ಜಿಲ್ಲಾಧಿಕಾರಿಗಾಗಿ ಜಾತಕ ಪಕ್ಷಿಗಳಂತೆ ಕಾದು ಸುಸ್ತಾಗಿ ಹೋದ ಸರಕಾರಿ ಅಧಿಕಾರಿಗಳು
ಕಾಳಗಿ:ಆ.30: ಕಾಳಗಿಗೆ ಜಿಲ್ಲಾಧಿಕಾರಿ ಫೌಜಿಯಾ ಬಿ. ತರನ್ನುಮ್ ಭೇಟಿ ಹಿನ್ನೆಲೆಯಲ್ಲಿ ಗುರುವಾರ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 09-00ಕ್ಕೆ ಆಗಮಿಸಿರುವ ತಾಲೂಕಿನ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು, ಸರಕಾರಿ-ಅರೆ ಸರಕಾರಿ ಸಿಬ್ಬಂದಿಗಳು ಸಾಯಂಕಾಲ 05-00ಗಂಟೆಯ ವರೆಗೂ ಜಿಲ್ಲಾಧಿಕಾರಿಗಳ ಬರುವಿಕೆಗಾಗಿ ಜಾತಕ ಪಕ್ಷಿಗಳಂತೆ ಕಾದು-ಕಾದು ಸುಸ್ತಾಗಿ ಜಾಗ ಖಾಲಿ ಮಾಡಿರುವ ಪ್ರಸಂಗ ನಡೆಯಿತು.
ಕಲ್ಯಾಣ ಕರ್ನಾಟಕದ ಐತಿಹಾಸಿಕ ತಾಣ “ದಕ್ಷಿಣ ಕಾಶಿ” ಸುಕ್ಷೇತ್ರ ಕಾಳಗಿ ಪಟ್ಟಣದ ಶ್ರೀನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ಫೌಜಿಯಾ ಬಿ. ತರನ್ನುಮ್ ಅವರು, ದಿನಾಂಕ:29-08-2024ರ ಗುರುವಾರ ಬೆಳಿಗ್ಗೆ 11-00ಕ್ಕೆ ಆಗಮಿಸಲಿದ್ದಾರೆ ಎಂದು ಗ್ರೇಡ್ -1 ತಹಸೀಲ್ದಾರ್ ಘಮವತಿ ರಾಠೋಡ ತಿಳಿಸಿದ್ದರು.
ಜಿಲ್ಲೆಯ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದ ಕಾಳಗಿ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನ, ನರಸಿಂಹ ಮಂದಿರ, ಸೂರ್ಯನಾರಾಯಣ ದೇಗುಲ, ನೈಸರ್ಗಿಕವಾಗಿ ಪುಟಿದೇಳುವ ಜಲಧಾರೆಗಳ ಮಧ್ಯದಲ್ಲಿರುವ ಅನಂತ ಪದ್ಮನಾಭ ದೇಗುಲಗಳು ಸೇರಿ ನಾಗಾವಿ, ಸುನ್ನತಿ, ಮಲಖೇಡ, ಶಹಾಬಾದ್, ಫಿರೋಜಾಬಾದ, ಹಂಪಾಪುರ, ಕನಗನಹಳ್ಳಿ ಅದ್ಭುತ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದ್ದು, ಇವುಗಳನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಪಡಿಸುವ ಗೋಸ್ಕರ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರು, ಇತ್ತಿಚೆಗೆ ಬೆಂಗಳೂರು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ವಿಶೇಷ ಸಭೆಯನ್ನು ತೆಗೆದುಕೊಂಡಿರುವ
ಹಿನ್ನೆಲೆಯಲ್ಲಿ ಕಾಳಗಿ ಪಟ್ಟಣದ ಸ್ಮಾರಕಗಳನ್ನು ಜಿಲ್ಲಾಧಿಕಾರಿಗಳು ವೀಕ್ಷಣೆ ಮಾಡಲಿದ್ದಾರೆಂಬ ವಿಷಯ ಪ್ರಸ್ತಾಪಿಸಿ, ಪ್ರಥಮವಾಗಿ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸುವರು. ನಂತರ ಶ್ರೀನೀಲಕಂಠ ಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿವಿಧ ಸ್ಮಾರಕಗಳನ್ನು ವೀಕ್ಷಣೆ ಮಾಡುವರು. ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ವಸತಿ ನಿಲಯಗಳು, ಅಂಗನವಾಡಿ ಕೇಂದ್ರ-2, ತಹಸೀಲ್ ಕಾರ್ಯಾಲಯ, ಸರಕಾರಿ ಪ್ರೌಢ ಶಾಲೆ, ಸೂಗೂರ(ಕೆ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉತ್ತರ ಕರ್ನಾಟಕದ ತಿರುಪತಿ ಎಂದೇ ಸುಪ್ರಸಿದ್ಧಿ ಪಡೆದ ಶ್ರೀ ವೆಂಕಟೇಶ್ವರ ದೇವಾಲಯಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆಂಬ ವಿಷಯಕ್ಕಾಗಿ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ತಹಸಿಲ್ದಾರ್ ಆಹ್ವಾನ ನೀಡಿದ್ದರು.
ಸೊಳ್ಳೆ ಕಡಿತಕ್ಕೆ ಸುಸ್ತಾದ ಅಧಿಕಾರಿಗಳು:
ಬೆಳಿಗ್ಗೆ 09-00 ರಿಂದಲೇ ಪ್ರವಾಸಿ ಮಂದಿರದಲ್ಲಿ ಕಾದು ಕುಳಿತ ಅಧೀಕಾರಿಗಳಿಗೆ ಕಾಳಗಿ ತಹಸೀಲ್ದಾರ ಅವರು, 02-00ಗಂಟೆಗೆ ಜಿಲ್ಲಾಧಿಕಾರಿಗಳು ಬರುತ್ತಾರೆಂದು ಸಂದೇಶ ನೀಡಿದರು.
ತಮ್ಮ ಇಲಾಖೆಗಳ ಕಡೆಗೆ ಮುಖವೇ ಮಾಡದಿರುವ ಕೆಲ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಬರುವ ಹಿನ್ನೆಲೆಯಲ್ಲಿ, ಗುರುವಾರ ಬಂದು ತಮ್ಮ ಇಲಾಖೆಗಳ ಆಗುಹೋಗುಗಳ ಕಡೆಗೆ ಗಮನ ಹರಿಸಿದರು.
ಪಟ್ಟಣ ಪಂಚಾಯಿತಿ ಮೊಸರನ್ನಕ್ಕೆ ಮಲಗಿದ ಅಧಿಕಾರಿಗಳು:
ಜಿಲ್ಲಾಧಿಕಾರಿಗಳ ಬರುವಿಕೆಗೆ ಕಾದು ಕುಳಿತ ಅಧೀಕಾರಿಗಳ ಉಪಹಾರಕ್ಕಾಗಿ ಸ್ಥಳೀಯ ಪಟ್ಟಣ ಪಂಚಾಯಿತಿ ಅವರು, ಮೊಸರನ್ನ ವ್ಯವಸ್ಥೆ ಮಾಡಿಸಿದ್ದರು.
ಊಟದ ನಂತರವು ಹಾಗೆ ಕುಳಿತುಕೊಂಡ ಕೆಲ ಅಧೀಕಾರಿಗಳು ನಿದ್ರೆಗೆ ಜಾರಿದರೆ ಇನ್ನೂ ಕೆಲ ಜನರು, ಅಂಗಡಿ, ಹೋಟೆಲ್, ಪ್ರವಾಸಿ ಮಂದಿರದ ಮರದ ಕೆಳಗೆ ಕಾದು ಕುಳಿತುಕೊಂಡರು.
ತಹಸಿಲ್ದಾರ್ ಘಮವತಿ ರಾಠೋಡ ಅವರು, ಜಿಲ್ಲಾಧಿಕಾರಿಗಳಿಗೆ ರಿಸೀವ್ ಮಾಡಿಕೊಳ್ಳಲು ಮಾಡಬೂಳಕ್ಕೆ ತೆರಳಿದರು.
ಸಂಜೆ ಐದು ಗಂಟೆ ನಂತರ ಜಿಲ್ಲಾಧಿಕಾರಿಗಳು ಬರುವುದಿಲ್ಲವೆಂಬ ಸಂದೇಶ ತಹಸಿಲ್ದಾರ್ ರಿಂದ ಬರುತ್ತಿದ್ದಂತೆ, ನಿಟ್ಟುಸಿರು ಬಿಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳು ತತ್ ಕ್ಷಣದಲ್ಲಿ ಜಾಗ ಖಾಲಿ ಮಾಡಿದರು.