ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಣೆಗೆ ಕರೆ
ಬ್ಯಾಡಗಿ,ಆ.30: ಪ್ರತಿ ವರ್ಷದಂತೆ ಈ ವರ್ಷವೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಶಾಂತಿ ಸೌಹಾರ್ದತೆಯಿಂದ ಗೌರಿಗಣೇಶ ಹಬ್ಬವನ್ನು ಆಚರಣೆ ಮಾಡಬೇಕೆಂದು ಸಿಪಿಐ ಮಾಹಂತೇಶ ಲಂಬಿ ಹೇಳಿದರು.
ಪಟ್ಟಣದ ಶ್ರೀ ಸಿದ್ದೇಶ್ವರ ಸಭಾಭವನದಲ್ಲಿ ಬ್ಯಾಡಗಿ ಪಟ್ಟಣ ಹಾಗೂ ತಾಲೂಕಿನಾದ್ಯಂತ ನಡೆಯುವ ಗೌರಿ ಗಣೇಶ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಡಿಜೆ ಸೌಂಡ್ ಸಿಸ್ಟಮ್‍ಗೆ ಅನುಮತಿ ನೀಡಲಾಗುವುದಿಲ್ಲ. ನಿಯಮ ಉಲ್ಲಂಘಿಸಿದ್ದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು. ಸಾರ್ವಜನಿಕರಿಗೆ ತೊಂದರೆ ಹಾಗೂ ಸಂಚಾರ ದಟ್ಟಣೆಯಾಗದಂತೆ ನೋಡಿಕೊಳ್ಳಬೇಕು. ಬಲವಂತವಾಗಿ ಚಂದಾ ವಸೂಲಿ ಮಾಡಬಾರದೆಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಫಿರೋಜಷಾ ಸೋಮನಕಟ್ಟಿ ಮಾತನಾಡಿ, ತಾಲೂಕಿನಾದ್ಯಂತ ಇನ್ನೊಬ್ಬರ ಭಾವನೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೌಹಾರ್ದತೆ ಹಾಗೂ ಶಾಂತಿಯಿಂದ ಹಬ್ಬ ಆಚರಿಸಬೇಕು. ಪಿಓಪಿ ಗಣೇಶನ ಮೂರ್ತಿ ಬದಲಾಗಿ ಪರಿಸರ ಸ್ನೇಹಿ ವಿಗ್ರಹಗಳನ್ನು ಪ್ರತಿಷ್ಠಾಪಿಸಬೇಕು. ಅಶ್ಲೀಲ ನೃತ್ಯಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದರು.
ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ರೈತ ಮುಖಂಡ ಗಂಗಣ್ಣ ಎಲಿ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ಹೆಸ್ಕಾಂ ಇಂಜನೀಯರ ಮಾಲತೇಶ ಕುರುಬಗೊಂಡ, ಅಗ್ನಿ ಶಾಮಕ ದಳದ ಎಸ್.ಎಂ. ಕುಮಾರಸ್ವಾಮಿ, ಪಿಎಸ್‍ಐ ಬಿ.ಎಸ್.ಅರವಿಂದ, ಧುರೀಣರಾದ ಸುರೇಶ ಆಸಾದಿ, ಮೌನೇಶ ಕಮ್ಮಾರ, ಪಾಂಡು ಸುತಾರ ಸೇರಿದಂತೆ ವಿವಿಧ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.