ವಿಜಯಪುರ ಕೃಷಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ
ವಿಜಯಪುರ,ಆ.30; ನಗರ ಹೊರ ವಲಯದ ಕೃಷಿ ಮಹಾವಿದ್ಯಾಲಯದಲ್ಲಿ ಬುಧವಾರ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾಧಿಕಾರಿಗಳು ಹಾಗೂ ಆವರಣದ ಮುಖ್ಯಸ್ಥÀ ಡಾ. ಎ. ಭೀಮಪ್ಪ ಅವರು ಮೇಜರ್ ಧ್ಯಾನಚಂದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಎಲ್ಲರಿಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್ ಅವರು ಮಾತನಾಡಿ, ವ್ಯಕ್ತಿತ್ವ ವಿಕಸನದಲ್ಲಿ ಕ್ರೀಡೆಯ ಮಹತ್ವವನ್ನು ಅರಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಹ ವಿಸ್ತರಣಾ ನಿರ್ದೇಶಕÀ ಡಾ. ರವೀಂದ್ರ ಬೆಳ್ಳಿ ಅವರು, ಮೇಜರ್ ಧ್ಯಾನಚಂದ್ ಅವರ ಜನ್ಮದಿನದ ಅಂಗವಾಗಿ ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಸಾವಿತ್ರಿ. ಪಾಟೀಲ ಅವರು, ಮೇಜರ್ ಧ್ಯಾನಚಂದ್ ಅವರ ಕ್ರೀಡಾ ಸಾಧನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, 29 ನೇ ಆಗಸ್ಟ್ 1905 ರಲ್ಲಿ ಅಲಹಾಬಾದ್‍ನಲ್ಲಿ ಜನಿಸಿದ ಮೇಜರ್ ಧ್ಯಾನಚಂದ್ ಅವರು ಭಾರತೀಯ ಸೇನೆಯಲ್ಲಿ ಮೇಜರ್ ಹುದ್ದೆಯಲ್ಲಿದ್ದುಕೊಂಡು ಕ್ರೀಡೆಯಲ್ಲಿ ಭಾಗವಹಿಸಿ 1928 ರಿಂದ 1964 ರವರೆಗೆ ಹಾಕಿ ಕ್ರೀಡೆಯಲ್ಲಿ ಒಲಿಂಪಿಕ್ಸ್ ನಲ್ಲಿ ಸತತವಾಗಿ 8 ಚಿನ್ನದ ಪದಕಗಳನ್ನು ಭಾರತಕ್ಕೆ ತಂದು ಕೊಟ್ಟ ಮಹಾನ್ ಕ್ರೀಡಾಪಟು. ಜರ್ಮನಿಯ ಹಿಟ್ಲರ್‍ನು ಇವರ ಆಟವನ್ನು ಕಂಡು ಬೆರಗಾಗಿ ಇವರಿಗೆ ಜರ್ಮನಿಯ ಸೇನೆಯಲ್ಲಿ ಅತ್ಯುನ್ನತ ಹುದ್ದೆ ನೀಡಲು ಆಹ್ವಾನಿಸುತ್ತಾರೆ. ಆದರೆ, ನನ್ನ ಪ್ರಾಣ ಮತ್ತು ನನ್ನ ಕ್ರೀಡೆ ಕೇವಲ ಭಾರತಕ್ಕೆ ಮಾತ್ರ ಮೀಸಲು ಎಂದ ಧ್ಯಾನ್ ಚಂದ್ ಅವರು ಅವರ ಆಹ್ವಾನವನ್ನು ಒಪ್ಪಿಕೊಳ್ಳುವುದಿಲ್ಲ. ಇವರು ಹಾಕಿ ಆಟದಲ್ಲಿ ಗೋಲುಗಳ ಸುರಿಮಳೆಯನ್ನೇ ಸುರಿಸುತ್ತಿದ್ದರು. ಇವರ ಕ್ರೀಡಾ ಪ್ರತಿಭೆಯನ್ನು ಹೊಗಳಿ ಇವರಿಗೆ “ಹಾಕಿ ಮಾಂತ್ರಿಕ” ಎಂದು ಬಿರುದನ್ನು ನೀಡಿ ಅಭಿನಂದಿಸಿದರು. ಅಂದಿನಿಂದ ಇಂದಿನವರೆಗೂ ಹಾಕಿ ಕ್ರೀಡೆಗೆ ಮತ್ತು ಕ್ರೀಡಾಪಟುಗಳಿಗೆ ಇವರೇ ಒಂದು ಸ್ಪೂರ್ತಿ. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಸಲಹೆಗಾರ ಡಾ. ಎನ್. ಡಿ. ಸುನೀತಾ, ಡಾ. ಕಾಶಿಬಾಯಿ ಖ್ಯಾಡಗಿ, ಡಾ. ಕಿರಣಕುಮಾರ, ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.