ಪಟ್ಟೆಯಲ್ಲಿ ‘ಕೆಸರುಗದ್ದೆ ಕ್ರೀಡಾಕೂಟ’, ಡಾ. ರವೀಶ್‌ಗೆ ಸನ್ಮಾನ
ಪುತ್ತೂರು: ಪರಿಸರದೊಂದಿಗೆ ಬೆರೆತುಕೊಂಡಿರುವ ತುಳುನಾಡ ಸಂಸ್ಕೃತಿಯು ಅತ್ಯಂತ ಅನನ್ಯವಾದುದು. ಸಾಂಸ್ಕೃತಿಕ, ಸಾಂಪ್ರದಾಯಿಕ ಮಹತ್ವ ಹೊಂದಿರುವ ತುಳುನಾಡಿನ ಆಚರಣೆಗಳನ್ನು ಉಳಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಬಡಗನ್ನೂರು ಗ್ರಾಮದ ಪಟ್ಟೆ ಶ್ರೀಕೃಷ್ಣ ಯುವಕ ಮಂಡಲದ ಆಶ್ರಯದಲ್ಲಿ ನೆಹರೂ ಯುವ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾದ ಕಟ್ಟೆದ ಕಂಡೊಡ್ ಆಟಿದ ಐಸಿರ ‘ಕೆಸರುಗದ್ದೆ ಕ್ರೀಡಾಕೂಟ’ದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸನ್ಮಾನ
ಕಾರ್ಯಕ್ರದಲ್ಲಿ ದೈವ ನರ್ತಕ, ಪ್ರಾಧ್ಯಾಪಕ, ಎಂಜಿನಿಯರ್ ಆದ ಡಾ. ರವೀಶ್ ಪಡುಮಲೆ ಅವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು.
ಪಟ್ಟೆ ಶ್ರೀಕೃಷ್ಣ ಯುವಕಮಂಡಲದ ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ಶಂಕರಿ ಕೆ., ಸ್ಥಳದಾನಿ ಶಿರೀಶ್ ಪಿ.ಬಿ., ಉದ್ಯಮಿ ಗಿರೀಶ್ ರೈ, ಅಶಿತ್ ರೈ ಪೇರಾಲು, ಪಡುಮಲೆ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜನಾರ್ಧನ ಪೂಜಾರಿ ಪದಡ್ಕ, ಕೃಷ್ಣಪ್ರಸಾದ್ ಆಳ್ವ, ಯುವಕಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀಕೃಷ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಕೇಶವ ಪ್ರಸಾದ್ ನೀಲಗಿರಿ ಕಾರ್ಯಕ್ರಮ ನಿರ್ವಹಿಸಿದರು. ಕೆಸರು ಗದ್ದೆಯಲ್ಲಿ ಮಕ್ಕಳು ಹಾಗೂ ಹಿರಿಯರಿಗೆ ವಾಲಿಬಾಲ್, ಹಗ್ಗಜಗ್ಗಾಟ, ಮಡಿಕೆ ಒಡೆಯುವುದು ಸೇರಿದಂತೆ ಕೆಸರಿನ ಕ್ರೀಡಾಕೂಟಗಳು ನಡೆದವು.