್ಡ್ ಸಾಲ ಧೋರಣೆಯನ್ವಯ ಆರ್ಥಿಕ ವರ್ಷದಲ್ಲಿ ವಿತರಿಸುವ ಬೆಳೆ ಸಾಲದ ಮೇಲೆ ಶೇ.೪೦ ರ ಪುನರ್ ಧನ ಒದಗಿಸಬೇಕಿದ್ದು ೨೦೨೩-೨೪ ರಲ್ಲಿ ವಿತರಣೆಯಾದ ರೂ.೧೬೭೫ ಕೋಟಿ ಬೆಳೆ ಸಾಲಕ್ಕೆ ರೂ.೪೦೪.೮೩ ಕೋಟಿ ಮಾತ್ರ ಪುನರ್ ಧನ ಮಂಜೂರು ಆಗಿ ಬಿಡುಗಡೆಯಾಗಿದೆ. ಬ್ಯಾಂಕು ಬೆಳೆ ಸಾಲದಲ್ಲಿ ರೂ.೨೬೫ ಕೋಟಿ ಹೆಚ್ಚುವರಿಗೆ ತನ್ನ ಸ್ವಂತ ಸಂಪನ್ಮೂಲ ತೊಡಗಿಸಿದೆ.
೫೦,೦೦ ೨೭ ಸಹಕಾರಿ ಹಾಗೂ ಖಾಸಗಿ ವಲಯದ ಸಕ್ಕರೆ ಕಾರಖಾನೆಗಳಿಗೆ ಸಾಲ ನೀಡಿ ಕಾರ್ಯಾಚರಣೆಗೆ ಕಾರಣವಾಗಿದೆ. ೩೧-೦೩-೨೦೨೪ ಕ್ಕೆ ೨೧ ಸಕ್ಕರೆ ಕಾರಖಾನೆಗಳಿಂದ ರೂ.೭೪೭.೯೦ ಕೋಟಿ ಬರತಕ್ಕ ಸಾಲವಿದೆ ಎಂದರು.
ಪ್ಯಾಕ್ಸುಗಳ ಮಟ್ಟದಲ್ಲಿ ವ್ಯಾಪಾರ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸಿದ್ದು ಕೃಷಿ ಹಾಗೂ ಕೃಷಿಯೇತರ ಮತ್ತು ಸಾಲೇತರ ವ್ಯವಹಾರ ನಿರ್ವಹಿಸುತ್ತಿದೆ. ಸಂಘಗಳ ಮಟ್ಟದಲ್ಲಿ ರೂ.೯೫೯ ಕೋಟಿ ಠೇವಣಿ ಸಂಗ್ರಹಣೆವಾಗಿರುವುದು ದಾಖಲಾರ್ಹ ಸಾಧನೆಯಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಪ್ಯಾಕ್ಸುಗಳ ಮಟ್ಟದಲ್ಲಿ ಗಣಕೀಕರಣ ವ್ಯವಸ್ಥಿತ ರೀತಿಯಲ್ಲಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿರ್ದೇಶಕರಾದ ಗುರುಶಾಂತ ನಿಡೋಣಿ, ಕಲ್ಲನಗೌಡ ಪಾಟೀಲ, ಶೇಖರ ದಳವಾಯಿ, ಬಾಪುಗೌಡ ಪಾಟೀಲ, ಹನಮಂತರಾಯಗೌಡ ಪಾಟೀಲ, ಸುರೇಶ ಬಿರಾದಾರ, ಚಂದ್ರಶೇಖರ ಪಾಟೀಲ, ಅರವಿಂದ ಪೂಜಾರಿ, ಎಸ್.ಕೆ. ಭಾಗ್ಯಶ್ರೀ, ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಡಿ. ಬಿರಾದಾರ ಮತ್ತಿತರರು ಪತ್ರಿಕಾಗೋಷ್ಠಿ ಇದ್ದರು.