ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಯತ್ನ: ಸಿಎಂ

ಹುಬ್ಬಳ್ಳಿ, ಆ 30: ಮುಡಾ ಹಗರಣದಲ್ಲಿ ತಾವು ತಪ್ಪೇ ಮಾಡಿಲ್ಲ. ಆದರೂ ಬಿಜೆಪಿ-ಜೆಡಿಎಸ್ ತಮ್ಮನ್ನು ಟಾರ್ಗೆಟ್ ಮಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನದಲ್ಲಿ ತೊಡಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದರು.
ಹಾವೇರಿಗೆ ತೆರಳುವ ಮುನ್ನ ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧ ತನಿಖೆ ನಡೆದು ಚಾರ್ಜ್‍ಶೀಟ್ ಸಲ್ಲಿಕೆಯಾದರೂ ಪ್ರಾಸಿಕ್ಯೂಶನ್‍ಗೆ ಅನುಮತಿ ಕೊಟ್ಟಿಲ್ಲ. ಹೀಗಾಗಿ ನಾಳೆ ರಾಜ್ಯಪಾಲರನ್ನು ಭೇಟಿ ಮಾಡಲಿರುವ ನಮ್ಮ ಶಾಸಕರು, ಸಂಸದರು, ಎಂ.ಎಲ್.ಸಿ ಗಳು, ಕುಮಾರಸ್ವಾಮಿ, ನಿರಾಣಿ, ಜನಾರ್ಧನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಶನ್‍ಗೆ ಒತ್ತಾಯ ಮಾಡಲಿದ್ದಾರೆ ಎಂದು ತಿಳಿಸಿದರು.
ವಿಜಯೇಂದ್ರ ಕೇಳಿದೊಡನೆ ನಾನು ರಾಜೀನಾಮೆ ಕೊಡಬೇಕೇ? ಎಂದು ಪ್ರಶ್ನಿಸಿದ ಅವರು, ವಿಜಯೇಂದ್ರ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನಾನು ಹೇಳಿದರೆ ಅವರು ಕೊಡುತ್ತಾರಾ? ಎಂದು ತಿರುಗೇಟು ನೀಡಿದರು.
ಮುಡಾ ಹಗರಣದ ಕುರಿತು ನಾಳೆ ವಿಚಾರಣೆ ಇದೆ. ಅದು ಮುಗಿಯಲಿ ನೋಡೋಣ ಎಂದ ಅವರು, ಸದ್ಯ ರಾಷ್ಟ್ರಪತಿಗಳನ್ನು ಭೇಟಿಯಾಗುವ ವಿಚಾರವಿಲ್ಲ ಎಂದು ತಿಳಿಸಿದರು.
ಬಿಜೆಪಿಯವರು ಎಂದೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕವೇ ಅಧಿಕಾರಕ್ಕೆ ಬಂದಿದ್ದಾರೆ. ಮತ್ತೆ ಅದನ್ನು ಮಾಡುವ ಯತ್ನಗಳನ್ನು ನಡೆಸಿದ್ದಾರೆ. ಶಾಸಕರಿಗೆ ನೂರು ಕೋಟಿ ರೂ. ಆಫರ್ ಮಾಡಿರುವ ಕುರಿತು ರವಿ ಗಣಿಗ ನನ್ನ ಮುಂದೆ ಸಹ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ನಟ ದರ್ಶನ್‍ಗೆ ಜೈಲಿನಲ್ಲಿ ರಾಜಾತಿಥ್ಯ ವಿಚಾರ ಕುರಿತಂತೆ ಪ್ರತಿಕ್ರಿಯಿಸುತ್ತ, ವಿಷಯ ತಿಳಿದ ತಕ್ಷಣ 9 ಜನರನ್ನು ಅಮಾನತು ಮಾಡಿದ್ದೇವೆ. ದರ್ಶನ್ ಸೇರಿ ಕೆಲವರನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರ ಮಾಡಿದ್ದೇವೆ. ಡಿಜಿಗೂ ನೋಟೀಸ್ ಕೊಟ್ಟಿದ್ದೇವೆ ಎಂದು ಅವರು ಹೇಳಿದರು.