ಶ್ರೀರಾಮಚಂದ್ರ ವಿದ್ಯಾಸಂಸ್ಥೆಯಲ್ಲಿ ಗಾಂಧೀಜೀ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ರವರ ಜಯಂತಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.02– ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾ ಪುರುಷರಲ್ಲಿ ಮಹಾತ್ಮಗಾಂಧೀಜೀಯವರು ಅವರ ಹೋರಾಟದ ಫಲವಾಗಿ ನಮ್ಮದೇಶಕ್ಕೆ ಸ್ವತಂತ್ರ ಬಂದಿದೆ. ಅವರ ಜನ್ಮದಿನವನ್ನು ಅಕ್ಟೋಬರ್ 02 ರಂದು ಗಾಂಧಿಜಯಂತಿ ಎಂದು ದೇಶಾಧ್ಯಂತ ಆಚರಿಸಲಾಗುತ್ತಿದೆ ಎಂದು ಶ್ರೀರಾಮಚಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಎಸ್.ಮಾದಯ್ಯ ತಿಳಿಸಿದರು.
ನಗರದ ನ್ಯಾಯಾಲಯ ರಸ್ತೆಯಲ್ಲಿ ಇರುವ ಶ್ರೀರಾಮಚಂದ್ರ ವಿದ್ಯಾಸಂಸ್ಥೆಯಲ್ಲಿ ಮಹಾತ್ಮಗಾಂಧಿಜೀ ಹಾಗೂ ಮಾಜಿ ಪ್ರಧಾನಿ ದಿವಂಗತ ಲಾಲ್ ಬಹದ್ದೂರು ಶಾಸ್ತ್ರಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಗಾಂಧಿಜೀ ಮತ್ತು ಲಾಲ್ ಬಹದ್ದೂರು ಶಾಸ್ತ್ರಿರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ದೇಶಕ್ಕಾಗಿ ತಮ್ಮ ಸರ್ವಸ್ವವನ್ನೇ ಮುಡುಪಾಗಿಟ್ಟಂತಹ ವ್ಯಕ್ತಿಗಳು ಬಹಳಷ್ಟು ಜನರಿದ್ದಾರೆ ಅದರಲ್ಲಿ ಮಹಾತ್ಮ ಗಾಂಧೀಜೀಯವರ ಪಾತ್ರ ಬಹಳ ಮುಖ್ಯವಾಗಿದೆ. ನಮ್ಮ ದೇಶಕ್ಕೆ ಅಡಿಗಲ್ಲು ಗ್ರಾಮೀಣ ಪ್ರದೇಶಗಳು ಗ್ರಾಮಗಳು ಅದರ ಸ್ವಚ್ಚತೆಯು ದೇಶದ ಅಭಿವೃದ್ದಿಗೆ ಕಾರಣವಾಗುತ್ತದೆ ಎಂದು ಗಾಂಧೀಜೀಯವರು ಅಂದೇ ತಿಳಿಸಿದ್ದರು. ವಿದ್ಯಾರ್ಥಿಗಳು ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಚತೆಯಿಂದ ನೋಡಿಕೊಳ್ಳಿ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಎಂ ರುದ್ರಮೂರ್ತಿ ಅವರು ಮಾತನಾಡಿ, ಗಾಂಧಿಜೀಯವರ ಅಹಿಂಸಾ ಪ್ರತಿರೋಧ ತತ್ವಗಳು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯಕ್ಕಾಗಿ ಭಾರತದ ಯಶಸ್ವಿ ಹೋರಾಟದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದವು ಅವರನ್ನು ವಿದೇಶದಲ್ಲು ನೆನೆಯುವರು ಇದ್ದಾರೆ, ಶಾಲೆಗಳಲ್ಲಿ ವಿದ್ಯಾರ್ಥಿಗಳು ನಮ್ಮ ದೇಶಕ್ಕಾಗಿ ಹೋರಾಟ ಮಾಡಿದ ಹಾಗೂ ದೇಶದ ಅಭಿವೃದ್ಧಿಗೆ ದುಡಿದ ಮಹಾಪುರುಷರ ಪುಸ್ತಕಗಳನ್ನು ಓದುವುದರಿಂದ ಜ್ಞಾನ ಹೆಚ್ಚುತ್ತದೆ ಎಂದು ಹೇಳಿದರು.
ಗಾಂಧಿ ಜಯಂತಿಯ ದಿನವೇ ನಮ್ಮ ದೇಶದ ಪ್ರಧಾನಿಯಾಗಿದ್ದ ದಿವಂಗತ ಲಾಲ್ ಬಹದ್ದೂರು ಶಾಸ್ತ್ರಿಯವರ ಜನ್ಮದಿನವು ಸಹ ಆಚರಿಸಲಾಗುತ್ತದೆ. ನಮ್ಮದೇಶಕ್ಕಾಗಿ ಮಾಡಿರುವ ಅವರ ಸೇವೆ ಅನನ್ಯವಾಗಿದೆ. ನಿಷ್ಠಾವಂತ ಪ್ರಧಾನಿಯಾಗಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಆವರಣವನ್ನು ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಪದಾಧಿಕಾರಿಗಳು ಶಿಕ್ಷಕರು ಸ್ವಚ್ಚ ಗೊಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ರತ್ನಮ್ಮ, ದೈಹಿಕ ಶಿಕ್ಷಕ ರಂಗಸ್ವಾಮಿ.ಎಸ್, ವೀರಣ್ಣ.ಸಿ, ಪರಶಿವಮೂರ್ತಿ, ಮಹೇಶ್.ಎಸ್, ನಾಗರಾಜು ಹಾಗೂ ವಿದ್ಯಾರ್ಥಿಗಳು ಇದ್ದರು.