ಕ್ರಾಂತಿಕಾರಕ ಬದಲಾವಣೆ ತಂದ 12ನೇ ಶತಮಾನದ ಶರಣರು
ಅಫಜಲಪುರ: ಆ.30:ಸಾಮಾಜಿಕವಾಗಿ ಕ್ರಾಂತಿಕಾರಕ ಬದಲಾವಣೆ ತಂದ 12ನೇ ಶತಮಾನದ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿದರು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕಿ ಡಾ. ಸಾವಿತ್ರಿ ಕೃಷ್ಣಾ ಹೇಳಿದರು.
ಪಟ್ಟಣದ ಸ್ಪೂರ್ತಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಸುತ್ತೂರು ಶಿವರಾತ್ರಿ ರಾಜೇಂದ್ರ ಶ್ರೀಗಳ ಜನ್ಮದಿನದ ನಿಮಿತ್ಯ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಹಾಗೂ ದತ್ತಿ ಕಾರ್ಯಕ್ರಮ ಉದ್ದೇಶಿಸಿ ಅನುಭವ ಮಂಟಪ ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು 12ನೇ ಶತಮಾನದಲ್ಲಿ ಎಲ್ಲಾ ಧರ್ಮದ ಶರಣರು, ತತ್ವಜ್ಞಾನಿಗಳು, ಕವಿಗಳು ಸೇರುತ್ತಿದ್ದ ಧಾರ್ಮಿಕ ಸಂಸತ್ತು ಅನುಭವ ಮಂಟಪ. ಇದರಲ್ಲಿ ಎಲ್ಲಾ ಸಮುದಾಯದ ಹಾಗೂ ಎಲ್ಲಾ ವೃತ್ತಿಯ ಸಾಮಾನ್ಯ ಜನರು ಭಾಗವಹಿಸಿ ತಮ್ಮ ಚರ್ಚೆಗಳನ್ನು ಚರ್ಚಿಸಿ ತಮ್ಮ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದರು. ಹೀಗಾಗಿ ಸಮಾಜದಲ್ಲಿ ಸಮಾನತೆಯ ಸಂದೇಶ ಸಾರಿದ ಬಸವಾದಿ ಪ್ರಮಥರ ತತ್ವ ಸಿದ್ಧಾಂತಗಳನ್ನು ಇಂದಿನ ಯುವ ಸಮುದಾಯ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದುವರಿಯಬೇಕು ಎಂದು ಕರೆ ನೀಡಿದ ಅವರು ಸುತ್ತೂರಿನ ಶಿವರಾತ್ರಿ ರಾಜೇಂದ್ರ ಶ್ರೀಗಳು ಬೆಳೆದು ಬಂದ ಹಾದಿ ಹಾಗೂ ಸಮಾಜಕ್ಕೆ ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಕೊಡುಗೆಗಳನ್ನು ವಿವರಿಸಿದರು.
ತಾಲೂಕಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ಚಾಂದಕವಟೆ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ನೇತೃತ್ವ ತಹಸೀಲ್ದಾರ ಸಂಜೀವಕುಮಾರ ದಾಸರ ಹಾಗೂ ಸ್ಪೂರ್ತಿ ಸಂಸ್ಥೆಯ ಅಧ್ಯಕ್ಷ ಜಿ.ಎಸ್. ಬಾಳಿಕಾಯಿ ಅಧ್ಯಕ್ಷತೆ ವಹಿಸಿಕೊಂಡರು. ಪ್ರಥಮ ದರ್ಜೆ ಗುತ್ತಿಗೆದಾರ ಎಸ್.ವೈ ಪಾಟೀಲ್ ಉದ್ಘಾಟನೆ ನೆರವೇರಿಸಿದರು. ರೈತ ಮುಖಂಡ ಸಿದ್ದಾರಾಮ ದಣ್ಣೂರ ಜ್ಯೋತಿ ಬೆಳಗಿಸಿದರು. ಶರಣರ ಭಾವಚಿತ್ರಗಳಿಗೆ ಹಿರಿಯ ಮುಖಡ ಅವ್ವಣ್ಣ ಮ್ಯಾಕೇರಿ ಹೂಮಾಲೆ ಸಮರ್ಪಿಸಿದರು. ಮುಖ್ಯ ಅತಿಥಿಗಳಾಗಿ ಬೀರಣ್ಣ ಪೂಜಾರಿ, ಮರೆಪ್ಪ ಮುಗಳಿ, ವಿಜಯಕುಮಾರ ಆಗಮಿಸಿದ್ದರು.
ಇದೇ ವೇಳೆ ರಾಜ್ಯ ವಾವ್ ಕರ್ನಾಟಕ ಡಾನ್ಸ್ ರಿಯಾಲಾಟಿ ಶೋಗೆ ಆಯ್ಕೆಯಾದ ವಿದ್ಯಾರ್ಥಿನಿ ಕು. ಮುಸ್ಕಾನ್ ಪಟೇಲ್ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಸ್ಪೂರ್ತಿ ಕಾಲೇಜಿನ ವಿದ್ಯಾರ್ಥಿಗಳು ವಚನ ಪ್ರಾರ್ಥನೆಗೈದರು. ಬಡದಾಳ ಶ.ಸಾ.ಪ ವಲಯಾಧ್ಯಕ್ಷ ಸಿದ್ದು ಶಿವಣಗಿ ಸ್ವಾಗತಿಸಿದರು. ಉಪನ್ಯಾಸಕಿ ಸವಿತಾ ಪಾಟೀಲ ನಿರೂಪಿಸಿದರು. ಶರಣು ಸಮರ್ಪಣೆಯನ್ನು ಶ.ಸಾ.ಪ ಪ್ರಧಾನ ಕಾರ್ಯದರ್ಶಿ ಅಶೋಕ ಹೂಗಾರ ನಡೆಸಿಕೊಟ್ಟರು. ಈ ವೇಳೆ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.