ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ತಿ.ನರಸೀಪುರ.ಆ 3 :- ಕಾಲೇಜು ವಿದ್ಯಾರ್ಥಿಗಳಲ್ಲಿ ಕಲೆ ಮತ್ತು ಕಲಿಕೆ ಎರಡು ವೃದ್ಧಿಯಾಗಲು ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಸೋಲು ಮತ್ತು ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವನೆಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಸಿ.ಲಿಂಗರಾಜು ಕಿವಿಮಾತು ಹೇಳಿದ್ದಾರೆ.
ಪಟ್ಟಣದ ಹಳೇ ಸಂತೆಮಾಳದ ತಲಕಾಡು ಹೆಮ್ಮಿಗೆ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನ ಪಡೆದ ಬಳಿಕ ಪದವಿ ಪೂರ್ವ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳು ಪ್ರಬುದ್ಧತೆಯನ್ನು ಮೈಗೂಡಿಸಿಕೊಳ್ಳಲು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ಸಾಹವನ್ನು ತೋರಬೇಕೆಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಸೂಚನೆ ಹಿನ್ನೆಲೆಯಲ್ಲಿ ವಿವಿಧ ಕಾಲೇಜುಗಳ ಪ್ರಾಂಶುಪಾಲರ ಸಹಕಾರದಿಂದ ತಾಲೂಕು ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪೂರ್ತಿಯನ್ನು ಕಾಲೇಜಿನಲ್ಲಿ ಆಯೋಜಿಸಿದ್ದೇವೆ. ಪ್ರತಿಯೊಂದು ಸ್ಪರ್ಧೆಯಲ್ಲೂ ಭಾಗವಹಿಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಗೆಲುವಿನ ನಿರೀಕ್ಷೆಯಲ್ಲಿ ಭಾಗವಹಿಸಬೇಕು. ಅನಿರೀಕ್ಷಿತವಾಗಿ ಎದುರಾಗುವ ಸೋಲನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು. ಸೋಲು ಮುಂದಿನ ಗೆಲುವಿಗೆ ಮೆಟ್ಟಿಲು ಎಂಬುದನ್ನ ಅರಿತು ವ್ಯಾಸಂಗವನ್ನು ಮುಂದುವರಿಸಬೇಕು ಎಂದು ಡಿ.ಸಿ.ಲಿಂಗರಾಜು ತಿಳಿಸಿದರು.ಕನ್ನಡ ಮತ್ತು ಇಂಗ್ಲಿಷ್ ಚರ್ಚಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆ ಸೇರಿದಂತೆ ಜಾನಪದ ಗೀತೆ, ಭಾವಗೀತೆ, ಭಕ್ತಿಗೀತೆ, ರಸಪ್ರಶ್ನೆ, ಆಶುಭಾಷಣ ಹಾಗೂ ಏಕಪಾತ್ರಾಭಿನಯ ಸ್ಪರ್ಧೆಗಳಲ್ಲಿ ತಾಲೂಕಿನ 17 ಪದವಿ ಪೂರ್ವ ಕಾಲೇಜುಗಳಿಂದ 160 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ಗೂಳೇಗೌಡ, ಮಹೇಶ್, ನಾಗರತ್ನ, ಕಲ್ಪನಾ, ರಾಜಯ್ಯ, ಉಪನ್ಯಾಸಕರಾದ ಮೂಗೂರು ಕುಮಾರಸ್ವಾಮಿ, ಡಾ.ಎಸ್. ಮಂಗಳಮೂರ್ತಿ, ಎನ್.ಜವರಯ್ಯ, ವಿಜಯಸ್ವಾಮಿ, ಸಿದ್ದಪ್ಪ, ಎಂ.ಸಿದ್ದರಾಜು, ಎ.ಅಂಜನ್ ಕುಮಾರ್, ಡಿ.ಎಂ. ರಾಜಶೇಖರ್, ಎಂ.ರಾಜೇಂದ್ರ ಪ್ರಸಾದ್, ಪಿ.ಗಿರೀಶ್, ಸುಮಿತ್ರ, ನಂಜಮ್ಮಣಿ ಹಾಗೂ ಇತರರು ಇದ್ದರು.