ವಾರ್ಡುಗಳಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿರವಾಳ ಸಂಚಾರ
ಕಲಬುರಗಿ:ಆ.30: ನಗರದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಜನರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಇ-ಟಾಯ್ಲೆಟ್ ಗಳನ್ನು ಕೂಡಲೇ ಸ್ವಚ್ಛಗೊಳಿಸಿ ಜನರಿಗೆ ಉಪಯೋಗಕ್ಕೆ ನೀಡಬೇಕು. ಎಷ್ಟು ವರ್ಷಗಳಿಂದ ಹಾಳು ಸುರಿಯುತ್ತಿವೆ. ಪಾಲಿಕೆ ಸಿಬ್ಬಂದಿ ಏನು ಮಾಡುತ್ತಿದ್ದಿರಿ? ಎಂದು ಪಾಲಿಕೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ್ ಅಧಿಕಾರಿಗಳ ವಿರುದ್ಧ ಗರಂ ಆದ ಘಟನೆ ಗುರುವಾರ ನಡೆದಿದೆ.
ಬೆಳಗ್ಗೆ ವಾರ್ಡ್ ನಂ. 54ರಲ್ಲಿ ಮಿಂಚಿನ ಸಂಚಾರ ಮಾಡಿದ ಅವರು, ಹಲವು ಕಡೆಗಳಲ್ಲಿ ಹಾಳು ಸುರಿಯುತ್ತಿರುವ ಶೌಚಾಲಯಗಳನ್ನು ವೀಕ್ಷಣೆ ಮಾಡಿದ್ದಲ್ಲದೇ, ಮೋಹನ್ ಲಾಡ್ಜ್ ಮುಂಭಾಗದ ಇ-ಟಾಯ್ಲೆಟ್ ಬಂದ್ ಆಗಿದ್ದು, ಪಕ್ಕದಲ್ಲಿಯೇ ಟಿಫಿನ್ ಸೆಂಟರ್ ನಡೆಸಲಾಗುತ್ತಿದೆ. ಇದೆಲ್ಲವೂ ಏನು ಎಂದು ಪ್ರಶ್ನಿಸಿದರು. ಅಲ್ಲದೆ, ಕೂಡಲೇ ಟಾಯ್ಲೆಟ್‍ಗಳನ್ನು ಸ್ವಚ್ಛ ಮಾಡಿಸಿ ನೀರಿನ ವ್ಯವಸ್ಥೆ ಮಾಡಿ, ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
54 ವಾರ್ಡ್ ಹಲವು ಕಡೆಗಳಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಮಳೆಗಾಲವಾಗಿದ್ದರಿಂದ ರಸ್ತೆಯಲ್ಲಿ ಮಕ್ಕಳು, ಹಿರಿಯರು ಓಡಾಡುವಂತಿಲ್ಲ. ಇದರಿಂದಾಗಿ ರೋಗದ ಭೀತಿಯೂ ಇದೆ. ಹೀಗಾಗಿ ಕೂಡಲೇ ಸ್ವಚ್ಛತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಲ್ಲದೇ, ಸಿಬ್ಬಂದಿ ಮತ್ತು ಸ್ಯಾನಿಟರಿ ಇನ್ಸಪೆಕ್ಟರ್‍ಗಳು ಸಂಪರ್ಕ ಇಟ್ಟುಕೊಂಡು ಕೆಲಸ ಮಾಡಬೇಕು. ಇಲ್ಲದಿದ್ದರೇ ನಿರ್ದಾಕ್ಷಿಣ್ಯವಾಗಿ ಕ್ರಮಕ್ಕೆ ಸೂಚಿಸಬೇಕಾಗುತ್ತದೆ ಎಂದರು.
ಪೌರ ಕಾರ್ಮಿಕರ ಕೆಲಸ ವೀಕ್ಷಿಸಿದರು ಹಾಗೂ ನಗರದ ಸಮಸ್ಯೆಗಳ ಕುರಿತು ಅಲ್ಲಿನ ನೈರ್ಮಲ್ಯ ನಿರೀಕ್ಷಕರು, ನೈರ್ಮ ಲೀಕರಣ ಮೇಲ್ವಿಚಾರಕರು ಹಾಗೂ ವೆಹಿಕಲ್ ವಿಭಾಗದವರ ಸಮಸ್ಯೆಗಳನ್ನು ಆಲಿಸಿದರು. ಮಹಾನಗರ ಪಾಲಿಕೆ ಸದಸ್ಯೆ ನಿಂಗಮ್ಮ ಕಟ್ಟಿಮನಿ ಹಾಗೂ ಪಾಲಿಕೆ ಅಧಿಕಾರಿ ಸುಷ್ಮಾ ಬಾಬುರಾವ್ ಹಾಗೂ ಇತರರು ಇದ್ದರು.