ಕಾಳಗಿ ದವಾಖಾನಿ ಉಪ್ಪರ್ ಶೇರ್ವಾನಿ ಅಂದರ್ ಪರೇಶಾನಿ
(ಶರಣಗೌಡ ಭಂಟನಳ್ಳಿ )
ಕಾಳಗಿ:ಆ.30: ತಾಲೂಕು ಕೇಂದ್ರವಾಗಿರುವ ಕಾಳಗಿ ಪಟ್ಟಣದಲ್ಲಿರುವ ಸಮೂದಾಯ ಆರೋಗ್ಯ ಕೇಂದ್ರವು ಹೊರಗಡೆ ನೋಡುಗರಿಗೆ ಸುಂದರವಾದ ಕಟ್ಟಡ, ಕಟ್ಟಡಕ್ಕೆ ತಕ್ಕಂತೆ ಅಲಂಕೃತವಾಗಿ ಕಾಣಿಸಲು ಬಣ್ಣ-ಬಣ್ಣದ ಲೈಟ್ ಗಳು, ಗಿಡ-ಮರ ಬಳ್ಳಿಗಳು ಹಾಗೂ ಉತ್ತಮ ಆಡಳಿತ ವೈದ್ಯಾಧಿಕಾರಿಯೂ ಇದ್ದಾರೆ. ದುರ್ದೈವ ಎಂದರೆ ಸುತ್ತ -ಮುತ್ತಲಿನ ಸುಮಾರು 77 ಗ್ರಾಮಗಳಿಂದ ನೂರಾರು ಕಾಯಿಲೆಹೊತ್ತು, ಬಳಲಿ ಬರುವ ಬಡ ರೋಗಿಗಳಿಗೆ ಈ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಇಲ್ಲದೆ ನರಳಾಡುತ್ತಾ, ನರಕಯಾತನೆ ಅನುಭವಿಸಿ, ಹಿಡಿಶಾಪ ಹಾಕಿ ಹೋಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಕನಿಷ್ಠ 100 ಹಾಸಿಗೆಯ ಅವಶ್ಯಕತೆಯಿದ್ದು, ಕೇವಲ 30ಹಾಸಿಗೆಗೂ ಕೂಡಾ ಸರಿಯಾದ ಅನುಕೂಲವಿಲ್ಲದ ಈ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಕೆಟ್ಟು ಹೋಗಿರುವ ಶೌಚಾಲಯಗಳು, ಸೊಳ್ಳೆಗಳಿಂದ ಕೂಡಿರುವ ಬೆಡ್ ಗಳು, ಗಬ್ಬುನಾರುತ್ತಿರುವ ಬೆಡ್ ಸಿಟ್ ಗಳಿಂದ ಕೂಡಿದ್ದು, ಬಳಲಿ ಬರುವ ಬಡರೋಗಿಗಳಿಗೆ ಇಲ್ಲಿನ ಕೆಲಸಗಾರರಿಂದ ಬರಿ ಬೈಗುಳವೇ ತಿನ್ನಬೇಕು ಹೊರತು, ಚಿಕಿತ್ಸೆಯಿಲ್ಲ. ಇದರಿಂದಾಗಿ ಕಾಳಗಿ ಆಸ್ಪತ್ರೆ ಮೇಲ್ನೋಟಕ್ಕೆ ಮಾತ್ರ ನೋಡುಗರಿಗೆ ಅಂದವಾಗಿ ಕಂಗೊಳಿಸುತ್ತಿದ್ದು, ಆಸ್ಪತ್ರೆಯೊಳಗೆ ನರಕಯಾತನೆ ಅನುಭವಿಸುತ್ತಿರುವ ರೋಗಿಗಳಿಗೆ ಮಾತ್ರ ಗೊತ್ತು, ಈ ಆಸ್ಪತ್ರೆಯ ಗತ್ತು ಎಂಬಂತಾಗಿದೆ .
ಸಮುದಾಯ ಆರೋಗ್ಯ ಕೇಂದ್ರಕ್ಕಿಲ್ಲ ಚಿಕಿತ್ಸೆ:
ಫಾರ್ಮಾಸಿಸ್ಟ್, ಎಸ್.ಡಿ.ಸಿ, ಶಸ್ತ್ರಚಿಕಿತ್ಸಾ ತಜ್ಞ ವೈದ್ಯರು ಸೇರಿದಂತೆ ಅನುಭವಿ ವೈಧ್ಯರು ಇಲ್ಲದ ಸಮಸ್ಯೆ ಒಂದೆಡೆಯಾದರೆ, ಇದ್ದ ವೈಧ್ಯರು ಹಾಗೂ ಕೆಲಸಗಾರರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬಾರದಿರುವುದು, ರೋಗಿಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ, ನಾವಿಷ್ಟು ಜನ ಇಲ್ಲದಿದ್ದರೆ ಆಗೇನು ಮಾಡುತ್ತಿರಿ ಎಂದು ರೋಗಿಗಳಿಗೆ ಬೆದರಿಕೆ ಹಾಕುವುದರಿಂದಾಗಿ ಆಸ್ಪತ್ರೆಗೆ ಹಿಡಿಶಾಪ ಹಾಕಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವಂತಾಗಿದೆ. ಆಸ್ಪತ್ರೆಯಲ್ಲಿ ಸಾವಿರಾರು ಸಮಸ್ಯೆಗಳಿದ್ದರೂ ಕೂಡಾ ಇದುವರೆಗೂ ಟಿ.ಎಚ್.ಓ ಅಥವಾ ಡಿ.ಎಚ್.ಓ. ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಚಿತ್ತ ಹರಿಸದಿರುವುದು ವಿಪರ್ಯಾಸವೇ ಸರಿ ಎಂಬಂತಾಗಿ ಮೊದಲು ಈ ಆಸ್ಪತ್ರೆಗೆ ಚಿಕಿತ್ಸೆ ಇಲ್ಲದಂತಾಗಿದೆ.
“ಹಣವಿದ್ದರೆ ಹೆರಿಗೆ” ಇಲ್ಲ ಕಲ್ಬುರ್ಗಿಗೆ:
ತಾಲೂಕಿನ ವಿವಿಧ ಗ್ರಾಮಗಳಿಂದ ಹೆರಿಗೆಗಾಗಿ ಬರುವ ಹೆಣ್ಣು ಮಕ್ಕಳ ಗತಿ ಅಧೋಗತಿ ಎಂಬಂತೆ ಹಣ ನೀಡಿದರೆ ಮಾತ್ರ ಹೆರಿಗೆ ಸರಳವಾಗಿ ಆಗುತ್ತದೆ. ಇಲ್ಲ ಕಲ್ಬುರ್ಗಿಗೆ ಬರೆದು ಕಳಿಸುತ್ತಾರೆ ಎಂಬುದು ಸಾರ್ವಜನಿಕರ ಗೋಳು. ನಗದು ಎಂಟು ಸಾವಿರ ಕೊಟ್ಟರೆ ಮಾತ್ರ ಒಂಭತ್ತು ತುಂಬಿದ ಗರ್ಭಿಣಿಯ ಹೆರಿಗೆ ಸುಲಭ. ಇಲ್ಲವಾದರೆ ಒಂಭತ್ತು ತುಂಬಿದರೂ ಕೂಡಾ ಸರಳ ಹೆರಿಗೆಯಾಗದೆ ನರಳಾಡುತ್ತ, 108 ಇಲ್ಲದೆ ಖಾಸಗಿ ವಾಹನ ಮಾಡಿಕೊಂಡು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ತೆರಳುವುದು ಅನಿವಾರ್ಯ.
ಸರಕಾರಿ ಆಸ್ಪತ್ರೆ ಖಾಸಗಿ ಚಿಕಿತ್ಸೆ:
ಇಲ್ಲಿಯ ಆಡಳಿತ ವೈದ್ಯಾಧಿಕಾರಿಗಳಿಗೆ ಖಾಸಗಿ ಚಿಕಿತ್ಸೆ ನೀಡುವುದೆಂದರೆ ತುಂಬಾ ಇಷ್ಟ.
ತಮ್ಮ ಸರಕಾರಿ ಸೇವೆಯಲ್ಲಿರುವಾಗ ರೋಗಿಗಳಿಗೆ ತೋರಿಸದ ಗೌರವ ಮರ್ಯಾದೆ, ಖಾಸಗಿ ಮೆಡಿಕಲ್ ಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು, ತಮಗೂ ಲಾಭ. ಮೆಡಿಕಲ್ ಗಳಿಗೂ ಲಾಭ ಆಗುವಂತೆ ಆತ್ಮೀಯವಾಗಿ ರೋಗಿಗಳಿಗೆ ಚಿಕಿತ್ಸೆ ನೀಡಿ ಕೈತೊಳೆದುಕೊಳ್ಳುತ್ತಾರೆ.
ನಾನಿಲ್ಲದೆ ಈ ಆಸ್ಪತ್ರೆಗೆ ಬೆರೆ ಗತಿಯಿಲ್ಲ ಎಂಬ ಗರ್ವ ಇಲ್ಲಿಯ ಆಡಳಿತ ವೈದ್ಯಾಧಿಕಾರಿಗಳ ಧ್ಯೇಯವಾಗಿದೆ.
ತಾಲೂಕು ಕೇಂದ್ರವಿದ್ದರೂ ಮೇಲ್ದರ್ಜೆಗಿಲ್ಲ:
ಕಾಳಗಿ ತಾಲೂಕು ಕೇಂದ್ರವಾಗಿ ವರ್ಷಗಳೇ ಕಳೆದರೂ, ಇಲ್ಲಿಯ ಸಮೂದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿ ತಾಲೂಕು ಆಸ್ಪತ್ರೆಯಾಗಿಸುವ ಗೋಜಿಗೆ ಹೊಗದ ಜನಪ್ರತಿನಿಧಿಗಳು ಹಾಗೂ ಯಾವ ಸರ್ಕಾರವೂ ಮನಸ್ಸು ಮಾಡದಿರುವುದು, ಸಾರ್ವಜನಿಕರ ಆರೋಗ್ಯದ ಮೇಲೆ ಚೆಲ್ಲಾಟವಾಡುತ್ತಿವೆ.
ಮೇಲ್ದರ್ಜೆಗಿಲ್ಲದಿದ್ದರೂ ಪರವಾಗಿಲ್ಲ. ಇದ್ದ ದರ್ಜೆಯಲ್ಲಿಯೇ ಆದರೂ ಸರಿಯಾದ ಚಿಕಿತ್ಸೆ ಸಿಗದಂತಾಗಿದೆ.
ಡೆಂಗ್ಯೂ, ಮಲೇರಿಯಾದಂತಹ ಸಾಮಾನ್ಯ ಕಾಯಿಲೆಗಳ ಮುಂಜಾಗ್ರತೆಯಾದರೂ ಸಾರ್ವಜನಿಕರಿಗೆ ಮುಟ್ಟಿಸುವ ಕೆಲಸಗಳು ಸರಕಾರಿ ಆಸ್ಪತ್ರೆಯಿಂದ ಆಗುತ್ತಿಲ್ಲ. ಮುಂದಾದರೂ ಮೇಲಾಧಿಕಾರಿಗಳು ಈ ಆಸ್ಪತ್ರೆಯ ಮೇಲೆ ನಿಗಾವಹಿಸಿ, ಆಸ್ಪತ್ರೆಗೆ ಸೂಕ್ತ ಚಿಕಿತ್ಸೆ ನೀಡುತ್ತಾರೋ ಇಲ್ಲವೋ ಕಾದು ನೋಡಬೇಕಷ್ಟೆ.
ಜವಾಬ್ದಾರಿಯೂತ ಸರಕಾರಿ ಸೇವೆಯಲ್ಲಿದ್ದು, ಸಾರ್ವಜನಿಕ ಸಮೂದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾಗಿ ಬಡರೋಗಿಗಳನ್ನು ಕಡೆಗಣಿಸಿ, ಖಾಸಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡುವ ವೈಧ್ಯರು, ಖಾಸಗಿ ಗೆ ಹೂಂ…ಸರಕಾರಿ ಗೆ ಉಹೂಂ… ಎಂಬಂತಿದೆ.
-ಶ್ರೀಶೈಲ ತೆಗಲತಿಪ್ಪಿ ಸಾಮಾಜಿಕ ಕಾರ್ಯಕರ್ತ