ಕೆಡಿಪಿ ಸಭೆಯಲ್ಲಿ ಡಿಸಿ ವಿರುದ್ಧ ಭೋಜೇಗೌಡ ಗರಂ
ಮಂಗಳೂರು: ಕೆಡಿಪಿ ಸಭೆಯ ವೇಳೆ ವೇದಿಕೆಯ ಆಸನ ವ್ಯವಸ್ಥೆಯಲ್ಲಿ ಶಿಷ್ಟಚಾರ ಪಾಲಿಸಿಲ್ಲವೆಂದು ವಿಧಾನಪರಿಷತ್ ಸದಸ್ಯ ಎಸ್ ಭೋಜೇಗೌಡ ಅವರು ಜಿಲ್ಲಾಧಿಕಾರಿ ವಿರುದ್ಧ ಕೆಂಡಾಮಂಡಲವಾದ ಘಟನೆ ನಡೆದಿದೆ.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆದಿತ್ತು. ಸಭೆಯಲ್ಲಿ ವೇದಿಕೆಯಲ್ಲಿ ಅಧಿಕಾರಿಗಳನ್ನು ಕುಳಿತುಕೊಳ್ಳಿಸುವ ವಿಚಾರದಲ್ಲಿ ಶಿಷ್ಟಚಾರ ಪಾಲಿಸಿಲ್ಲ ಎಂದು ಸಭೆಯ ಆರಂಭದಲ್ಲಿಯೇ ಭೋಜೇಗೌಡರು ಆಕ್ಷೇಪ ಎತ್ತಿದ್ದಾರೆ. ಅಧಿಕಾರಿಗಳಲ್ಲಿ ಡಿಸಿ, ಜಿಪಂ ಸಿಇಒ ಇಬ್ಬರು ವೇದಿಕೆಯಲ್ಲಿ ಇರುವುದಕ್ಕೆ ಆಕ್ಷೇಪಣೆ ಇಲ್ಲ. ಆದರೆ ಅರಣ್ಯ ಇಲಾಖೆಯ ಅಧಿಕಾರಿ ಸೇರಿದಂತೆ ಉಳಿದ ಅಧಿಕಾರಿಗಳು ಯಾವ ನೀತಿಸಂಹಿತೆಯ ಆಧಾರದಲ್ಲಿ ವೇದಿಕೆಯಲ್ಲಿ ಆಸನ ಕೊಡಲಾಗಿದೆ ಎಂದು ಡಿಸಿ ತಿಳಿಸಲಿ ಎಂದು ಗರಂ ಆದರು.
ಈ ವೇಳೆ ದಿನೇಶ್ ಗುಂಡೂರಾವ್ ಅವರು ಸಮಾಧಾನ ಮಾಡಲೆತ್ನಿಸಿದರೂ, ಭೋಜೇಗೌಡರು ಇದಕ್ಕೆ ಡಿಸಿ ಇದಕ್ಕೆ ಉತ್ತರಿಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆಗ ಡಿಸಿ ಮುಲ್ಲೈ ಮುಹಿಲನ್ ಅವರು ‘ಇದು ಪದ್ಧತಿ ಪ್ರಕಾರ ಮಾಡಿದ್ದು, ಇದರಲ್ಲೇನಾದರೂ ನೀತಿಸಂಹಿತೆ ಇದೆಯೇ ಎಂದು ಪರಿಶೀಲನೆ ನಡೆಸುತ್ತೇನೆ’ ಎಂದು ಹೇಳಿದರು. ಆಗ ಮತ್ತೆ ಗರಂ ಆದ ಭೋಜೇಗೌಡರು ‘ಅದಕ್ಕೊಂದು ನಿಯಮ ಬೇಕಲ್ವೇನ್ರೀ?. ನಾನು ಮೇಲೆ ಬಂದು ಕೂರಲಾ?’ ಕೆಂಡಾಮಂಡಲವಾಗಿದ್ದಾರೆ. ಆಗ ಸಮಾಧಾನಪಡಿಸಲು ಬಂದ ಎಂಎಲ್‌ಸಿ ಐವಾನ್ ಡಿಸೋಜರಿಗೂ ಭೋಜೇಗೌಡರು ಕ್ಲಾಸ್ ತೆಗೆದುಕೊಂಡರು.