ಮಕ್ಕಳು ಮೊಬೈಲ್‍ನಿಂದ ಹೊರ ಬರಬೇಕು : ಡಿ.ವಿ. ನಾಯ್ಕೋಡಿ
ವಿಜಯಪುರ,ಆ.30: ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡರೆ ಅವರ ಅಭಿವೃದ್ಧಿಯಾಗಲು ಸಾಧ್ಯ. ಮಕ್ಕಳು ಸದಾ ನಿರಂತರ ಚಟುವಟಿಕೆಯಲ್ಲಿ ತೊಡಗಬೇಕು ಎಂದು ಸಿ.ಆರ್.ಪಿ ಡಿ.ವಿ. ನಾಯ್ಕೋಡಿ ಹೇಳಿದರು.
ಶ್ರೀ ಗೊಲ್ಲಾಳೇಶ್ವರ ಪಬ್ಲಿಕ್ ಸ್ಕೂಲ್‍ನಲ್ಲಿ ಅಲಿಯಾಬಾದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಹಮ್ಮಿಕೊಂಡ ಸಂದರ್ಭದಲ್ಲಿ ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಕ್ಕಳು ಓದಿನತ್ತ ಸಾಗಬೆಕು. ಇತ್ತೀಚಿನ ದಿನದಲ್ಲಿ ಮಕ್ಕಳು ಮೊಬೈಲ್‍ಗೆ ಅಂಟಿಕೊಂಡು ವಿವಿಧ ಸ್ಫರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಮೊಬೈಲ್‍ನ್ನು ತೊರೆದು ಓದಿನತ್ತ ಸಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರೌಢಶಾಲಾ ಮುಖ್ಯ ಗುರುಗಳಾದ ಸುರೇಶ ಆನಂದಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಮಕ್ಕಳ ಪ್ರತಿಭೆಯನ್ನು ಹೊರ ಹೊಮ್ಮುವಂತೆ ಮಾಡುವುದೇ ನಿಜವಾದ ಶಿಕ್ಷಣ ಎಂದು ಬಣ್ಣ್ನಿಸಿದರು.
ಮೀನಾಕ್ಷಿ ಪಾಟೀಲ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರಗೆಳೆದು ಪೋಷಿಸಲು ಇಂಥ ಕಾರ್ಯಕ್ರಮ ಸೂಕ್ತ ವೇದಿಕೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಪ್ರಗತಿ ಸಾಧಿಸಲು ಸಾಧ್ಯವಾಗುತ್ತz ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವರಾಜ ಪಾಟೀಲ ಅವರು ನಿರ್ಣಾಯಕರು ನಿಷ್ಪಕ್ಷತವಾಗಿ ಕಾರ್ಯ ನಿರ್ವಹಿಸಿ ಸೂಕ್ತ ಮಕ್ಕಳ ಪ್ರತಿಭೆಯನ್ನು ಗುರುತಿಸಬೇಕು. ಅಂದಾಗ ಮಾತ್ರ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಕ್ಕಳನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಜವಾಬ್ದಾರಿ ಹೊತ್ತ ಪಾಲಕರ ಪ್ರತಿನಿಧಿಗಳಾದ ಮಲ್ಲೇಶ ರಜಪೂತ, ದುಂಡಪ್ಪ ಕುಮಟಗಿ, ವಿನೋದ ಬಬಲೇಶ್ವರ ಅವರನ್ನು ಸನ್ಮಾನಿಸಲಾಯಿತು.
ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಕಾಶಿನಾಥ ಹಗರಟಗಿ ಸ್ವಾಗತಿಸಿದರು. ಸವಿತಾ ಪಾಟೀಲ ವಂದಿಸಿದರು. ಸುನೀಲ ನಾಗಠಾಣ ನಿರೂಪಿಸಿದರು.