ಕಳಪೆ ಡಾಂಬರೀಕರಣ ಕ್ರಮಕ್ಕೆ ಒತ್ತಾಯ
(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಆ.೩೦:ನಗರದ ಸತ್ಯನಾಥ ಕಾಲೋನಿ ವಾಡ್, ನಂ. ೧೩ರಲ್ಲಿ ಕಳಪೆ ಡಾಂಬರೀಕರಣ ಕೈಗೊಂಡಿರುವುದರಿಂದ ಬಿಲ್ ಪಾವತಿ ತಡೆಹಿಡಿದು ಹಿರಿಯ-ಕಿರಿಯ ಅಭಿಯಂತರರ ಮುಂಬಡ್ತಿಯನ್ನೂ ಸಹ ತಡೆ ಹಿಡಿಯಬೇಕೆಂದು ಅಖಿಲ ಭಾರತ ಡಾ.ಬಿ.ಆರ್. ಅಂಬೇಡ್ಕರ್ ಸೈನ್ಯ ಒತ್ತಾಯಿಸಿದೆ.
ವಾ.ನಂ. ೧೩ರಲ್ಲಿ ಕೈಗೊಂಡಿರುವ ಡಾಂಬರೀಕರಣ ಕಳಪೆ ಮಟ್ಟದಾಗಿದೆ. ಚುನಾವಣೆ ನೀತಿ ಸಂಹಿತೆ ಅವಧಿಯಲ್ಲಿ ಮನಸ್ಸಿಗೆ ಬಂದ ಹಾಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.
ಕಿರಿಯ ಅಭಿಯಂತರರು ಕಾಮಗಾರಿಯನ್ನು ಪರಿಶೀಲಿಸಿಲ್ಲ. ಆದರೆ, ಬಿಲ್ ಪಾವತಿಗೆ ವರದಿ ಸಲ್ಲಿಸಿದ್ದಾರೆ. ಗುತ್ತೇದಾರರೊಮದಿಗೆ ಶಾಮೀಲಾಗಿ ಕಮಿಷನ್ ಪಡೆದು ಬಿಲ್ ಪಾವತಿಗೆ ಸಹಕರಿಸುತ್ತಿದ್ದಾರೆ. ಕೂಡಲೇ ಈ ಕಾಮಗಾರಿಯನ್ನು ಉನ್ನತಮಟ್ಟದ ಅಧಿಕಾರಿಗಳ ತನಿಖೆಗೆ ಒಳಪಡಿಸಬೇಕು. ಈಗಾಗಲೇ ಈಸಂಬಂಧ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಮಿತಿ ಆರೋಪಿಸಿದೆ.
ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಬಂಧಪಟ್ಟ ಅಭಿಯಂತರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡ ಕೆ.ಇ. ಕುಮಾರ್, ವಿಭಾಗೀಯ ಅಧ್ಯಕ್ಷ ಹನುಮಂತ,ಸತ್ಯರಾಜ್, ವೆಂಕಟೇಶ್, ಜುಲಾಲ್, ಅನ್ವರ್,ಹುಡ್ಕುಂದ, ಪ್ರಭಾಕರ್ ಸೇರಿದಂತೆ ಇತರರು ಇದ್ದರು.