ಗಣೇಶ ಚತುರ್ಥಿ ಸೌಹಾರ್ಧ ಸಭೆಮಾರ್ಗದರ್ಶನ ಪಾಲನೆಗೆ ಎಸ್‌ಪಿ ಕರೆ
ರಾಯಚೂರು, ಆ. ೩೦-ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಚಿಸಿರುವ ಎಲ್ಲಾ ಮಾರ್ಗದರ್ಶನ ಪಾಲಿಸುವ ಮೂಲಕ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪಾದವಿಲ್ಲದಂತೆ ಶಾಂತಿಯುತವಾಗಿ ಗಣೇಶ ಚತುರ್ಥಿ ಆಚರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ತಿಳಿಸಿದರು.
ಅವರು ನಗರದ ಸದಾರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಅಂಗವಾಗಿ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಧಾರ್ಮಿಕ ಆಚರಣೆಗಳು ಶಾಂತಿ ಹಾಗೂ ಸೌಹಾರ್ಧಯುತವಾಗಿ ಜರುಗಬೇಕು. ಪರಸ್ಪರ ಅನ್ಯೋನ್ಯತೆಯಿಂದ ಧಾರ್ಮಿಕ ಆಚರಣೆಗಳು ನಡೆಯಬೇಕು.
ಈ ನಿಟ್ಟಿನಲ್ಲಿ ಗಣೇಶ ಚತುರ್ಥಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಚಿಸಿರುವ ಮಾರ್ಗದರ್ಶನಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ಗಣೇಶ ಚತುರ್ಥಿ ಆಚರಣೆ ವೇಳೆ ಹಾಕುವ ಪೆಂಡಾಲ್ ಗಳಿಂದ ಸಂಚಾರಕ್ಕೆ ಅಡಚಡಣೆಯಾಗಬಾರದು. ವಿದ್ಯುತ್ ಸಂಪರ್ಕಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದುಕೊಂಡಿರಬೇಕು. ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪೂಜಿಸಿ, ವಿಸರ್ಜಿಸಬೇಕು ಎಂದರು.
ಪೆಂಡಾಲ್‌ಗಳಲ್ಲಿ ನಿಗದಿತ ವರದಿ ಹೊರತುಪಡಿಸಿ, ಧ್ವನಿವರ್ಧಕಗಳನ್ನು ಬಳಸಬಾರದು. ಹೆಚ್ಚು ಶಬ್ಧದ ಮೂಲಕ ಶಬ್ಧಮಾಲಿನ್ಯ ಉಂಟು ಮಾಡಬಾರದು. ಶಾಂತಿ, ಸೌಹಾರ್ಧತೆಗೆ ಧಕ್ಕೆಯಾಗದಂತೆ ಯಾವುದೇ ಪೋಸ್ಟರ್ ಹಾಗೂ ಭಿತ್ತಿಪತ್ರಗಳನ್ನು ಬಳಸಬಾರದು ಎಂದ ಅವರು ಶಾಂತಿಯುತ ಆಚರಣೆಗೆ ಹೆಚ್ಚು ಗಮನಹರಿಸಬೇಕು. ಯಾವುದೇ ಘಟನೆಗಳು ಶಾಂತಿಗೆ ಭಂಗ ಉಂಟು ಮಾಡಿದರೆ ತಕ್ಷಣ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕೆಂದರು.
ಕೆಲವು ಸಂದರ್ಭಗಳಲ್ಲಿ ಆರೋಗ್ಯ ಹಿತದೃಷ್ಟಿಯಿಂದ ಚತುರ್ಥಿ ಆಚರಣೆ ವೇಳೆ ತುರ್ತು ಸೇವೆಗಾಗಿ ಆಂಬ್ಯುಲೆನ್ಸ್ ಹಾಗೂ ವೈದ್ಯಕೀಯ ಸೇವೆಗಳು ಕೈಗೊಂಡಿರಬೇಕೆಂದು ಸಲಹೆ ನೀಡಿದರು.
ಗಣೇಶ ಮೂರ್ತಿಗಳ ವಿಸರ್ಜನೆ ದಿನದಂದು ಈಗಾಗಲೇ ಇಲಾಖೆ ನಿಗಡಿಪಡಿಸಿರುವ ಮಾರ್ಗದಲ್ಲೇ ಸಂಚರಿಸಬೇಕು. ಎಷ್ಟು ಎತ್ತರದ ಮೂರ್ತಿಗಳ ಬಳಕೆ ಹಾಗೂ ಅಲಂಕಾರ ಮಾಡಬಾರದು ಎಂದ ಅವರು, ಎಲ್ಲ ಸಮಯದಲ್ಲಿ ಶಾಂತಿ ಸೌಹಾರ್ಧತೆಗೆ ಹೆಚ್ಚು ಒತ್ತು ನೀಡಬೇಕೆಂದು ಕರೆ ನೀಡಿದರು.
ನಂತರ ಗಣೇಶ ಮೂರ್ತಿ ವಿಸರ್ಜಿಸುವ ಮಾವಿನಕೆರೆ ತೆರಳಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಅಧೀಕ್ಷಕ ಡಾ. ಶಿವಕುಮಾರ್, ಜಿ. ಹರೀಶ್, ಉಪವಿಭಾಗ ಅಧೀಕ್ಷ ಸತ್ಯ ನಾರಾಯಣ , ಸಿಪಿಐ ನಾಗರಾಜ್ ಮೇಕಾ, ಪಿಐ ಉಮೇಶ್ ಇನ್ ಕಾಮ್ಲೆ, ಪಿಎಸ್ ಐಗಳಾದ ಮಂಜುನಾಥ್, ಚಂದ್ರಪ್ಪ, ಅನಿತಾ, ವೆಂಕಟೇಶ್, ತಹಶೀಲ್ದಾರ್ ಅನ್ವರ್, ನಗರಸಭೆ ಅಭಿಯಾಂತರ ಜೈಪಾಲ್ ರೆಡ್ಡಿ, ಅಗ್ನಿಶಾಮಕ ಸಿಪಿಐ ರವೀಂದ್ರ, ವಕ್ಫ್ ಫರಿನ್ ಖಾನ್, ಮುಖಂಡರಾದ ಶ್ರೀನಿವಾಸ ಪತಂಗೇ, ಅಶೋಕ್ ಜೈನ್, ಅಂಭಾಜಿ ರಾವ್, ಕೆ. ಕುಮಾರ್, ಜಸ್ವಂತ್ ರಾವ್, ಕಲ್ಯಾಣ ಕರ್, ಅಶೋಕ್ ಶೆಟ್ಟಿ, ಮಹಾವೀರ್, ಖಾಜಾ ಅಸ್ಲಂ, ರಸೂಲ್ ಸಾಬ್, ಲಿಯಾಕತ್, ಮಸೂಮ್ ಖಾಲಾ ಗೌಸ್ ಇತರರು ಇದ್ದರು