ತಂಬಾಕಿನಿಂದ ಬದುಕು ಸಂಕಷ್ಟ-ಡಾ.ದೀಪಕ್ ರೈ
ಪುತ್ತೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು  ಆರೋಗ್ಯಾಧಿಕಾರಿಗಳ ಕಚೇರಿ ಪುತ್ತೂರು, ನಗರಸಭೆ ಪುತ್ತೂರು, ಸಾರ್ವಜನಿಕ ಆರೋಗ್ಯ ಆಸ್ಪತ್ರೆ ಪುತ್ತೂರು ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಪುತ್ತೂರು ಸಹಯೋಗದಲ್ಲಿ ರಾಷ್ಟ್ರೀಯ ಬಾಯಿಯ ಆರೋಗ್ಯ ಕಾರ್ಯಕ್ರಮದಡಿ ನಗರಸಭಾ ಪೌರ ಕಾರ್ಮಿಕರಿಗೆ ತಂಬಾಕು ಸೇವನೆಯ ದುಷ್ಪರಿಣಾಮ ಮಾಹಿತಿ ಹಾಗೂ ಬಾಯಿ ಆರೋಗ್ಯ ಸ್ಕ್ರೀನಿಂಗ್ ಕಾರ್ಯಕ್ರಮವನ್ನು ಶುಕ್ರವಾರ ನಗರಸಭಾ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಮಾತನಾಡಿ, ಇಂದು ಆರೋಗ್ಯ ರಕ್ಷಣೆಗೆ ಪ್ರತಿಯೊಬ್ಬರೂ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ. ತಂಬಾಕು ಸೇವನೆಯಿಂದ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು ಬರುತ್ತವೆ. ಮುಖ್ಯವಾಗಿ ಕಾರ್ಮಿಕರು ಇದರಿಂದ ದೂರವಿದ್ದು, ಆರೋಗ್ಯ ಕಾಪಾಡಿಕೊಳ್ಳಬೇಕು, ತಂಬಾಕಿನಿಂದ ನಮ್ಮ ಬದುಕಿಗೇ ಸಂಕಷ್ಟ ಉಂಟಾಗುತ್ತದೆ ಎಂದರು.
ನಗರಸಭಾ ಕಾರ್ಯಪಾಲಕ ಅಭಿಯಂತರ (ಪರಿಸರ) ಶಬರಿನಾಥ್ ಮಾತನಾಡಿ, ನಗರ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರ ಆರೋಗ್ಯ ಕಾಳಜಿ ವಹಿಸುವ ಜವಾಬ್ದಾರಿ ನಮಗೂ ಇದೆ. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರಿಗೆ ಆರೋಗ್ಯ ಮಾಹಿತಿ ಹಾಗೂ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸರಕಾರಿ ಆಸ್ಪತ್ರೆಯ ವೈದ್ಯ ಡಾ. ಜಯದೀಪ್ ಮಾತನಾಡಿ, ಪೌರ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಸಂಬಂಧಿಸಿ ಶಿಬಿರವನ್ನು ೨ ನೇ ವರ್ಷ ಆಯೋಜಿಸುತ್ತಿದ್ದೇವೆ. ಒತ್ತಡದ ಕೆಲಸ ನಿರ್ವಹಿಸುವ ಕಾರ್ಮಿಕರು ತಂಬಾಕಿನಂತಹ ಪದಾರ್ಥವನ್ನು ಹೆಚ್ಚು ಸೇವಿಸುತ್ತಾರೆ. ಈ ಕಾರಣದಿಂದ ಅವರು ಆರೋಗ್ಯ ಕಾಪಾಡಿಕೊಳ್ಳುವ ಮಾಹಿತಿ ತಿಳಿದಿರಬೇಕು ಎಂದರು. ಡಾ. ಸುಶ್ಮಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಗರಸಭೆಯ ಸಮುದಾಯ ಸಂಘಟಕ ಕರುಣಾಕರ ಕಾರ್ಯಕ್ರಮ ನಿರ್ವಹಿಸಿದರು. ಅನಂತರ ಪಿಪಿಟಿ ಮೂಲಕ ಆರೋಗ್ಯ ಮಾಹಿತಿ, ಆರೋಗ್ಯ ತೊಪಾಸಣೆ ನಡೆಯಿತು. ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ ಮೊದಲಾದವರು ಪಾಲ್ಗೊಂಡರು.