ಪ್ರಜ್ಞಾವಂತ ವರ್ಗ ಶೋಷಿತ ವರ್ಗಗಳ ಪರ ಪ್ರಶ್ನೆ ಮಾಡಬೇಕು
ಕಲಬುರಗಿ:ಆ.30:ವರ್ತಮಾನದ ತಲ್ಲಣ ಮತ್ತು ಬೇಗುದಿಯ ವಿಲಕ್ಷಣ ಘಟನೆಗಳು ಸಮಾಜವನ್ನು ಬಾದಿಸುತ್ತಿವೆ. ಬದುಕಿನ ಕನಸು ಕಾಣುವ ಶೋಷಿತರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ನಿರಾತಂಕವಾಗಿ ನಡೆಯುತ್ತಿವೆ. ಇಂತಹ ಸಂದರ್ಭಗಳಲ್ಲಿ ನೋವು ಅನುಭವಿಸುತ್ತಿರುವ ಶೋಷಿತ ವರ್ಗಗಳ ಪರ ಪ್ರಜ್ಞಾವಂತ ವರ್ಗ ಮೌನವಹಿಸದೆ ಧ್ವನಿ ಮಾಡಬೇಕು ಎಂದು ಹಿರಿಯ ಸಾಹಿತಿ ಹಾಗೂ ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಶ್ರೀ. ಸಿದ್ದಲಿಂಗೇಶ್ವರ ಪ್ರಕಾಶನ, ಬೆಂಗಳೂರಿನ ಅನ್ನಪೂರ್ಣ ಪ್ರಕಾಶನ ಇವರ ಸಂಯುಕ್ತಾಶ್ರಯದಲ್ಲಿ ಹರಿಹರ ಸಭಾಂಗಣದಲ್ಲಿ ಪ್ರೊ. ಎಚ್.ಟಿ ಪೋತೆ ಸಂಪಾದಿಸಿದ ‘ಮಲ್ಲಿಕಾರ್ಜುನ ಖರ್ಗೆ ಜೊತೆ ಮಾತುಕತೆ’ ಹಾಗೂ ಡಾ. ಪಿ. ನಾಗರಾಜ ಸಂಪಾದಿಸಿದ ‘ಬಯಲೆಂಬೊ ಬಯಲು ದಮನಿತರ ಶಕ್ತಿ ಕಥನ’ ಗ್ರಂಥಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಅಸ್ಪøಶ್ಯತೆ ಜೀವಂತವಾಗಿದೆ. ರೈತರು, ಶೋಷಿತರು, ದಮನಿತರು ಹಾಗೂ ಮಹಿಳೆಯರು ನಿರ್ಭಯವಾಗಿ ಬದುಕು ಸಾಗಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕನಸು ಕಾಣುವ ದುರ್ಬಲರು ಏನನ್ನೂ ಗಳಿಸದೆ ದೌರ್ಜನ್ಯ ಮತ್ತು ದಬ್ಬಾಳಿಕೆಗೆ ಸಿಲುಕಿದ್ದಾರೆ. ರಾಜಕೀಯ ಬಿಕ್ಕಟ್ಟು ಮತ್ತು ಸಾಂಸ್ಕøತಿಕ ಸಂಘರ್ಷಗಳ ನಡುವೆ ವಿಚಾರವಂತರ ಮೌನವೇಕೆ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನ್ಯಾಯದ ವಿರುದ್ಧ ಪ್ರಶ್ನೆ ಮಾಡುವ ಮೂಲಭೂತ ಹಕ್ಕನ್ನು ಸಂವಿಧಾನ ನೀಡಿದೆ. ಆದರೆ, ಸಮಕಾಲೀನ ಸಂದರ್ಭದಲ್ಲಿ ಅನ್ಯಾಯ ಮತ್ತು ದಬ್ಬಾಳಿಕೆ ತಡೆಯಲು ಪ್ರಜ್ಞಾವಂತ ವರ್ಗ ಪ್ರತಿಕ್ರಿಯಿಸಬೇಕಿದೆ. ದುರ್ಬಲ ವರ್ಗದ ಬಗೆ ಸೂಕ್ಷ್ಮ ಸಂವೇದನೆಯಿಂದ ಸ್ಪಂದಿಸಿದರೆ ಮಾತ್ರ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಆಶಯಗಳಿಗೆ ಮೌಲ್ಯ ಹೆಚ್ಚುತ್ತದೆ ಎಂದರು.
ಪ್ರತಿಯೊಬ್ಬ ವ್ಯಕ್ತಿ ಶಿಕ್ಷಣದಿಂದ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂಬುದಕ್ಕೆ ಡಾ. ಬಿ. ಆರ್. ಅಂಬೇಡ್ಕರ್ ಅವರು ನಿದರ್ಶನವಾಗಿದ್ದಾರೆ. ಪ್ರಚಲಿತ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕøತಿಕ ಬಿಕ್ಕಟ್ಟುಗಳ ಗ್ರಹಿಸಿಕೊಂಡು ಸಂಘಟಿತ ಹೋರಾಟ ಅಗತ್ಯವಿದೆ. ದೇಶದ ಕೃಷಿಕರು, ರೈತರು, ದಮನಿತರು, ಶೋಷಿತರ ನೋವು ಮತ್ತು ನಲಿವುಗಳಿಗೆ ಸಾಮುದಾಯಿಕ ಬೆಂಬಲ ಅಗತ್ಯವಿದೆ ಎಂದು ಹೇಳಿದರು.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯದಂತೆ ಅಸ್ಪøಶ್ಯರು, ದಮನಿತರು, ಶೋಷಿತರು ಹಾಗೂ ಮಹಿಳೆಯರು ನೆಮ್ಮದಿಯಿಂದ ಬದುಕು ನಡೆಸುವುದು ಕಷ್ಠವಾಗಿದೆ. ತಳಸಮುದಾಯಗಳ ರಕ್ಷಣೆಗೆ ಕಾನೂನುಗಳಿದ್ದರು ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಯುತ್ತಿದೆ. ರಾಜಕೀಯವನ್ನು ದುರ್ಬಳಕೆ ಮಾಡಿಕೊಂಡು ಉದ್ಯಮ ಮಾಡಿಕೊಳ್ಳುತ್ತಿರವ ಸಂದರ್ಭದಲ್ಲಿ ರೈತರು, ಕೃಷಿಕರು ಮತ್ತು ಮಹಿಳೆಯರು ಬಗೆ ಪ್ರಜ್ಞಾವಂತಿಕೆ ತೋರದಿದ್ದರೆ ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವವರು ಯಾರು? ಸೂಕ್ಷ್ಮ ಸಂವೇದನೆ ಮತ್ತು ಸ್ಪಂದನೆ ಕೆಳೆದುಕೊಳ್ಳದೇ ಬುದ್ದಿವಂತರು ಪ್ರಶ್ನಿಸಿದರೆ ಮಾತ್ರ ಸಂವಿಧಾನದ ಆಶಯ ಮತ್ತು ಮೌಲ್ಯ ಉಳಿಯುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವನ್ನು ರಕ್ಷಿಸಲು ಸಂಘಟಿತ ಹೋರಾಟ ಮಾಡದಿದ್ದರೆ ಕಾನೂನು ಕೂಡ ನಮ್ಮನ್ನು ರಕ್ಷಿಸದು ಎಂದರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಡಾ. ಪಿ. ನಾಗರಾಜ ಮಾತನಾಡಿ ಬಯಲೆಂಬೊ ಬಯಲು ದಮನಿತರ ಶಕ್ತಿ ಕಥನ ಕೃತಿಯಲ್ಲಿ ಜೀವಪರ ಮತ್ತು ಜೀವನಪ್ರಿಯ ಕಥೆಗಳಿವೆ. ದಲಿತ ಸಂವೇದನೆ ಚಿಂತನೆಯನ್ನು ಪ್ರತಿ ಕಥೆಯು ಒತ್ತಿ ಹೇಳುತ್ತವೆ. ಶೋಷಿತರು ಮತ್ತು ದಮನಿತರ ವರ್ತಮಾನದ ಬದುಕನ್ನು ಕಥೆಗಳಲ್ಲಿ ಟಡಗಿದೆ. ದಲಿತರ ಜೀವನ ತಲ್ಲಣ ಮತ್ತು ಸಂಗತಿಗಳನ್ನು ಬಿಂಬಿಸುತ್ತವೆ ಎಂದರು.
ಸಿದ್ದಲಿಂಗೇಶ್ವರ ಪ್ರಕಾಶನದ ಸಿದ್ದಲಿಂಗ ಕೊನೇಕ ಮಾತನಾಡಿ ಸಿದ್ದಲಿಂಗೇಶ್ವರ ಪ್ರಕಾಶನದಿಂದ ಇದುವರೆಗೂ 3500 ಕೃತಿಗಳನ್ನು ಮುದ್ರಿಸಲಾಗಿದೆ. ಆದರೆ ಓದುವ ವಿದ್ಯಾರ್ಥಿ ಸಮೂಹ ಸಂಖ್ಯೆ ಕ್ಷೀಣಿಸುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಬರೆಯುವ ಮತ್ತು ಓದುವ ವರ್ಗವನ್ನು ಬೆಳೆಸಬೇಕು ಮತ್ತು ಯುವ ಲೇಖಕರು ಮುನ್ನೆಲೆಗೆ ಬರಬೇಕಾದರೆ ಓದುವ ಸಂಸ್ಕøತಿ ಮತ್ತು ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕಗಳಿಂದ ಮೌಲ್ಯಯುತ ಸಾಹಿತ್ಯ ಹೊರಬರಬೇಕು ಎಂದರು.
ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಹೆಚ್.ಟಿ. ಪೋತೆ ಮಾತನಾಡಿ ಒಂದು ಕೃತಿಗೆ ಪ್ರತಿಕ್ರಿಯೆಗಳು ಬಂದಾಗ ಅತ್ಯುತ್ತಮ ಕೃತಿ ರೂಪ ಪಡೆಯುತ್ತದೆ. ಬುದ್ಧ, ಬಸವ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಡಾ. ಮಲ್ಲಿಕಾರ್ಜನ ಖರ್ಗೆಯವರ ಜೀವನದ ಮೇಲೆ ಪ್ರಭಾವ ಬೀರಿವೆ. ರಾಜಕೀಯ 40 ದಶಕಗಳ ಅವರ ರಾಜಕೀಯ ಜೀವನದಲ್ಲಿ ಶೋಷಿತರ, ತಳಸಮುದಾಯ ಮತ್ತು ಮಹಿಳೆಯರ ಬದುಕಿನ ಸುಧಾರಣೆಗೆ ಶ್ರಮಿಸಿದ್ದಾರೆ. ಸಮಕಾಲೀನ ಸಮಸ್ಯೆಗಳಿಗೆ ಸೂಕ್ಷ್ಮವಾಗಿ ಧ್ವನಿ ಮಾಡುವ ಡಾ. ಮಲ್ಲಿಕಾರ್ಜುನ ಖರ್ಗೆ ಅವರಂತೆ ಸತ್ಯದ ಪರ ಮಾತನಾಡುವವರು ವಿರಳವಾಗಿದ್ದಾರೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಘಟನೆಗಳನ್ನು ಪ್ರಶ್ನಿಸುವ ಮನಸ್ಥಿತಿಯಿಲ್ಲವಾಗಿದೆ. ಕೊಪ್ಪಳದಲ್ಲಿ ದಲಿತ ಯುವಕನಿಗೆ ಕೌರ ಮಾಡಲು ಹೇಳಿದಕ್ಕೆ ಕೊಲೆ ಆಗಿದೆ. ಮಾನವೀಯತೆ ಕಾಣದ ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಕೇಳುವ ಜನರು ಕೇಳದೆ ಮೌನವಾಗಿರುವುದು ನಾಗರೀಕ ಸಮಾಜದ ಲಕ್ಷಣವಲ್ಲ ಎಂದರು.
ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅಧ್ಯಕ್ಷತೆವಹಿಸಿ ಮಾತನಾಡಿ ಪ್ರೊ. ಹೆಚ್. ಟಿ. ಪೋತೆ ಮತ್ತು ಡಾ. ಪಿ ನಾಗರಾಜ ಅವರು ಸಂಪಾದಿಸಿರುವ ಕಥೆಗಳಲ್ಲಿ ದೇಶದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕøತಿಕ ಸತ್ಯ ಸಂಗತಿಗಳು ಎಳೆಎಳೆಯಾಗಿ ಬಿತ್ತರವಾಗುತ್ತವೆ. ಒಬ್ಬ ಲೇಖಕ ತಾನು ಬರೆದು ತನ್ನೊಂದಿಗಿರುವವರನ್ನು ಬರಹಗಾರನನ್ನಾಗಿ ಬೆಳೆಸಿರುವ ಪರಿದಿಯಲ್ಲೊ ಪೋತೆಯವರು ಪರಿಶ್ರಮ ನಿಜಕ್ಕೂ ಮೆಚ್ಚಬೇಕು. ಜನಪದ, ಶಾಶ್ತ್ರ ಮತ್ತು ತೌಲನಿಕ ಅಧ್ಯಯನ ವಿಸ್ತರಣೆ ಜೊತೆಗೆ ಉತ್ತಮ ಕಥೆಗಾರ, ಕವಿ, ಕಾದಂಬರಿಕಾರ, ಕಾವ್ಯ, ವಚನ, ನಾಟಕ, ಬೌದ್ದ ಸಂಪುಟ ಹೀಗೆ ಹತ್ತಾರು ಸಾಹಿತ್ಯ ರಚನೆಯಲ್ಲೂ ಮೇಲುಗೈ ಸಾಧಿಸಿರುವ ಅಪ್ರತಿಮ ಚಿಂತಕ. ಇದೆಲ್ಲ ಸಾಧ್ಯವಾಗಿರುವುದು ಅವರ ದೂರದೃಷ್ಠಿ ಚಿಂತನೆ ಮತ್ತು ಅಧ್ಯಯನದಿಂದ ಸಾಧ್ಯವಾಗಿದೆ. ಪುಸ್ತಕ ಖರೀದಿಸುವ ಮತ್ತು ಓದುವ ಸಂಸ್ಕøತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡರೆ ಉತ್ತಮ ವ್ಯಕ್ತಿತ್ವ ಬೆಳೆಯುತ್ತದೆ ಎಂದರು. ಕಾರ್ಯಕ್ರಮದಲ್ಲಿ ಅನ್ನಪೂರ್ಣ ಪಬ್ಲಿಷಿಂಗ್ ಹೌಸ್‍ನ ಸುರೇಶ್ ಉಪಸ್ಥಿತರಿದ್ದರು.
ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಸಹಾಯಕ ಅಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಸೇರಿದಂತೆ ಸಾಹಿತ್ಯಾಸಕ್ತರು, ಪ್ರಾಧ್ಯಾಪಕರು ಭಾಗವಹಿಸಿದ್ದರು. ಡಾ. ಪ್ರಕಾಶ್ ಸಂಗಮ ಸ್ವಾಗತಿಸಿಸರು. ಡಾ. ಪ್ರೇಮಾ ಅಪಚಂದ ಕಾರ್ಯಕ್ರಮ ನಿರ್ವಹಿಸಿದರು. ಡಾ. ಶಿವಲೀಲಾ ವಂದಿಸಿದರು. ಕು. ರೇಣುಕಾ ಪ್ರಾರ್ಥಿಸಿದರು.
ಮಲ್ಲಿಕಾರ್ಜು ಖರ್ಗೆ ಮಾತುಕತೆ:
ಪ್ರೊ. ಹೆಚ್. ಟಿ. ಪೋತೆಯವರು ಸಂಪಾದಿಸಿರುವ ಈ ಕೃತಿಯಲ್ಲಿ ದೇಶದ 12 ಜನ ಪತ್ರಕರ್ತರು ನಡೆಸಿರುವ ಅಪರೂಪದ ಸಂದರ್ಶನಗಳನ್ನು ಸಂಪಾದಿಸಿ ಪ್ರಕಟಿಸಲಾಗಿದೆ. ರಾಷ್ಟ್ರ ಮತ್ತು ರಾಜ್ಯದ ಬಗೆಗಿನ ಅವರ ಅಪಾರ ಅಭಿಮಾನ ಮತ್ತು ಗೌರವ ಏನೆಂಬುದು ಅವರ ಸಂದರ್ಶನದಲ್ಲಿ ವ್ಯಕ್ತವಾಗಿದೆ. ದೇಶದ ಅಭಿವೃದ್ದಿಗೆ ಅವರ ಆಲೋಚನೆಗಳು ಪ್ರತಿಬಿಂಬಿತವಾಗಿವೆ. ದೇಶದ ಭವಿಷ್ಯ ಮತ್ತು ಶ್ರೀಸಾಮಾನ್ಯನ ಬದುಕು ಸಂವಿಧಾನದ ಆಶಯದಂತೆ ಬೆಳಗಿಸಿದಾಗ ಪ್ರಜಾಪ್ರಭುತ್ವದ ಕನಸು ಸಾಕಾರಗೊಂಡಂತೆ ಎಂಬುದು ಅವರ ನಿಲುವು. ಒಬ್ಬ ದಲಿತ ದೀಮಂತ ನಾಯಕ ಸುಮಾರು 4 ದಶಕಗಳ ಕಾಲ ಬಡತನವನ್ನು ನುಂಗಿ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿ ನೊಂದ ಸಮುದಾಯಗಳ ಬದುಕಿಗೆ ಆಶಾಕಿರಣದಂತೆ ಪ್ರಜ್ವಲಿಸಿದ್ದಾರೆ. ಸಮಕಾಲೀನ ತಲ್ಲಣಗಳ ಕುರಿತು ಸಂಸತ್‍ನಲ್ಲಿ ಪ್ರಖರವಾಗಿ ಪ್ರಶ್ನಿಸಿದ್ದಾರೆ. ಅವರ ದೇಶದ ಭವಿಷ್ಯದ ದಿಕ್ಕಿನ್ನು ಅಭಿವೃದ್ದಿ ಕಡೆಗೆ ನಡೆಸಲು ಅವರ ವಿಚಾರ ಚಿಂತನೆ, ಪ್ರತಿಕ್ರಿಯೆ, ಸೂಕ್ಷ್ಮ ಸಂವೇದನೆ ನಿಜಕ್ಕೂ ಅವರ ಬದುಕನ್ನು ರಾಷ್ಟ್ರ ಮಟ್ಟದಲ್ಲಿ ಮೇಧಾವಿ ರಾಜಕಾರಣಿಯಾಗಿ ಗುರುತಿಸುವಂತೆ ಮಾಡಿದೆ. ದಲಿತರು, ಶೋಷಿತರು, ಮಹಿಳೆಯರು, ಕಾರ್ಮಿಕರು, ರೈತಾಪಿ ವರ್ಗದ ಬದುಕನ್ನು ಸುಧಾರಿಸಲು ಇಂದಿಗೂ ಶ್ರಮಿಸುತ್ತಿದ್ದಾರೆ.
ಬಯಲೆಂಬೋ ಬಯಲು :
ಬಯಲೆಂಬೋ ಬಯಲು ಕೃತಿಯಲ್ಲಿ ಪ್ರೊ. ಹೆಚ್.ಟಿ. ಪೋತೆಯವರ ಮೂರು ತಲೆಮಾರುಗಳ ಸಂಕಷ್ಟದ ಕಥನಗಳ ವೈಶಿಷ್ಟಯತೆಗಳು ಅನಾವರಣಗೊಂಡಿವೆ. ಪ್ರೊ. ಹೆಚ್.ಟಿ. ಪೋತೆಯವರ ಬಯೋಪಿಕ್ ಕಾದಂಬರಿಯನ್ನು ಅನೇಕ ಲೇಖಕರು ಮತ್ತು ವಿಮರ್ಶಕರೂ ಓದುವ ಮೂಲಕ ಪ್ರತಿಕ್ರಿಯೆಗಳು ಕೃತಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ದಲಿತರ ಸಾಮಾಜಿಕ ಸ್ಥಿತಿ, ಮತ್ತು ಸಾಂಸ್ಕøತಿಕ ಸ್ಥಿತ್ಯಂತರಗಳು ಈ ಕೃತಿಯಲ್ಲಿ ಮೂಡಿವೆ. ನಾಡಿನ ಸೃಜನಶೀಲ ಬರಹಗಾರರ ಪ್ರತಿಕ್ರಿಯೆಯ ಲೇಖನಗಳನ್ನು ಬರೆದಿದ್ದಾರೆ. ಡಾ. ಪಿ. ನಾಗರಾಜ ಅವರು ಅಭಿಪ್ರಾಯಗಳನ್ನು ಸಂಗ್ರಹಿಸಿ ಸಂಪಾದಿಸಿ ಪ್ರಕಟಿಸಿರುವುದು ಮೌಲಿಕವೆನಿಸಿದೆ.