ರಿಯಲ್ ಎಸ್ಟೇಟ್ ಉದ್ಯಮಿ ಬಳಿ ಹಣ ಕಸಿದುಕೊಂಡು ಜೀವ ಬೆದರಿಕೆ: ಯಳಸಂಗಿ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲು
ಕಲಬುರಗಿ,ಆ.30-ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿ 1 ಲಕ್ಷ ರೂಪಾಯಿ ದೋಚಿದ ಆರೋಪದ ಮೇಲೆ ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಸೇರಿ 15-20 ಜನರ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಕರಬಸಪ್ಪ ದೇಶಮುಖ ಎಂಬುವವರು ಸಲ್ಲಿಸಿದ ದೂರಿನ ಮೇರೆಗೆ ಸ್ಟೇಷನ್ ಬಜಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕರಬಸಪ್ಪ ದೇಶಮುಖ ಅವರಿಗೆ ಕಲಬುರಗಿಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಲು ತುಮಕೂರಿನ ಜ್ಯೋತಿ ಎಂಬುವವರು 1.20 ಕೋಟಿ ಹಣ ನೀಡಿದ್ದರು. ಇದರಿಂದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಜ್ಯೋತಿ ಅವರಿಗೆ ಬರಬೇಕಿದ್ದ ಲಾಭದ ಹಣವನ್ನು ದೇಶಮುಖ ಕೊಟ್ಟಿದ್ದಾರೆ. ತನಗೆ ಕೊಡಬೇಕಾಗಿರುವ ಹಣ ಇನ್ನೂ ಬಾಕಿ ಇದೆ ಎಂದು ಜ್ಯೋತಿ ಅವರು ಬೆಂಗಳೂರಿನ ನ್ಯಾಯಾಲಯದಲ್ಲಿ ದೇಶಮುಖ ಮೇಲೆ ಕೇಸು ಹಾಕಿದ್ದಾರೆ. ನ್ಯಾಯಾಲಯದ ಆದೇಶದಂತೆ ಜ್ಯೋತಿ ಅವರಿಗೆ ಬರಬೇಕಿರುವ ಹಣ ಮರಳಿ ನೀಡುವುದಾಗಿ ದೇಶಮುಖ ಒಪ್ಪಿಕೊಂಡಿದ್ದಾರೆ. ಆದರೆ ಜ್ಯೋತಿ ಅವರು ತುಮಕೂರಿನಿಂದ ಕಲಬುರಗಿಗೆ ಆಗಮಿಸಿ ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಅವರನ್ನು ಭೇಟಿ ಮಾಡಿ ಈ ವಿಷಯವನ್ನು ಅವರಿಗೆ ತಿಳಿಸಿದ್ದಾರೆ. ಈ ವಿಷಯ ಮುಂದೆ ಮಾಡಿಕೊಂಡು ಹಣಮಂತ ಯಳಸಂಗಿ, ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ, ಶ್ರೀಕಾಂತ ರಡ್ಡಿ, ಅರವಿಂದ ಕಮಲಾಪೂರ, ರಾಜು ಲೇಂಗಟಿ, ಸಂತೋಷ ಪಾಳಾ ಸೇರಿದಂತೆ 15-20 ಜನ ಖೂಬಾ ಪ್ಲಾಟ್‍ನಲ್ಲಿರುವ ದೇಶಮುಖ ಅವರ ರಿಯಲ್ ಎಸ್ಟೇಟ್ ಕಚೇರಿಗೆ ಹೋಗಿ ಅವರಿಗೆ ಅವಾಜ್ ಹಾಕಿದ್ದಾರೆ. ಈ ವೇಳೆ ಅರವಿಂದ ಕಮಲಾಪೂರ ಪಿಸ್ತೂಲ್ ಹೊರತೆಗೆದು ದೇಶಮುಖ ಅವರ ತಲೆಗೆ ಇಟ್ಟು ಶೂಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ನಂತರ ದೇಶಮುಖ ಅವರನ್ನು ಇನ್ನೋವಾ ಕ್ರಿಸ್ಟಾ ಮತ್ತು ಕಿಯೋ ಕರೆನ್ಸಿ ವಾಹನದಲ್ಲಿ ಕೂಡಿ ಹಾಕಿ ಅವರ ಬಳಿ ಇದ್ದ 1 ಲಕ್ಷ ರೂಪಾಯಿಯನ್ನು ಜಬರದಸ್ತಿಯಿಂದ ಕಿತ್ತುಕೊಂಡಿದ್ದಾರೆ. ಆ ನಂತರ ಜ್ಯೋತಿ ತುಮಕೂರ ಅವರಿಗೆ ಕೊಡಬೇಕಾಗಿರುವ ಹಣ ಕೊಡದೇ ಹೋದರೆ ನಾಳೆ ಮತ್ತೆ ಬರುತ್ತೇವೆ ಎಂದು ಹೇಳಿ ಧಮಕಿ ಹಾಕಿ ಹೋಗಿದ್ದಾರೆ ಎಂದು ದೇಶಮುಖ ದೂರಿನಲ್ಲಿ ತಿಳಿಸಿದ್ದಾರೆ.
ದೇಶಮುಖ ಅವರ ದೂರಿನ ಅನ್ವಯ ಜ್ಯೋತಿ ತುಮಕೂರ, ಹಣಮಂತ ಯಳಸಂಗಿ, ಮಂಜುನಾಥ ಭಂಡಾರಿ, ಶ್ರೀಕಾಂತ ರಡ್ಡಿ, ಅರವಿಂದ ಕಮಲಾಪೂರ, ರಾಜು ಲೇಂಗಟಿ, ಸಂತೋಷ ಪಾಳಾ ಸೇರಿದಂತೆ 15-20 ಜನರ ವಿರುದ್ಧ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.