ರೇಬಿಸ್ ಖಾಯಿಲೆಗೆ ಸಾವಿರಾರು ಜನ ಬಲಿಯಾಗುತ್ತಿದ್ದಾರೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.03: ರೇಬಿಸ್ ಖಾಯಿಲೆಯಿಂದ ಪ್ರತಿವರ್ಷ ಭಾರತದಲ್ಲಿ ಸಾವಿರಾರು ಜನ ಸಾಯುತ್ತಿದ್ದಾರೆ ಇವರಲ್ಲಿ 5 ರಿಂದ 13 ವರ್ಷದೊಳಗಿನ ಮುಗ್ಧ ಮಕ್ಕಳು ಎಂಬುದು ನಿಜಕ್ಕೂ ನೋವಿನ ಸಂಗತಿ ಎಂದು ಬಂಡಿಹೊಳೆ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪುನೀತ್ ತಿಳಿಸಿದರು.
ಅವರು ತಾಲೂಕಿನ ಕಸಬಾ ಹೋಬಳಿಯ ಬಂಡಿಹೊಳೆಯಲ್ಲಿ ಗ್ರಾಮದಲ್ಲಿ ಆಯೋಜಿಸಿದ್ದ “ವಿಶ್ವ ರೇಬಿಸ್ ದಿನಾಚರಣೆಯ”ನ್ನು ಅಕ್ಕಿಹೆಬ್ಬಾಳು ಪಶು ವೈದ್ಯಾಧಿಕಾರಿ ಡಾ.ಚೇತನ್ ರೊಂದಿಗೆ ಉದ್ಘಾಟಿಸಿ ಮಾತನಾಡಿದರು.
ರೇಬಿಸ್ ಖಾಯಿಲೆಗೆ ಲಸಿಕೆ ಕಂಡುಹಿಡಿದ ವಿಜ್ಞಾನಿ ಸರ್ ಲೂಯಿಸ್ ಪಾಶ್ಚರ್‍ರವರ ಪುಣ್ಯತಿಥಿಯ ಸ್ಮರಣಾರ್ಥ ಪ್ರತಿವರ್ಷ ಸೆಪ್ಟೆಂಬರ್ 28 ರಂದು “ವಿಶ್ವ ರೇಬಿಸ್ ದಿನಾಚರಣೆ”ಯನ್ನು ಆಚರಿಸಲಾಗುತ್ತದೆ. ಈ ವರ್ಷದ ಘೋಷವಾಕ್ಯ “ರೇಬಿಸ್ ಗಡಿಗಳನ್ನು ಮೀರಿ ಮುಂದುವರಿಯೋಣ” ಎಂದರು. ಲೈಸಾ ಎನ್ನುವ ವೈರಾಣುವಿನಿಂದ ಉಂಟಾಗುವ ಖಾಯಿಲೆ ಮಾನವರಿಗೆ ಸೋಂಕು ಬಾಧಿತ ನಾಯಿ ಕಚ್ಚುವುದರ ಮೂಲಕ ಅಥವಾ ಗಾಯಗಳನ್ನು ನೆಕ್ಕುವುದರ ಮೂಲಕ ಹರಡುವುದಾಗಿದೆ. ಸೋಂಕಿತ ನಾಯಿಯ ಜೊಲ್ಲಿನಿಂದ ಮಾನವನ ದೇಹವನ್ನು ಪ್ರವೇಶಿಸುವ ವೈರಸ್ ಮೆದುಳಿನ ಸೋಂಕಿಗೆ ಕಾರಣವಾಗುತ್ತದೆ ಎಂದರು.
ಭಾರತದಲ್ಲಿ 99% ಕಿಂತ ಹೆಚ್ಚು ಪ್ರಕರಣಗಳು ಸೋಂಕಿತ ಬೀದಿನಾಯಿಗಳ ಕಡಿತದಿಂದ ಉಂಟಾಗುತ್ತದೆ. ರೇಬಿಸ್ ಹರಡಬಲ್ಲ ಇತರ ಪ್ರಾಣಿಗಳೆಂದರೆ ಬೆಕ್ಕು, ಬಾವಲಿ, ನರಿ ಮತ್ತು ಇತರ ಕಾಡು ಪ್ರಾಣಿಗಳು. ರೇಬಿಸ್ ಲಕ್ಷಣಗಳು ಕಾಣಿಸಿಕೊಳ್ಳಲು ಸಾಮಾನ್ಯವಾಗಿ 1 ತಿಂಗಳಿಂದ 3 ತಿಂಗಳವರೆಗೆ ಸಮಯ ಹಿಡಿಯುತ್ತದೆ, ಕೆಲವೊಮ್ಮೆ ಒಂದು ವರ್ಷವೂ ಆಗಬಹುದು. ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮೊದಲು ಕೆಲವು ದಿನಗಳವರೆಗೆ ವ್ಯಕ್ತಿಯ ದೇಹದಲ್ಲಿ ಸುಪ್ತವಾಗಿರುತ್ತದೆ. ಕಚ್ಚಿದ ಸ್ಥಳದಲ್ಲಿ ನೋವು, ತಲೆನೋವು,ಗಂಟಲುನೋವು, ಜ್ವರ ಮತ್ತು ಕಚ್ಚಿದಜಾಗ ಜುಮ್ಮೆನಿಸುವಿಕೆ ಆರಂಭಿಕ ಲಕ್ಷಣಗಳು. ಅತಿಯಾದ ಜೊಲ್ಲು, ನುಂಗಲು ಕಷ್ಟವಾಗುವುದರಿಂದ ನೀರಿನ ಭಯ, ಆತಂಕ, ಗೊಂದಲ, ನಿದ್ರಾಹೀನತೆ ಮತ್ತು ಭಾಗಶಃ ಪಾಶ್ರ್ವವಾಯು ಅಂತಹ ರೋಗಲಕ್ಷಣಗಳು ರೇಬಿಸ್ ಅನ್ನು ಸೂಚಿಸುತ್ತವೆ ಎಂದರು.
ಗಾಯವನ್ನು ತಕ್ಷಣವೇ ಹರಿಯುವ ನೀರು ಮತ್ತು ಸೋಪನ್ನು ಉಪಯೋಗಿಸಿ ಕನಿಷ್ಠ 15 ರಿಂದ 20 ನಿಮಿಷಗಳ ಕಾಲ ಸ್ವಚ್ಛಗೊಳಿಸಬೇಕು. ಯಾವುದೇ ಕಾರಣಕ್ಕೂ ಗಾಯವನ್ನು ಅರಿಶಿನ, ಕಾಫಿಪುಡಿಯಿಂದಾಗಲಿ ಮುಚ್ಚುವುದಾಗಲಿ, ಹೊಲಿಗೆ ಹಾಕಿಸುವುದು ಆಗಲಿ, ಬಟ್ಟೆ ಕಟ್ಟುವುದಾಗಲಿ ಮಾಡಬಾರದು. ಕಚ್ಚಿದ ನಾಯಿ ಅಥವಾ ಪ್ರಾಣಿಗಳನ್ನು ಯಾವುದೇ ಕಾರಣಕ್ಕೂ ಕೊಲ್ಲಬಾರದು, 10 ದಿನಗಳ ಕಾಲ ಅದರ ಆರೋಗ್ಯವನ್ನು ಅನುಸರಿಸಿ ವೈದ್ಯರಿಗೆ ಮಾಹಿತಿ ನೀಡಬೇಕು. ಗಾಯಗಳ ತೀವ್ರತೆಯ ಮೇರೆಗೆ ರೇಬಿಸ್ ಲಸಿಕೆ ಮತ್ತು ರೇಬಿಸ್ ಇಮ್ಯುನೋಗ್ಲೋಬ್ಯುಲಿನ್ ಪಡೆಯಬೇಕು ಎಂದರು.