ಅಕ್ರಮವಾಗಿ ಗಾಂಜಾ, ಮದ್ಯ ಮಾರಾಟ: ಮೂವರ ಬಂಧನ
ಕಲಬುರಗಿ,ಆ.30-ನಗರದ ಸಂಗೊಳ್ಳಿ ರಾಯಣ್ಣ ಕ್ರಾಸ್ ಬಳಿಯ ಹಾಳುಬಿದ್ದ ಸರ್ಕಾರಿ ಹಾಸ್ಟೆಲ್ ಒಳಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಬ್ರಹ್ಮಪುರ ಪೊಲೀಸ್ ಠಾಣೆ ಪಿಎಸ್‍ಐ ಯಶೋಧಾ ಕಟಕೆ ಮತ್ತು ಸಿಬ್ಬಂದಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಸುಂದರ ನಗರದ ಅಕ್ಷಯ ಮರತೂರಕರ್ (26) ಮತ್ತು ಅಹ್ಮದ್ ನಗರದ ಸಾಧಿಕ್ ಅನ್ವರ್ (21) ಎಂಬುವವರನ್ನು ಬಂಧಿಸಿ 15 ಸಾವಿರ ರೂ.ಮೌಲ್ಯದ 1520 ಗ್ರಾಂ.ಗಾಂಜಾ ಜಪ್ತಿ ಮಾಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಕಡಣಿ ಗ್ರಾಮದ ಕಿರಾಣಿ ಅಂಗಡಿಯೊಂದರ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಎಸ್‍ಐ ಶಶಿಕುಮಾರ ಮತ್ತು ಸಿಬ್ಬಂದಿ ದಾಳಿ ನಡೆಸಿ ಒಬ್ಬನನ್ನು ಬಂಧಿಸಿದ್ದಾರೆ.
ಕಡಣಿ ಗ್ರಾಮದ ಅನೀಲ ಶಿವಪುತ್ರಪ್ಪ ಕಣ್ಣೂರ (28) ಎಂಬಾತನನ್ನು ಬಂಧಿಸಿ 3,146 ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ.
ಬ್ರಹ್ಮಪುರ ಮತ್ತು ಫರಹತಾಬಾದ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.